ಮೈಸೂರು,ಜುಲೈ,10,2025 (www.justkannada.in): ಅಸಲಿ ವ್ಯಕ್ತಿ ಇದ್ದರೂ ಸಹ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದ ಐವರು ನಕಲಿ ವ್ಯಕ್ತಿಗಳು ಕೊನೆಗೂ ಸಿಕ್ಕಿಬಿದ್ದಿದ್ದು ಇದೀಗ ಇವರ ವಿರುದ್ದ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಪೂರ್ವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಮೈಸೂರಿನ ನೆಹರೂ ನಗರದ ನಿವಾಸಿಗಳಾದ ಉಮೇರಾಖಾನಂ, ಸೈಯದ್ ಇರ್ಫಾನ್, ಸಲ್ಮಾ ಸುಲ್ತಾನ,ಅಕ್ರಮ್ ಹಾಗೂ ಜೋಹರ್ ಆಲಮ್ ವಿರುದ್ದ ಪ್ರಕರಣ ದಾಖಲಾಗಿದೆ. ಐವರು ಸಹ ಗಾಯಿತ್ರಿಪುರಂ ನಿವಾಸಿ ಉಮೇರಾಖಾನಂ ಎಂಬುವರ ಹೆಸರಿನಲ್ಲಿದ್ದ ಆಸ್ತಿ ಲಪಟಾಯಿಸಲು ಸಂಚು ರೂಪಿಸಿದ್ದರು.
ಈ ಸಂಬಂಧ ಐವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಉಪನೊಂದಣಾಧಿಕಾರಿ ಹೆಚ್.ಎಲ್.ನಾಗರಾಜು ಅವರು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ
ಗಾಯಿತ್ರಿಪುರಂ ನ ಉಮೇರಾಖಾನಂ ಅವರು ಮೈಸೂರು ತಾಲೂಕು ಕಸಬಾ ಹೋಬಳಿ ರಮ್ಮನಹಳ್ಳಿ ಗ್ರಾಮ ಸರ್ವೆ ನಂ.201/1 ರ 1 ಎಕ್ರೆ 7 ಗುಂಟೆ ಹಾಗೂ ರಮ್ಮನಹಳ್ಳಿ ಗ್ರಾಮ ಸರ್ವೆ ನಂ.210/4 ರ 1 ಎಕ್ರೆ 5 ಗುಂಟೆ ಜಮೀನಿನ ಮಾಲೀಕರಾಗಿದ್ದಾರೆ. ಈ ಆಸ್ತಿಯನ್ನ ತಮ್ಮದೆಂದು ದಾಖಲೆ ಸೃಷ್ಟಿಸಿದ್ದ ನೆಹರೂ ನಗರದ ನಕಲಿ ಉಮೇರಾಖಾನಂ ಅವರು ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಗಳನ್ನ ಸಲ್ಲಿಸಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ಮುದ್ರಾಂಕ ಶುಲ್ಕ ಹಾಗೂ ನೊಂದಣಿ ಶುಲ್ಕ ಪಾವತಿಸಿ ತಮ್ಮ ಮಗಳ ಹೆಸರಿನಲ್ಲಿ ಎರಡು ಪ್ರತ್ಯೇಕ ದಾನಪತ್ರ ಮಾಡಿ ನೊಂದಣಿ ಮಾಡಿಸಿದ್ದರು.
ಇದಾದ ಬಳಿಕ ಈ ಆಸ್ತಿ ಕಬಳಿಸಲು ಸಂಚು ರೂಪಿಸಿರುವ ಬಗ್ಗೆ ಉಪನೊಂದಣಾಧಿಕಾರಿಗೆ ದೂರು ಬಂದಿದ್ದು ಹಿರಿಯ ಉಪನೊಂದಣಾಧಿಕಾರಿ ನಾಗರಾಜು ಅವರು ದಾಖಲೆಗಳನ್ನ ಪರಿಶೀಲಿಸಿದ್ದಾರೆ.
ಪರಿಶೀಲನೆ ವೇಳೆ ಇದು ನಕಲಿ ಎಂದು ಖಚಿತವಾಗಿದ್ದು ನಾಗರಾಜು ಅವರು ಖುದ್ದಾಗಿ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಕಲಿ ವ್ಯಕ್ತಿ ಹಾಗೂ ಇದಕ್ಕೆ ಸಹಕರಿಸಿದವರು ಸೇರಿದಂತೆ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
Key words: property, Fake, Case, registered, against, five Member, Mysore
The post ಆಸ್ತಿ ಕಬಳಿಕೆಗೆ ಸಂಚು: ಐವರ ವಿರುದ್ದ ಪ್ರಕರಣ ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.