ಬೆಂಗಳೂರು,ಮಾರ್ಚ್,11,2026 (www.justkannada.in): ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಜೀವನ ನಿರ್ವಹಣೆಗಾಗಿ 50 ಸಾವಿರ ರೂ. ಭತ್ಯೆ, ಉಚಿತ ವಸತಿ ಹಾಗೂ ಸ್ವಯಂ ಉದ್ಯೋಗಕ್ಕೆ 5 ಲಕ್ಷ ರೂ. ನೆರವು ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭರವಸೆ ನೀಡಿದರು.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್ ನಿಯಮ 72ರಡಿ ಆ್ಯಸಿಡ್ ದಾಳಿಗೊಳಗಾದ ಮಹಿಳೆಯರ ಸಂಕಷ್ಟಗಳನ್ನು ಬಿಚ್ಚಿಟ್ಟುರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ, ಕಾಂಗ್ರೆಸ್ ಸದಸ್ಯರು, ರಾಜ್ಯ ಸರಕಾರ ಧಾವಿಸಬೇಕು ಎಂದು ಒಕ್ಕೂರಲಿನಿಂದ ಒತ್ತಾಯಿಸಿದರು.
ಈ ಬಗ್ಗೆ ಪರಿಷತ್ ನಲ್ಲಿ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆ್ಯಸಿಡ್ ದಾಳಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಅವರ ಬದುಕನ್ನ ಮತ್ತೆ ಕಟ್ಟಿಕೊಡಲು ಸರ್ಕಾರ ಬದ್ಧವಾಗಿದೆ. “2022ರ ಏ.11ರಂದು ಹೊರಡಿಸಿರುವ ಆದೇಶದಂತೆ ಸದ್ಯ 59 ಮಂದಿಗೆ ಮಾತ್ರ ಮಾಸಿಕ ತಲಾ 10 ಸಾವಿರ ರೂ. ಪಿಂಚಣಿ ನೀಡಲಾಗುತ್ತಿದೆ. ಇದನ್ನು 50 ಸಾವಿರಕ್ಕೆ ಹೆಚ್ಚಿಸಿ, ಎಲ್ಲ 169 ಮಂದಿ ಸಂತ್ರಸ್ತರಿಗೂ ನೀಡಲು ಸಿಎಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೊಂದಿಗೆ ಚರ್ಚಿಸ ಲಾಗುವುದು “ಆದಷ್ಟು ಶೀಘ್ರವಾಗಿ ಎಲ್ಲ 169 ಮಂದಿಗೂ ಅವರ ವಾಸ ಸ್ಥಳಗಳಲ್ಲೇ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಸ್ವಯಂ ಉದ್ಯೋಗಕ್ಕಾಗಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 5 ಲಕ್ಷ ರೂ. ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಇದರ ಬದಲಿಗೆ ಅನುದಾನದ ರೂಪದಲ್ಲಿ 5 ಲಕ್ಷ ರೂ. ನೆರವು ನೀಡಲಾಗುವುದು. ಆ್ಯಸಿಡ್ ಮಾರಾಟಕ್ಕೂ ಕಡಿವಾಣ ಹಾಕಲಾಗುವುದು,” ಎಂದು ತಿಳಿಸಿದರು.
ಆ್ಯಸಿಡ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆ ಇರುವ ಕುರಿತು ಪರಿಶೀಲಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಪೊಲೀಸರೇ ಸಂತ್ರಸ್ತರ ಮನೆಗೆ ತೆರಳಿ ಹೇಳಿಕೆ ಪಡೆದು, ಕೃತ್ಯವೆಸಗಿದವರ ವಿರುದ್ಧ ಎಫ್ ಐಆರ್ ದಾಖಲಿಸಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, “ಆ್ಯಸಿಡ್ ದಾಳಿ ಪ್ರಕರಣಗಳ ಶೀಘ್ರ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು,” ಎಂದರು
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, “ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ 2 ಲಕ್ಷ ರೂ. ಗಳವರೆಗೆ ಪರಿಹಾರ ನೀಡಲಾಗುವುದು,” ಎಂದು ಘೋಷಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಹೇಮಲತಾ ನಾಯಕ್, ಭಾರತಿ ಶೆಟ್ಟಿ, ಪೂಜಾರ್, ಉಮಾಶ್ರೀ ಧ್ವನಿಗೂಡಿಸಿ ಸಂತ್ರಸ್ತರಿಗೆ ಸೂಕ್ತಪರಿಹಾರ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.
Key words: acid victims, allowance, Minister Dr. G. Parameshwar, K.Shivakumar
The post ಆ್ಯಸಿಡ್ ಸಂತ್ರಸ್ತರಿಗೆ 50 ಸಾವಿರ ರೂ. ಭತ್ಯೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




