ಬೆಂಗಳೂರು ಮಾರ್ಚ್,11,2025 (www.justkannada.in): ಬಸವಣ್ಣನವರ ಕಾಯಕ-ದಾಸೋಹ ಪರಿಕಲ್ಪನೆಯಲ್ಲಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗಾಗಿ ಮಾತ್ರ ಸಜ್ಜುಗೊಳಿಸಿರುವ 135 “ಸಂಚಾರಿ ಆರೋಗ್ಯ ಘಟಕ” ಆ್ಯಂಬುಲೆನ್ಸ್ ವಾಹನಗಳನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ಕೊಡುವ 135 ಸಂಚಾರಿ ಆಸ್ಪತ್ರೆಗಳು ಇವಾಗಿವೆ.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಮಾಜದಲ್ಲಿ ದುಡಿಯುವ ವರ್ಗ ಒಂದು ಕಡೆ ಇದ್ದರೆ, ದುಡಿಸಿಕೊಳ್ಳುವ ವರ್ಗ ಮತ್ತೊಂದು ಕಡೆ ಇರುತ್ತದೆ. ಯಾರು ಉತ್ಪಾದನಾ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೋ ಅವರೇ ದೇಶ ನಿರ್ಮಾತೃಗಳು ಎಂದರು.
ಇಡೀ ದೇಶ ಕಾರ್ಮಿಕರ ಶ್ರಮವನ್ನು ಅವಲಂಬಿಸಿದೆ. ಸಮಾಜದಲ್ಲಿ ಒಂದೇ ವರ್ಗದವರು ದುಡಿಯುತ್ತಿರಬಾರದು, ಎಲ್ಲಾ ವರ್ಗದವರೂ ದುಡಿಯಬೇಕು. ಆಗ ಮಾತ್ರ ಬುದ್ದ, ಬಸವ, ಅಂಬೇಡ್ಕರ್ ಆಶಯದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಚಿವ ಸಂತೋಷ್ ಲಾಡ್ ಅವರ ಕಾಳಜಿ ಮತ್ತು ಕರ್ತವ್ಯ ಪ್ರಜ್ಞೆಯಿಂದಾಗಿ ಉಚಿತ ಸಂಚಾರಿ ಆಸ್ಪತ್ರೆಗಳನ್ನು ಜಾರಿಗೊಳಿಸಲಾಗಿದೆ. ಕಾರ್ಮಿಕರ ಸೆಸ್ ಹಣದಿಂದ ಕಾರ್ಮಿಕ ಕಲ್ಯಾಣ ಮಂಡಳಿ ಸುಸಜ್ಜಿತ ಸಂಚಾರಿ ಆಸ್ಪತ್ರೆಗಳನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣದಿಂದ ಸರ್ಕಾರ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಊಟ ಮತ್ತು ವಸತಿ ಶಾಲೆಗಳನ್ನು ತೆರೆಯಲಿದೆ ಎಂದು ಘೋಷಿಸಿದರು. ಇವೆಲ್ಲಾ ಸವಲತ್ತುಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
Key words: 135 Mobile Health Unit, ambulances, construction workers, CM Siddaramaiah
The post ಕಟ್ಟಡ ಕಾರ್ಮಿಕರಿಗಾಗಿ 135 “ಸಂಚಾರಿ ಆರೋಗ್ಯ ಘಟಕ” ಆ್ಯಂಬುಲೆನ್ಸ್ ಲೋಕಾರ್ಪಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




