ಮೈಸೂರು,ಜುಲೈ,8,2025 (www.justkannada.in): ಸಚಿವ ಶಿವರಾಜ ತಂಗಡಗಿ ಅವರು ಗಾಣಿಗ ಸ್ವಾಮೀಜಿಯ ಮಠದ ಅನುದಾನದಲ್ಲಿ ಕಮಿಷನ್ ಕೇಳಿದ್ದಾರೆ. ಇದು ಈಗಾಗಲೇ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಕಿಡಿಕಾರಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಶಾಸಕ ಶ್ರೀವತ್ಸ, ಶಿವರಾಜ ತಂಗಡಗಿ ಮಠದ ಅನುದಾನದಲ್ಲಿ ಕಮಿಷನ್ ಕೇಳಿರುವ ಬಗ್ಗೆ ಸ್ವತಃ ಸ್ವಾಮೀಜಿ ಹೇಳಿದ್ದಾರೆ. ಕೋರ್ಟ್ ಬಳಿ ಹೋಗಿ ಹಣ ರಿಲೀಸ್ ಮಾಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ. ಇದು ನಮ್ಮ ಸರ್ಕಾರದಲ್ಲಿ ಬೊಮ್ಮಾಯಿ ಮೀಸಲಿಟ್ಟ ಹಣ. ಅದನ್ನು ಬಿಡುಗಡೆ ಮಾಡಲು ಸಚಿವ ಶಿವರಾಜ್ ತಂಗಡಗಿ ಕಮಿಷನ್ ಕೇಳುತ್ತಾರೆ ಇದನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದರು.
ಶಿವರಾಜ್ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು. ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ಮಾಡದೆ ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಕಲಾವಿದರಿಗೆ ಕಲಾತಂಡಗಳಿಗೆ ಹಣ ಕೊಡಬೇಕು. ನಮ್ಮ ಜಿಲ್ಲೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಹಣ ಇಲ್ಲ. ಈ ಸರ್ಕಾರದಲ್ಲಿ ಏನು ಮಾಡಿದರೂ ನಾವು ತಪ್ಪಿಸಿಕೊಳ್ಳಬಹುದು ಎಂದು ತಿಳಿದುಕೊಂಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಶಿವರಾಜ್ ತಂಗಡಗಿ ಅವರದ್ದು. ರಾಜ್ಯದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಶಾಸಕ ಶ್ರೀವತ್ಸ ವಾಗ್ದಾಳಿ ನಡೆಸಿದರು.
ಬಸವರಾಜ್ ರಾಯರೆಡ್ಡಿ ಅಕ್ಕಿ ಬೇಕಾ ರಸ್ತೆ ಬೇಕಾ ಅಂತ ಜನರನ್ನು ಕೇಳುತ್ತಾರೆ. ಆದರೆ ಎಲ್ಲಾ ಬೇಕು ಅಂತಾನೇ ಜನ ನಿಮ್ಮನ್ನು ಗೆಲ್ಲಿಸಿದ್ದಾರೆ. ಇಲ್ಲದಿದ್ದರೆ ನಿಮಗೆ 136 ಸೀಟು ಬರುತ್ತಿರಲಿಲ್ಲ. ಎಲ್ಲಾ ಶಾಸಕರು ಕೂಡ ಸರ್ಕಾರದ ವಿರುದ್ಧ ಸಿಡಿಯುತ್ತಿದ್ದಾರೆ. ರಾಜು ಕಾಗೆ, ಬಿ.ಆರ್ ಪಾಟೀಲ್ ಕೂಡ ತಮ್ಮದೇ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಶಾಸಕರಿಗೆ ಈಗ ಅರ್ಥ ಆಗುತ್ತಿದೆ ಅಭಿವೃದ್ದಿ ಬೇಕು ಅಂತ. ಮುಂದಿನ ದಿನಗಳಲ್ಲಿ ಇದು ಮತ್ತೆ ಜಾಸ್ತಿ ಆಗತ್ತೆ ನವೆಂಬರ್ ಕ್ರಾಂತಿ ಆಗತ್ತೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಶಾಸಕರ ಹೇಳಿಕೆ ನೋಡಿದರೇ ಇನ್ನೂ ಬೇಗ ಕ್ರಾಂತಿ ಆದರೂ ಆಗಬಹುದು ಎಂದು ಶಾಸಕ ಶ್ರೀವತ್ಸ ಹೇಳಿದರು
ರಾಜ್ಯ ಸರ್ಕಾರ ಸೆಸ್ಕ್ ನಲ್ಲಿ ಹಣ ಬಾಕಿ ಉಳಿಸಿಕೊಂಡಿದೆ. ಕೆಎಸ್ ಆರ್ ಟಿಸಿ ಇಲಾಖೆಗೆ ಹಣ ಬಾಕಿ ಉಳಿಸಿಕೊಂಡಿದೆ. ಈಗ ಅನ್ನಭಾಗ್ಯ ಆಹಾರಧಾನ್ಯ ಸರಬರಾಜು ಮಾಡುವ ಲಾರಿಗಳ ಹಣ ಕೂಡ ಬಾಕಿ ಉಳಿಸಿಕೊಂಡಿದೆ ಎಂದು ಹರಿಹಾಯ್ದರು.
ಶಾಸಕರ ಅನುದಾನ ಹಂಚಿಕೆಯಲ್ಲೂ ತಾರತಮ್ಯ
ಸರ್ಕಾರದಿಂದ ಶಾಸಕರ ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗಿದೆ. ಮೈಸೂರಿನಲ್ಲಿ ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಕೃಷ್ಣರಾಜ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಬಿಜೆಪಿ ಶಾಸಕ ಇರುವ ಕೃಷ್ಣರಾಜ ಕ್ಷೇತ್ರಕ್ಕೆ ಜೀರೋ ಅನುದಾನ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಂಕಿಅಂಶಗಳ ಸಮೇತ ಶಾಸಕ ಶ್ರೀವತ್ಸ ಕಿಡಿಕಾರಿದರು.
ದಾವಣಗೆರೆಯಲ್ಲಿ ಯಾವುದೇ ಭಿನ್ನಮತದ ಸಭೆ ಏನಿಲ್ಲ- ಮಾಜಿ ಶಾಸಕ ಎಲ್.ನಾಗೇಂದ್ರ
ದಾವಣಗೆರೆಯಲ್ಲಿ ಬಿಜೆಪಿ ರಿಬೆಲ್ಸ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಮಾಜಿ ಶಾಸಕ ಎಲ್.ನಾಗೇಂದ್ರ, ದಾವಣಗೆರೆಯಲ್ಲಿ ಯಾವುದೇ ಭಿನ್ನಮತದ ಸಭೆ ಏನಿಲ್ಲ. ಮಾಜಿ ಸಂಸದರ ಜನ್ಮದಿನದ ಆಚರಣೆ ಮಾಡುತ್ತಿದ್ದಾರೆ ಅಷ್ಟೇ. ಇನ್ನು 10 ದಿನವ ಒಳಗೆ ರಾಜ್ಯದಲ್ಲಿ ಅಧ್ಯಕ್ಷರ ಘೋಷಣೆ ಆಗತ್ತೆ ಎಂದರು.
Key words: commission, minister, Math, grant, MLA, Srivatsa
The post ಮಠದ ಅನುದಾನದಲ್ಲೂ ಸಚಿವರಿಂದ ಕಮಿಷನ್ ಬೇಡಿಕೆ: ಶಾಸಕ ಶ್ರೀವತ್ಸ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.