ಮೈಸೂರು,ಜುಲೈ, 3,2025 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸೆಪ್ಟಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನ ಕಟ್ಟಲು ಅರಣ್ಯ ಇಲಾಖೆ ಕಸರತ್ತು ನಡೆಸುತ್ತಿದ್ದು, ಹೆಣ್ಣಾನೆಗಳ ಆಯ್ಕೆ ಪ್ರಕ್ರಿಯೆ ಸೂಕ್ಷ್ಮತೆ ಪ್ರದರ್ಶಿಸಿ ಇದೇ ಮೊದಲ ಬಾರಿಗೆ ಅವುಗಳಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ತೀರ್ಮಾನಿಸಿದೆ.
ಈ ಬಾರಿ ದಸರಾ ಮಹೋತ್ಸವಕ್ಕೆ ಕರೆತರಲು ಐದು ಹೆಣ್ಣಾನೆಗಳನ್ನು ಪರಿಶೀಲಿಸಲಾಗಿದ್ದು, ದುಬಾರೆಯಿಂದ ಹೇಮಾವತಿ, ಭೀಮನಕಟ್ಟೆ ಕ್ಯಾಂಪ್ ನಿಂದ ರೂಪ, ಬಳ್ಳೆ ಕ್ಯಾಂಪ್‌ನಿಂದ ದೊಡ್ಡಹರವೆ ಲಕ್ಷ್ಮಿ, ಬಂಡೀಪುರ ಹಳೆ ಕ್ಯಾಂಪಸ್‌ನಿಂದ ಹಿರಣ್ಯ, ಲಕ್ಷ್ಮಿ ಆನೆಯ ಲದ್ದಿ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಣಸೋಲಿ ಆನೆ ಶಿಬಿರದಲ್ಲಿರುವ ಹೆಣ್ಣಾನೆಗಳನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಆ ಕ್ಯಾಂಪ್ ನಲ್ಲಿ ಚಾಮುಂಡೇಶ್ವರಿ ಆನೆ ಸೇರಿದಂತೆ ಮತ್ತೊಂದು ಆನೆ ಪರಿಶೀಲಿಸಲು ಅರಣ್ಯಾಧಿಕಾರಿಗಳ ತಂಡ ಶೀಘ್ರವೆ ದಾಂಡೇಲಿಗೆ ತೆರಳಲಿದೆ.
ನಾಲ್ಕು ವರ್ಷಗಳ ಹಿಂದೆ ದಸರಾ ಮಹೋತ್ಸವಕ್ಕೆ ಕರೆತರಲಾಗಿದ್ದ ಲಕ್ಷ್ಮೀ ಆನೆ ಅರಮನೆ ಆವರಣದಲ್ಲಿಯೇ ಗಂಡು ಮರಿಯೊಂದಕ್ಕೆ ಜನ್ಮ ನೀಡಿತ್ತು. ಇದರಿಂದ ಪ್ರಾಣಿ ಪ್ರಿಯರೂ ಸೇರಿದಂತೆ ಕೆಲ ಸಂಘ-ಸಂಸ್ಥೆಗಳು ಪ್ರತಿಭಟನೆ ಮಾಡಿ, ಗರ್ಭಿಣಿ ಆನೆಯನ್ನು ಕರೆತಂದು ಪ್ರಮಾದ ಎಸಗಲಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಹೆಣ್ಣಾನೆಗಳ ಆಯ್ಕೆ ಪ್ರಕ್ರಿಯೆಯೇ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿರುವುದರಿಂದ ಹೊಸ ಹೊಸ ಪರೀಕ್ಷಾ ವಿಧಾನದ ಮೂಲಕ ಸುರಕ್ಷತೆಯ ಆಯ್ಕೆಗೆ ಮುಂದಾಗಿದೆ. ಇದೇ ಮೊದಲ ಬಾರಿಗೆ ಗುರುತಿಸಲ್ಪಟ್ಟಿರುವ ಹೆಣ್ಣಾನೆಗಳಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಗಜಪಡೆಯಲ್ಲಿ ಸ್ಥಾನ ನೀಡಲು ಗುರುತಿಸಿರುವ ಹೆಣ್ಣಾನೆಗಳ ಲದ್ದಿಯನ್ನು ಸಂಗ್ರಹಿಸಿ, ಅದನ್ನು ಒಣಗಿಸಿ ಪುಡಿ ಮಾಡಿ ಪರೀಕ್ಷೆಗೆ ಒಳಪಡಿಸಿದಾಗ ಹೆಣ್ಣಾನೆಗಳ ಗರ್ಭಾವಸ್ಥೆ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ. ಈ ಪರೀಕ್ಷೆಯಲ್ಲಿ ಶೇ.1ಕ್ಕಿಂತ ಹೆಚ್ಚಿನ ಪ್ರಮಾಣದ ವರದಿ ದಾಖಲಾದರೆ ಗರ್ಭಿಣಿ ಎಂದರ್ಥ. ಶೇ.1ಕ್ಕಿಂತ ಕಡಿಮೆ ಪ್ರಮಾಣದ ವರದಿ ಬಂದರೆ ಯಾವುದೇ ತೊಂದರೆ ಇಲ್ಲದೆ ದಸರಾಗೆ ಕರೆತರಬಹುದು ಎಂದರ್ಥ. ಶೂನ್ಯ ಪ್ರಮಾಣದ ವರದಿ ದಾಖಲಾದರೆ ಅವು ಗರ್ಭಿಣಿಯಾಗಿಲ್ಲ ಎಂದರ್ಥ.
ಈಗಾಗಲೇ ಪ್ರಯೋಗಾಲಯಕ್ಕೆ ಹೆಣ್ಣಾನೆಗಳ ಲದ್ದಿ ಸ್ಯಾಂಪಲ್ ಕಳುಹಿಸಲಾಗಿದೆ. ಈ ವರದಿ ಬರಲು ಎರಡು ವಾರ ಬೇಕಾಗುತ್ತದೆ. ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಪರಿಪಕ್ವವಾಗಿದ್ದು, ಅರಣ್ಯ ಇಲಾಖೆ ಈ ವರದಿಗಾಗಿ ಕಾಯುತ್ತಿದ್ದು ವರದಿ ಬಂದ ಮೇಲೆ ಅಂತಿಮ ಪಟ್ಟಿ ತಯಾರಾಗುತ್ತದೆ.
ಹೆಣ್ಣಾನೆಗಳಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ದಸರಾ ಗಜಪಡೆಯ ಹೆಣ್ಣಾನೆಗಳಿಗೆ ಪ್ರತಿವರ್ಷದಂತೆ ಈ ಬಾರಿ ಮೂತ್ರ ಹಾಗೂ ರಕ್ತ ಪರೀಕ್ಷೆ ಮಾಡಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲಾಗುತ್ತಿದ್ದು, ಈ ಪರೀಕ್ಷೆ ನಿಖರವಾಗಿದ್ದು, ಹೆಣ್ಣಾನೆಗಳು ಗರ್ಭಿಣಿಯಾಗಿರುವ ಖಚಿತ ಮಾಹಿತಿ ಲಭ್ಯವಾಗುತ್ತದೆ. ಈಗಾಗಲೇ ಸ್ಯಾಂಪಲ್ ಕಳುಹಿಸಲಾಗಿದ್ದು, ಬರದಿ ಬರಲು ಎರಡು ವಾರ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
Key words: Mysore Dasara-2025, Fecal Pregnancy Test, Female Elephant
The post ಮೈಸೂರು ದಸರಾ: ಗಜಪಡೆಯ ಹೆಣ್ಣಾನೆಗಳಿಗೆ ‘ಫೀಕಲ್ ಪ್ರೆಗ್ನೆನ್ಸಿ ಟೆಸ್ಟ್’ಗೆ ತೀರ್ಮಾನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.