ಮೈಸೂರು, ಮೇ, 22,2025 (www.justkannada.in): ಸಾಲ ಮಾಡಿ ಮದುವೆ ಆಗಬೇಡಿ ಸರಳವಾಗಿ ಮದುವೆ ಆಗುವ ಮೂಲಕ ಎಲ್ಲರಿಗೂ ಮಾದರಿ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಅವರು ತಿಳಿಸಿದರು.
ಇಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಜಿಲ್ಲಾಡಳಿತ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಮದುವೆಗೆ ದುಂದು ವೆಚ್ಚ ಮಾಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದನ್ನು ತಪ್ಪಿಸಲು ಆರಂಭಿಸಿರುವ ಯೋಜನೆ ಇದಾಗಿದೆ. ಮಾಂಗಲ್ಯ ಭಾಗ್ಯ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. 2020ರಿಂದ ಮಾಂಗಲ್ಯ ಭಾಗ್ಯ ಯೋಜನೆ ಪ್ರಾರಂಭವಾಯಿತು ಎಂದು ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ತಿಳಿಸಿದರು.
ಸಾಲ ಮಾಡಿ ಮದುವೆ ಮಾಡಲು ಹೋಗಬಾರದು. ಅದ್ದೂರಿ ಆಡಂಬರದ ಮದುವೆ ಮಾಡಿ ಸಾಲ ಮಾಡಿ ಅದನ್ನು ತೀರಿಸಲು ಕಷ್ಟ ಪಡುವುದು ಬೇಡ. ಈ ರೀತಿ ಸರಳವಾಗಿ ಮದುವೆ ಆಗುವುದರಿಂದ ಆರ್ಥಿಕವಾಗಿ ಹಣ ಉಳಿತಾಯ ಆಗಿ ಈ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಅವರು, ಈ ಬಾರಿ 24 ಜೋಡಿಗಳು ಸಾಮೂಹಿಕ ವಿವಾಹ ಆಗಿದ್ದು , ಮುಂದಿನ ವರ್ಷ ಕನಿಷ್ಠ 100 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಮದುವೆ ಆಗಬೇಕು ಎಂದು ತಿಳಿಸಿದರು.
ನಂಜನಗೂಡು ನಗರಸಭೆಯ ಅಧ್ಯಕ್ಷ ಶ್ರೀಕಂಠ ಅವರು ಮಾತನಾಡಿ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸಿರುವುದು ಉತ್ತಮವಾದ ಕಾರ್ಯ. ಇದರಿಂದ ದುಂದು ವೆಚ್ಚ ತಡೆಯಲು ಸಾಧ್ಯವಾಗುತ್ತದೆ. ಬಡವರು ಉಚಿತವಾಗಿ ಮದುವೆ ಆಗಲು ಅನುಕೂಲಕರವಾಗಿದೆ. ಆದ್ದರಿಂದ ಇನ್ನೂ ಹೆಚ್ಚು ಹೆಚ್ಚು ಸಾಮೂಹಿಕ ವಿವಾಹ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸನೂರು, ಶ್ರೀಕಂಠೇಶ್ವರ ದೇವಾಲಯದ ಜಗದೀಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ ಹರೀಶ್, ವೃತ್ತ ನಿರೀಕ್ಷಕರಾದ ರವೀಂದ್ರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
Key words: Nanjanagudu, married, simply, Mysore, Dr. P. Shivaraju
The post ಸಾಲ ಮಾಡಿ ಮದುವೆ ಆಗುವ ಬದಲು ಸರಳವಾಗಿ ಮದುವೆಯಾಗಿ- ಡಾ. ಪಿ. ಶಿವರಾಜು ಸಲಹೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.