12
February, 2026

A News 365Times Venture

12
Thursday
February, 2026

A News 365Times Venture

ಎಫ್ ಎಆರ್ ನಿರ್ಬಂಧ ಸಡಿಲ, ಕೈಗಾರಿಕಾ ಚಟುವಟಿಕೆಗೆ ಆನೆಬಲ-ಸಚಿವ ಎಂ.ಬಿ ಪಾಟೀಲ್

Date:

ಬೆಂಗಳೂರು,ಫೆಬ್ರವರಿ,12,2026 (www.justkannada.in): ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯು ಮಹತ್ತ್ವದ ಸುಧಾರಣಾ ಕ್ರಮದಲ್ಲಿ ಕೈಗಾರಿಕಾ ನಿವೇಶನಗಳಲ್ಲಿ ಮಹಡಿ ವಿಸ್ತೀರ್ಣ ಅನುಪಾತ (ಎಫ್ಎಆರ್= ಫ್ಲೋರ್ ಏರಿಯಾ ರೇಶಿಯೋ)ವನ್ನು ಕೈಗಾರಿಕಾ ಸ್ನೇಹಿಯಾಗಿ ಮಾರ್ಪಡಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ. ಸರಕಾರದ ಈ ಕ್ರಮದಿಂದ ಕೆಐಎಡಿಬಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳ ಪರಿಸರದಲ್ಲಿ ಉದ್ಯಮ ಮತ್ತು ವಸತಿ ಉದ್ದೇಶದ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರಲಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, `ಇದುವರೆಗೂ ಕೈಗಾರಿಕಾ ನಿವೇಶನಗಳಲ್ಲಿ ಶೇಕಡ 65ರಷ್ಟು ಭೂಮಿಯನ್ನು ಮಾತ್ರ ಉದ್ಯಮದ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಅವಕಾಶವಿತ್ತು. ಈಗ ಇದನ್ನು ಶೇಕಡ 75ಕ್ಕೆ ಹೆಚ್ಚಿಸಿದ್ದೇವೆ. ಸರಕಾರದ ಈ ಕ್ರಮ ಚಾರಿತ್ರಿಕವಾಗಿದ್ದು, ಕೈಗಾರಿಕೆಗಳಿಗೋಸ್ಕರ ಹೆಚ್ಚು ಹೆಚ್ಚು ಜಮೀನು/ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ತಪ್ಪಲಿದೆ. ಇದರ ಫಲವಾಗಿ, ಉದ್ಯಮಿಗಳು ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಬೇಕಾದ ಭೂಮಿಗೆಂದೇ ವಿಪರೀತ ಹಣ ಹಾಕಬೇಕಾಗಿದ್ದ ಹೊರೆ ಇಳಿಯಲಿದೆ. ಇನ್ನೊಂದೆಡೆಯಲ್ಲಿ ರೈತರ ಜಮೀನು ಕೂಡ ಹೆಚ್ಚಾಗಿ ಅವರಲ್ಲೇ ಉಳಿಯಲಿದೆ. ಇದು ಸುಲಲಿತ ವಹಿವಾಟು ಸಂಸ್ಕೃತಿಗೆ ನಿದರ್ಶನವಾಗಿದೆ’ ಎಂದಿದ್ದಾರೆ.

ಇದುವರೆಗೂ ಇದ್ದ ಹಳೆಯ ಎಫ್ಎಆರ್ ಪ್ರಮಾಣದಲ್ಲಿ ಹೂಡಿಕೆದಾರರಿಗೆ ಅನೇಕ ಅಡಚಣೆಗಳಿದ್ದವು. ಉದಾಹರಣೆಗೆ, ಒಂದು ಉದ್ಯಮಕ್ಕೆ 10 ಎಕರೆ ಜಾಗ ಕೊಟ್ಟರೆ ಅದರಲ್ಲಿ ಆರೂವರೆ ಎಕರೆಯನ್ನು ಮಾತ್ರ ಅವರು ಬಳಸಿಕೊಳ್ಳಬಹುದಿತ್ತು. ಉಳಿದ ಜಾಗವನ್ನು ಮೇಲ್ಮೈ ಪಾರ್ಕಿಂಗ್, ಕಟ್ಟಡದ ನಾಲ್ಕೂ ಬದಿಗಳಲ್ಲಿ ಸೆಟ್ ಬ್ಯಾಕ್ ಇತ್ಯಾದಿ ಉದ್ದೇಶಗಳಿಗೆಂದು ಸಾಕಷ್ಟು ಜಾಗ ಬಿಡಬೇಕಿತ್ತು. ಈಗ ಇದನ್ನು ಗಮನಾರ್ಹವಾಗಿ ತಗ್ಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದುವರೆಗೂ 7 ಮೀ. ಎತ್ತರದ ಕೈಗಾರಿಕಾ ಕಟ್ಟಡಗಳಲ್ಲಿ ಸೆಟ್-ಬ್ಯಾಕ್ ಉದ್ದೇಶಕ್ಕೆ ಮುಂಭಾಗದಲ್ಲಿ 1.5 ಮೀ, ಹಿಂಭಾಗ, ಎಡ ಮತ್ತು ಬಲ ಬದಿಗಳಲ್ಲಿ ತಲಾ 1 ಮೀ. ಜಾಗ ಬಿಡಬೇಕಿತ್ತು. ಇನ್ನು ಮುಂದೆ ಮುಂಭಾಗದಲ್ಲಿ 1.5 ಮೀ. ಮತ್ತು ಯಾವುದಾದರೂ ಒಂದು ಪಾರ್ಶ್ವದಲ್ಲಿ (ಎಡ/ಬಲ) 1 ಮೀ. ಬಿಟ್ಟರೆ ಸಾಕು. ಇದೇ ರೀತಿಯಲ್ಲಿ 15 ಮೀ. ಎತ್ತರದ ಕಟ್ಟಡಗಳಿಗೆ ಮುಂಬದಿಯಲ್ಲಿ ಇದುವರೆಗೆ 3ರಿಂದ 10 ಮೀ. ಮತ್ತು ಉಳಿದ ಮೂರು ಕಡೆಗಳಲ್ಲಿ 1.5 ಮೀ.ನಿಂದ 8 ಮೀ.ವರೆಗೆ ಜಾಗವನ್ನು ಖಾಲಿ ಬಿಡಬೇಕಿತ್ತು. ಈಗ ಇದನ್ನು ಕ್ರಮವಾಗಿ 2ರಿಂದ 6 ಮೀ. ಮತ್ತು 1.5 ಮೀ.ನಿಂದ 6 ಮೀ.ಗೆ ಇಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಳೆಯ ನಿಯಮಾವಳಿಗಳಲ್ಲಿ ಉದ್ಯೋಗಿಗಳ ವಸತಿ ಸೌಕರ್ಯ ಮತ್ತು ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಯನ್ನು ನಿರ್ಬಂಧಿಸಲಾಗಿತ್ತು. ಪರಿಷ್ಕೃತ ಎಫ್.ಎ.ಆರ್. ಅಡಿಯಲ್ಲಿ ಸಾಮಾನ್ಯ ಕೈಗಾರಿಕಾ ಪ್ಲಾಟ್ ಗಳಲ್ಲಿ ಶೇ.15ರಷ್ಟು ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಲು ಮತ್ತು ಕನಿಷ್ಠ 50 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ಲಾಟ್ ಗಳಲ್ಲಿ ಶೇ.10ರಷ್ಟು ಪ್ರದೇಶದಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕೊಡಲಾಗುವುದು. ಹಾಗೆಯೇ ವಾಹನಗಳ ನಿಲುಗಡೆಗೆ ಈಗ ಸಾಮಾನ್ಯ ಕೈಗಾರಿಕೆಗಳಿರುವ ನಿವೇಶನಗಳಲ್ಲಿ ಮತ್ತು ಡೇಟಾ ಸೆಂಟರುಗಳಲ್ಲಿ ಶೇ.2ರಷ್ಟು ಮತ್ತು ವೇರ್-ಹೌಸಿಂಗ್ ಹಾಗೂ ಲಾಜಿಸ್ಟಿಕ್ಸ್ ಉದ್ಯಮಗಳಲ್ಲಿ ಶೇ.3ರಷ್ಟು ಜಾಗವನ್ನು ಮಾತ್ರ ಮೀಸಲಿಟ್ಟರೆ ಸಾಕು ಎಂದು ಅವರು ವಿವರಿಸಿದ್ದಾರೆ.

ಕೈಗಾರಿಕೆಗಳಿಗೆ ಭೂಮಿ ಒದಗಿಸುವುದು ಸವಾಲಿನ ಕೆಲಸವಾಗಿದೆ. ಭೂಮಿಯ ಲಭ್ಯತೆ ಕಡಿಮೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಈಗ ಎಫ್ಎಆರ್ ಅನ್ನು ಕೈಗಾರಿಕೆಗಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬದಲಿಸಲಾಗಿದೆ. ಇದರಿಂದ ಕೈಗಾರಿಕಾ ಪ್ರದೇಶ ಪರಿಸರಗಳ ಲಂಬ ಬೆಳವಣಿಗೆಗೆ (ವರ್ಟಿಕಲ್ ಡೆವಲಪ್ಮೆಂಟ್) ಅವಕಾಶ ಸಿಗಲಿದೆ. ಜತೆಗೆ ಕಡಿಮೆ ಭೂಮಿಯಲ್ಲೇ ಉದ್ಯಮಗಳ ನಿರ್ಮಾಣ, ಆರ್ಥಿಕ ಪ್ರಗತಿ ಮತ್ತು ಗರಿಷ್ಠ ಉದ್ಯೋಗಸೃಷ್ಟಿಯ ಸಾಧನೆಗಳನ್ನು ಮಾಡಬಹುದು ಎಂದು ಅವರು ವಿವರಿಸಿದ್ದಾರೆ.

ಕೆಐಎಡಿಬಿ ರಾಜ್ಯದ ಹಲವೆಡೆಗಳಲ್ಲಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಹೊಸ ನಿಯಮದ ಪ್ರಕಾರ, ಪ್ರೀಮಿಯಂ ದರ್ಜೆಯ ಕೈಗಾರಿಕಾ ನಿವೇಶನಗಳಲ್ಲಿ ಎಫ್ಎಆರ್ ಅನ್ನು 5.2ಕ್ಕೆ ಏರಿಸಲಾಗಿದೆ. ಈ ನಿಯಮಗಳು ಕೈಗಾರಿಕಾ ಪ್ರದೇಶಗಳು, ವಿಶೇಷ ಹೂಡಿಕೆ ವಲಯಗಳು (ಎಸ್ಇಆರ್), ಏಕಘಟಕ ಸಂಕೀರ್ಣಗಳು, ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿನ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನ್ವಯಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕಾ ಪ್ರದೇಶಗಳಲ್ಲಿರುವ ರಸ್ತೆಗಳ ಅಗಲವನ್ನು ಆಧರಿಸಿ ಎಫ್ಎಆರ್ ಪ್ರಮಾಣವನ್ನು ತೀರ್ಮಾನಿಸಲಾಗುತ್ತದೆ. 30 ಮೀ. ಅಗಲದ ರಸ್ತೆಯ ಆಚೀಚೆ ಇರುವ ಕೈಗಾರಿಕಾ ನಿವೇಶನಗಳಲ್ಲಿ ಈವರೆಗೂ 3.25ರಷ್ಟು ಎಫ್ಎಆರ್ ಗೆ ಮಾತ್ರ ಅವಕಾಶವಿತ್ತು. ಈಗ ಇದನ್ನು 5.2ಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿಯಲ್ಲಿ 24ರಿಂದ 30 ಮೀ. ಅಗಲದ ರಸ್ತೆ ಇರುವ ಕಡೆಗಳಲ್ಲಿ ಇದನ್ನು 4.8ಕ್ಕೆ, 18ರಿಂದ 24 ಮೀ. ಅಗಲದ ರಸ್ತೆ ಇರುವೆಡೆಗಳಲ್ಲಿ 4ಕ್ಕೆ ಮತ್ತು 12ರಿಂದ 18 ಮೀ. ಅಗಲದ ರಸ್ತೆ ಇರುವಂತಹ ಜಾಗಗಳಲ್ಲಿ 3.6ಕ್ಕೆ ಏರಿಸಲಾಗಿದೆ. 12 ಮೀ.ಗಿಂತ ಕಡಿಮೆ ಅಗಲವಿರುವ ರಸ್ತೆಗಳು ಇರುವಂತಹ ಕಡೆಗಳಲ್ಲಿ ಎಫ್ಎಆರ್ ಪ್ರಮಾಣವನ್ನು 2.45ರಿಂದ 2.8ರವರೆಗೆ ಪರಿಷ್ಕರಿಸಲಾಗಿದೆ ಎಂದು ಎಂಬಿ ಪಾಟೀಲ್ ನುಡಿದಿದ್ದಾರೆ.

ರೈತರಿಗೂ ಲಾಭ

ಪರಿಷ್ಕೃತ ನಿಯಮಗಳಿಂದಾಗಿ ಭೂ ಸ್ವಾಧೀನ ಕಡಿಮೆ ಮಾಡಬಹುದು. ಜತೆಗೆ ಭೂಮಿ ಕಳೆದುಕೊಳ್ಳುವ ಕೆಲವು ರೈತರು ನಗದು ಪರಿಹಾರಕ್ಕೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರ ರೂಪದಲ್ಲಿ ಪಡೆಯಲಿದ್ದು, ಅಂತಹವರಿಗೂ ಇದರಿಂದ ಹೆಚ್ಚಿನ ಲಾಭವಾಗಲಿದೆ. ಹೆಚ್ಚು ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರುವುದರಿಂದ ಸಹಜವಾಗಿ ರೈತರಿಗೂ ಅನುಕೂಲವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ವಿವರಿಸುತ್ತಾರೆ.

ವಾಹನ‌ ನಿಲುಗಡೆ ಮೀಸಲು ಜಾಗ ಇಳಿಕೆ

ವಾಹನ ನಿಲುಗಡೆಗೆ ಕಡ್ಡಾಯವಾಗಿ ಬಿಡಬೇಕಿದ್ದ ಜಾಗದ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಕೈಗಾರಿಕಾ ನಿವೇಶನದ ಒಟ್ಟು ಜಾಗದಲ್ಲಿ ಶೇ 5ರಷ್ಟು ಜಾಗವನ್ನು ಈ ಹಿಂದೆ ವಾಹನ ನಿಲುಗಡೆಗೆ ಮೀಸಲಿಡಬೇಕಿತ್ತು. ಅದರೆ ಈಗ ಅದನ್ನು ಶೇ 3ರಷ್ಟಕ್ಕೆ ಇಳಿಸಿದ್ದು, ಇದರಿಂದ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಎಂ.ಬಿ ಪಾಟೀಲ್ ವಿವರಿಸಿದ್ದಾರೆ.

Key words: FAR, restrictions, industrial, activity, Minister, M.B. Patil

The post ಎಫ್ ಎಆರ್ ನಿರ್ಬಂಧ ಸಡಿಲ, ಕೈಗಾರಿಕಾ ಚಟುವಟಿಕೆಗೆ ಆನೆಬಲ-ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಪ್ರಸಕ್ತ ವರ್ಷದಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿ: ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಫೆಬ್ರವರಿ, 12,2026 (www.justkannada.in):  ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ...

2,500 ಕಾಫಿ ಕಿಯೋಸ್ಕ್ ಸ್ಥಾಪನೆಗೆ ₹25 ಕೋಟಿ: ಎಂ ಬಿ ಪಾಟೀಲ

  ಬೆಂಗಳೂರು, ಫೆ.೧೨,೨೦೨೬ : ಸ್ವಸಹಾಯ ಸಂಘಗಳಲ್ಲಿ ತರಬೇತಿ ಪಡೆದಿರುವ ಮಹಿಳೆಯರೇ ನಿರ್ವಹಿಸುವಂತಹ...

 ಮಹಾಶಿವರಾತ್ರಿ: ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು,ಫೆಬ್ರವರಿ,12,2026 (www.justkannada.in): ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಮೂಹ ದೇವಸ್ಥಾನಗಳಲ್ಲಿ...

ಗಾಂಜಾ ಮಾರಾಟ: ಆರೋಪಿತನಿಗೆ 4 ವರ್ಷಗಳ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿದ ಕೋರ್ಟ್

ಮೈಸೂರು,ಫೆಬ್ರವರಿ,12,2026 (www.justkannada.in): ಗಾಂಜಾ ಮಾರಾಟ: ಆರೋಪಿತನಿಗೆ 4 ವರ್ಷಗಳ ಕಠಿಣ ಶಿಕ್ಷೆ...