ಮೈಸೂರು,ಜುಲೈ,5,2025 (www.justkannada.in): ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವ ಕುರಿತು ಇನ್ನೂ ತೀರ್ಮಾನಿಸಿಲ್ಲ ಎಂದು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಬಾನು ಮುಷ್ತಾಕ್ ಹೇಳಿದರು.
ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬಾನು ಮುಷ್ತಾಕ್, ಬೂಕರ್ ಪ್ರಶಸ್ತಿ ಬಂದ ನಂತರ ಇಡೀ ರಾಜ್ಯದಾದ್ಯಂತ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದ, ದೇಶ ವಿದೇಶಗಳಿಂದಲೂ ನನ್ನನ್ನು ಆಹ್ವಾನಿಸುತ್ತಿದ್ದಾರೆ. ಬೂಕರ್ ಪ್ರಶಸ್ತಿ ಮೂಲಕ ಹೊರ ದೇಶದ ಪ್ರಕಾಶಕರ ಜೊತೆಗೂ ಮಾತನಾಡಲು ಸಾಧ್ಯವಾಯಿತು. ದೇಶ ವಿದೇಶಗಳ ಪ್ರವಾಸಗಳ ಪೈಕಿ ಕೆಲವೆಡೆಗೆ ಹೋಗಲಾಗುತ್ತಿಲ್ಲ. ಒಂದು ತಿಂಗಳಲ್ಲಿ 5-6 ಕಡೆಗೆ ಆಹ್ವಾನ ಬರುತ್ತಿವೆ. ನನಗೆ ಬೂಕರ್ ಪ್ರಶಸ್ತಿ ಬಂದನಂತರ ಇಡೀ ಭಾರತ ಸಂಭ್ರಮಿಸುತ್ತಿದೆ. ಇದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಾನು ಕಮ್ಯುನಿಸ್ಟ್ ಅಲ್ಲ ಆದರೂ ಕೇರಳದ ಕಮ್ಯುನಿಸ್ಟ್ ಸರ್ಕಾರ ನನ್ನನ್ನು ಆಹ್ವಾನಿಸಿದೆ. ನನಗೆ ಬೂಕರ್ ಪ್ರಶಸ್ತಿ ಬಂದ ನಂತರ ಆಹ್ವಾನಿಸಿದೆ. ನಾನು ಕಮ್ಯುನಿಸ್ಟ್ ವಾದಿಯಲ್ಲ. ಆದರೂ ಕೇರಳ ಸರ್ಕಾರ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದೆ. ಕೇರಳದ ಜನತೆಗೆ ನನ್ನ ಬರಣಿಗೆ ಇಷ್ಟವಾಗಿದೆ. ಹಾಗಾಗಿ ಕೇರಳ ಸರ್ಕಾರ ನನ್ನನ್ನು ಆಹ್ವಾನಿಸಿರಬಹುದು ಎಂದರು.
ನಾನು ಕೇವಲ ಮುಸ್ಲಿಂ ಮಹಿಳೆಯರ ಸಮಸ್ಯೆಗಳ ಕುರಿತು ಬರೆದಿಲ್ಲ ನಾನು ಮುಸ್ಲಿಂ ಮಹಿಳೆಯಾದರೂ ಮುಸ್ಲಿಂ ಸಮುದಾಯ ಮಾತ್ರವಲ್ಲದೆ ಇಡೀ ಮಹಿಳಾ ಕುಲದ ಸಮಸ್ಯೆಗಳ ಕುರಿತು ಬರೆಯುತ್ತಾ ಬಂದಿದ್ದೇನೆ. ನಾನು ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದ ಕಾರಣದಿಂದಾಗಿ ಮುಸ್ಲಿಂ ಸಮುದಾಯದಿಂದ ಸಾಕಷ್ಟು ಪ್ರತಿರೋಧಗಳನ್ನು ಎದುರಿಸಿದ್ದೇನೆ. ಎಲ್ಲಾ ಪ್ರತಿರೋಧಗಳನ್ನು ಎದುರಿಸಿಕೊಂಡು ಮುಂದೆ ಬಂದಿದ್ದೇನೆ ಎಂದರು.
ಹಿರಿಯ ಮಹಿಳಾ ಅಧಿಕಾರಿ ಶಾಲಿನಿ ರಜನೀಶ್ ಬಗ್ಗೆ ಎಂಎಲ್ ಸಿ, ರವಿಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರ ಕುರಿತು ಮಾತನಾಡಿದ ಬಾನು ಮುಷ್ತಾಕ್ , ಈ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಎಂಎಲ್ಸಿ., ಸಿ ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದರು. ಆಗ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣಿರು ಹಾಕಿದ್ದರು. ಆಗ ನಾನು ಒಂದು ಪತ್ರ ಬರೆಯುವ ಮೂಲಕ ಮಹಿಳಾ ನಿಂದಕರಿಗೆ ಕಠಿಣ ಶಿಕ್ಷೆ ನೀಡುವಂತಹ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿದ್ದೆ. ಸರ್ಕಾರ ಅವರದೇ ಇರುವಾಗ ಕಠಿಣ ಕಾನೂನು ತರಬೇಕೆಂದು ಹೇಳಿದ್ದೆ. ಆ ಬಗ್ಗೆ ನಾನು ಈಗಲೂ ಒತ್ತಾಯಿಸುತ್ತೇನೆ. ಮಹಿಳೆಯರನ್ನು ಅವಹೇಳನ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ತಿಳಿಸಿದರು.
ಮುಂಬರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವ ಕುರಿತು ಇನ್ನೂ ತೀರ್ಮಾನಿಸಿಲ್ಲ. ಸಮ್ಮೇಳನಕ್ಕೇ ಇನ್ನೂ ಸಾಕಷ್ಟು ದಿನಗಳು ಇವೆ. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರ ವಿರುದ್ದವೇ ಗಂಭೀರ ಆರೋಪಗಳು ಕೇಳಿಬಂದಿವೆ. ಹಾಗಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಕೊಳ್ಳಬೇಕೆ? ಬೇಡವೇ? ಎಂಬ ಪ್ರಶ್ನೆ ಎದುರಾಗಿರುವುದು ಸಹಜ. ಆದರೆ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ರಾಜ್ಯಾಧ್ಯಕ್ಷರೊಬ್ಬರೇ ಎಲ್ಲವೂ ಆಗಿಲ್ಲ. ಎಲ್ಲಾ ಜಿಲ್ಲೆಗಳ ಅಧ್ಯಕ್ಷರನ್ನೂ ಕನ್ನಡ ಸಾಹಿತ್ಯ ಪರಿಷತ್ ಒಳಗೊಂಡಿದೆ. ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವ ಕುರಿತು ಈಗಲೇ ಯಾವುದೆ ತೀರ್ಮಾನಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಬಾನು ಮುಷ್ತಾಕ್ ಸ್ಪಷ್ಟಪಡಿಸಿದರು.
Key words: Mysore, Banu Mushtaq, All India Kannada Literary Conference
The post ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವ ಕುರಿತು ಇನ್ನೂ ತೀರ್ಮಾನಿಸಿಲ್ಲ- ಬಾನು ಮುಷ್ತಾಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.