ಬೆಂಗಳೂರು,ಮೇ,31,2025 (www.justkannada.in): ಕುರಿಗಾಹಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕೊಡುತ್ತಿರುವ ಕಿರುಕುಳ ತಕ್ಷಣ ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಡಿಸಿ ಸಿಇಒಗಳ ಸಭೆಯಲ್ಲಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯುವನಿಧಿ ಫಲಾನುಭವಿ ನಿರುದ್ಯೋಗಿಗಳಿಗೆ ಉದ್ಯೋಗ, ತರಬೇತಿ ಸಿಗಬೇಕು. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ತರಬೇತಿ ನೀಡಿ, ಉದ್ಯೋಗ ಕೈಗೆ ಸಿಗುವಂತಾಗಬೇಕು. ತರಬೇತಿ ಪಡೆದವರೆಲ್ಲರಿಗೂ ಉದ್ಯೋಗ ಸಿಗದೇ ಹೋಗಬಹುದು. ಆದರೆ ತರಬೇತಿ ಮಾತ್ರ ಹೆಚ್ಚೆಚ್ಚು ನಿರುದ್ಯೋಗಿ ಮತ್ತು ಯುವನಿಧಿ ಫಲಾನುಭವಿಗಳಿಗೆ ನೀಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ನಿಯಮಿತವಾಗಿ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು, ಆ ಡೈರಿಯಲ್ಲಿ ಫೀಲ್ಡ್ ವರ್ಕ್ ಅನುಭವಗಳು, ಸಮಸ್ಯೆಗಳು, ಪರಿಹಾರ ಎಲ್ಲದರ ಬಗ್ಗೆಯೂ ಉಲ್ಲೇಖವಿರಬೇಕು ಎಂದು ಕಳೆದ ವರ್ಷದ ಸಭೆಯಲ್ಲಿ ಮತ್ತು ಎಲ್ಲಾ ಕೆಡಿಪಿ ಸಭೆಗಳಲ್ಲಿ ನಾನು ಸೂಚನೆ ನೀಡಿದ್ದೆ. ಇನ್ನೂ ಕೆಲವರು ಸಮರ್ಪವಾಗಿ ಡೈರಿಗಳನ್ನು ಬರೆದಿಲ್ಲ ಎನ್ನುವ ಮಾಹಿತಿ ಇದೆ. ನೀವು ಬರೆದ ಡೈರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬಂದರೆ ನಾನೂ ಗಮನಿಸಬಹುದು ಎಂದು ಸೂಚನೆ ನೀಡಿದರು.
ಕುರಿಗಾಹಿಗಳ ಮೇಲೆ ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕೇಸು ದಾಖಲಿಸುವುದು ಮತ್ತು ಅನಗತ್ಯ ತೊಂದರೆ ಕೊಡುವ ಬಗ್ಗೆ ವರದಿಗಳು, ದೂರುಗಳು ಬಂದಿವೆ. ಇದನ್ನು ನಿಲ್ಲಿಸಬೇಕು. ಕುರಿಗಳು ತಲೆ ಎತ್ತಿ ಮೇಯುವುದಿಲ್ಲ. ಅವು ತಲೆ ಬಗ್ಗಿಸಿಕೊಂಡು ಮೇಯುವುದರಿಂದ ಅರಣ್ಯ ಸಿಬ್ಬಂದಿಯ ತಪ್ಪು ಗ್ರಹಿಕೆಯಿಂದ ಕುರಿಗಾಹಿಗಳಿಗೆ ತೊಂದರೆ ಆಗುತ್ತಿದೆ ಇದನ್ನು ತಪ್ಪಿಸಿ ಎಂದರು.
ನೀವೆಲ್ಲಾ ಯುವ ಜಿಲ್ಲಾಧಿಕಾರಿಗಳಿದ್ದೀರಿ. ನಿಮಗೆ ಫೀಲ್ಡ್ ಎಕ್ಸ್‌ಪೀರಿಯನ್ಸ್ ಚೆನ್ನಾಗಿ ಇರುತ್ತದೆ. ನೀವು ಕೆಲಸ ಮಾಡುವ ಜಿಲ್ಲೆಗಳಲ್ಲಿ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗುವ ದಿಕ್ಕಿನಲ್ಲಿ ಇನ್ನೋವೇಟೀವ್ ಆಗಿ ಕೆಲಸ ಮಾಡಿ ತೋರಿಸಿ. ನಿಮ್ಮ ಹೆಸರು ಜಿಲ್ಲೆಗಳಲ್ಲಿ, ರಾಜ್ಯದಲ್ಲಿ ಅಚ್ಚಳಿಯದೆ ಉಳಿಯುವ ರೀತಿಯಲ್ಲಿ ದಾಖಲೆ ಮಾಡಿ ತೋರಿಸಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಹುರಿದುಂಬಿಸಿದರು.
ಕುರಿಗಾಹಿಗಳಿಗೆ ಕುರಿಗಳ ಮತ್ತು ತಮ್ಮ ಜೀವದ ರಕ್ಷಣೆಗೆ ಬಂದೂಕು ಪರವಾನಗಿ ಕೊಡಬೇಕು ಎಂದು ಸೂಚಿಸಿದ್ದೆ. ಇದಿನ್ನೂ ಕೆಲವು ಕಡೆ ಜಾರಿಗೆ ಬಂದಿಲ್ಲ. ಕುರಿಗಳ್ಳರು ಕುರಿಗಳನ್ನು ಕದಿಯುವ ಜೊತೆಗೆ, ಕುರಿಗಾಹಿಗಳನ್ನು ಕೊಲೆ ಮಾಡಿರುವ ಘಟನೆಗಳೂ ಕೂಡ ನಡೆದಿವೆ. ಹೀಗಾಗಿ ಬಂದೂಕು ಪರವಾನಗಿ ಕೊಡುವುದನ್ನು ಸಮರ್ಪಕಗೊಳಿಸಬೇಕು ಎನ್ನುವ ಸೂಚನೆ ನೀಡಿದರು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಕುರಿಗಾಹಿಗಳಿಗೆ ಬಂದೂಕು ನೀಡುವ ಕಾರ್ಯದ ಬಗ್ಗೆ ನಿಗಾ ಇಡಲು ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸುವುದಾಗಿ ತಿಳಿಸಿದರು.
Key words: harassment, shepherds, forest department, stop, CM Siddaramaiah
The post ಕುರಿಗಾಹಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕೊಡುತ್ತಿರುವ ಕಿರುಕುಳ ತಕ್ಷಣ ನಿಲ್ಲಬೇಕು- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




