ಮೈಸೂರು,ಜುಲೈ,3,2025 (www.justkannada.in): ನಾಳೆ 2ನೇ ಆಷಾಡ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರ ಹರಿದು ಬರುವ ಸಾಧ್ಯತೆ ಇದ್ದು ಮೆಟ್ಟಿಲುಗಳ ಮೂಲಕ ದೇವರ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪಾದದ ಬಳಿ ಬೆಳಿಗ್ಗೆ 5 ಗಂಟೆ ಬಳಿಕ ಪ್ರವೇಶಕ್ಕೆ ಅವಕಾಶವಿದೆ ಎಂದು ಮೈಸೂರು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ಹೊರಟಿಸಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಿನಾಂಕ 27-06-2025 ರಂದು ಆಷಾಡ ಮಾಸದ ಮೊದಲನೇ ಶುಕ್ರವಾರದಂದು ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಧರ್ಮದರ್ಶನದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿತ್ತು. ಈ ಸಂಬಂಧ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕಾಗಿ ವಿವಿಧ ಸರದಿ ಸಾಲುಗಳನ್ನು ವಿಂಗಡಿಸಿ ಪ್ರತಿಯೊಂದಕ್ಕೂ ಪ್ರವೇಶದ ಮಾರ್ಗವನ್ನು ನಿಗಧಿಪಡಿಸಿ ಮೆಟ್ಟಿಲುಗಳ ಮೂಲಕ ಬರುವ ಭಕ್ತಾದಿಗಳಿಗೆ ಬೆಳಿಗ್ಗೆ 05-00 ಗಂಟೆಯಿಂದ ಧರ್ಮದರ್ಶನದ ಸಾಲಿನ ಮೂಲಕ ದೇವರ ದರ್ಶನಕ್ಕೆ ಅನುವು ಮಾಡಲಾಗಿತ್ತು.
ಆದರೆ ದಿನಾಂಕ 27-06-2025 ರಂದು ಭಕ್ತಾದಿಗಳು/ ಸಾರ್ವಜನಿಕರು ನಡುರಾತ್ರಿ 1-00 ಗಂಟೆಯಿಂದಲೇ ಬೆಟ್ಟದ ಪಾದದ ಬಳಿ ಜಮಾವಣೆ ಗೊಂಡು ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಈ ಹಿನ್ನಲೆಯಲ್ಲಿ ದಿ: 04-07-2025 ಆಷಾಡ ಶುಕ್ರವಾರದಂದು ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದ ಹೊರ ಆವರಣದಲ್ಲಿ ಪ್ರತ್ಯೇಕವಾದ ಸಾಲಿನ ವ್ಯವಸ್ಥೆ ಮಾಡಿದ್ದು. ಈ ಸಾಲು ಮುಂದೆ ಸಾಗಿ ಧರ್ಮದರ್ಶನದ ಸಾಲಿನೊಂದಿಗೆ ಸೇರಿಕೊಂಡ ನಂತರ ಒಟ್ಟಾಗಿ ಸಾಗಿ ದರ್ಶನ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತರಿಗೆ ಪಾದದ ಬಳಿ ಬೆಳಿಗ್ಗೆ 5-00 ಯಿಂದ ಸಂಜೆ 6-00 ಗಂಟೆಯ ವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ. ಬೆಳಿಗ್ಗೆ 5-00 ಗಂಟೆಗೆ ಮುಂಚಿತವಾಗಿ ಯಾವುದೇ ಸಾರ್ವಜನಿಕರು ಮತ್ತು ವಾಹನಗಳು ಜಮಾವಣೆಯಾಗಲು ಅವಕಾಶವಿರುವುದಿಲ್ಲ.
ಚಾಮುಂಡಿ ಬೆಟ್ಟದ ಹೊರ ಆವರಣದಲ್ಲಿ ದರ್ಶನದ ಎಲ್ಲಾ ಸಾಲುಗಳಲ್ಲಿನ ಭಕ್ತಾದಿಗಳು ಸೇರಿದಂತೆ ಒಮ್ಮೆಗೆ ಸುಮಾರು 15000 ಜನರಿಗೆ ಆಗುವಷ್ಟು ಮಾತ್ರಾ ಸ್ಥಳಾವಕಾಶವಿದ್ದು ದೇವಸ್ಥಾನದ ಹೊರ ಆವರಣದಿಂದ ವಿವಿಧ ಸಾಲುಗಳ ಮೂಲಕ ಆಗಮಿಸುವ ಭಕ್ತಾದಿಗಳು ದೇವಸ್ಥಾನದ ಒಳ ಪ್ರಾಂಗಣಕ್ಕೆ ಸೇರಿ ಒಟ್ಟಾಗಿ ದರ್ಶನ ಮಾಡಬೇಕಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ನೂಕುನುಗ್ಗಲು, ಕಾಲ್ತುಳಿತ ಮುಂತಾದ ಅವಘಡಗಳಿಗೆ ಆಸ್ಪದ ಕೊಡದಂತೆ ತಾಳ್ಮೆಯಿಂದ ಸಹಕರಿಸಬೇಕು ಎಂದು ಮೈಸೂರು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
Key words: Ashada Friday, Mysore, Chamundi hills, devotees
The post ಚಾ.ಬೆಟ್ಟದ ಮೆಟ್ಟಿಲು ಮೂಲಕ ಆಗಮಿಸುವವರಿಗೆ ಪ್ರತ್ಯೇಕ ಸಾಲು: ಬೆಳಿಗ್ಗೆ 5ರ ಬಳಿಕ ಪ್ರವೇಶಕ್ಕೆ ಅವಕಾಶ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.