19
April, 2025

A News 365Times Venture

19
Saturday
April, 2025

A News 365Times Venture

ಜಾತಿ ಗಣತಿ: ಅಧಿಕಾರದ ನೆಲೆ ಕುಸಿಯುವ ಭೀತಿಯಲ್ಲಿ ಪ್ರಬಲ ಸಮುದಾಯಗಳು..

Date:

ಬೆಂಗಳೂರು,ಏಪ್ರಿಲ್,17,2025 (www.justkannada.in): 2019: ಲೋಕಸಭೆ ಚುನಾವಣೆ ಹೊತ್ತಿನೊಳಗೆ ಪ್ರಧಾನಿ ನರೇಂದ್ರ ಮೋದಿ ಅವರು, ಸಾಮಾನ್ಯ ಪ್ರವರ್ಗಕ್ಕೆ ಸೇರಿದ ಜಾತಿಗಳಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10ರಷ್ಟು ಮೀಸಲಾತಿ ಘೋಷಿಸಿದರು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 4ರಷ್ಟು ಇರಬಹುದು ಎಂದು ಅಂದಾಜಿಸಲಾದ ಬ್ರಾಹ್ಮಣ, ವೈಶ್ಯ ಸೇರಿ ಕೆಲವೇ ಜಾತಿಗಳ ಜನರಿಗಷ್ಟೇ ಇದರ ಲಾಭ. ಮೀಸಲಾತಿ ನೀಡುವ ಮೊದಲು ಯಾವುದೇ ಸಮೀಕ್ಷೆಯನ್ನೂ ನಡೆಸಿರಲಿಲ್ಲ. ಸುಪ್ರೀಂ ಕೋರ್ಟ್ ಕೂಡ ಈ ತೀರ್ಮಾನವನ್ನು ಒಪ್ಪಿಕೊಂಡಿತು.

2023: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಮುನ್ನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಹಿಂದುಳಿದ ವರ್ಗಗಳ ಪ್ರವರ್ಗ-2ಬಿ ಅಡಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿ ರದ್ದುಪಡಿಸಿ, ಅದನ್ನು ಒಕ್ಕಲಿಗ ಹಾಗೂ ಲಿಂಗಾಯತರಿಗೆ ತಲಾ ಶೇ 2ರಷ್ಟು ಮರುಹಂಚಿಕೆ ಮಾಡಿತು. ಆಗಲೂ ಯಾವುದೇ ಸಮೀಕ್ಷೆಯ ದಾಖಲೆಗಳಿರಲಿಲ್ಲ.

2025: ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ‘ದತ್ತಾಂಶ ಅಧ್ಯಯನ ವರದಿ’ಯು 2024ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಯಿತು. ಇದನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಸ್ವೀಕರಿಸಲಾಗಿದೆ. ವರದಿಯ ಪ್ರಮುಖಾಂಶ ಹಾಗೂ ಶಿಫಾರಸುಗಳೇನು ಎಂಬುದನ್ನು ಮಾಧ್ಯಮಗಳು ವರದಿ ಮಾಡಿವೆ.

ಹಿಂದುಳಿದ ವರ್ಗಗಳ ಆಯೋಗದ ವರದಿಯ ಪರಿಶೀಲನೆ, ಪರಿಷ್ಕರಣೆ, ಅಂಗೀಕಾರ ಅಥವಾ ತಿರಸ್ಕಾರದ ಅವಕಾಶಗಳು ಸರ್ಕಾರದ ಮುಂದಿವೆ. ಹಾಗಿದ್ದರೂ ರಾಜಕೀಯವಾಗಿ ಪ್ರಭಾವಿಯಾಗಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪ್ರಮುಖರು, ಬಿಜೆಪಿ-ಜೆಡಿಎಸ್‌ ನ ಕೆಲವು ನಾಯಕರು ಗದ್ದಲ ಎಬ್ಬಿಸಿದ್ದಾರೆ.

ಯಾವುದೇ ಬೇಡಿಕೆ ಅಥವಾ ಸಮೀಕ್ಷೆ ಇಲ್ಲದೇ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡಿದಾಗ, ತಮ್ಮ ಪಾಲನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಕ್ಷೀಣ ಸ್ವರವನ್ನೂ ಈ ಸಮುದಾಯಗಳವರು ಹೊರಡಿಸಿರಲಿಲ್ಲ. ಈಗ ಜಾತಿ ಜನಗಣತಿಯ ದತ್ತಾಂಶ ಹೊರಬೀಳುತ್ತಿದ್ದಂತೆ, ‘ಎಲ್ಲರ ಮೀಸಲಾತಿಯನ್ನೇ ಕಿತ್ತುಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದು, ಅವರೇ ವರದಿ ಬರೆಸಿದ್ದಾರೆ’ ಎಂದು ಹುಯಿಲೆಬ್ಬಿಸಿದ್ದಾರೆ.

ಸಮೀಕ್ಷೆ ವೇಳೆ 1.35 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ, 5.98 ಕೋಟಿ ಜನರ ಮಾಹಿತಿ ಸಂಗ್ರಹಿಸ ಲಾಗಿದೆ. ಸಮೀಕ್ಷೆಯಿಂದ 37 ಲಕ್ಷ ಜನ ಹೊರಗೆ ಉಳಿದಿದ್ದಾರೆ ಎಂದು ಆಯೋಗವೇ ಹೇಳಿದೆ. ಆಗ ಸಂಗ್ರಹಿಸಲಾದ ದತ್ತಾಂಶದ ಅಷ್ಟೂ ವಿವರಗಳ ದಾಖಲೆಗಳನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಿದೆ. ‘ಸಮೀಕ್ಷೆ ನಡೆಸಲು ಮನೆಗಳಿಗೆ ಭೇಟಿ ನೀಡಿಯೇ ಇಲ್ಲವಹ ದತ್ತಾಂಶ ಸಂಗ್ರಹಿಸಿಯೇ ಇಲ್ಲ’ ಎಂದು ಅಪಪ್ರಚಾರ ನಡೆಸುವುದು ಜನರನ್ನು ದಿಕ್ಕು ತಪ್ಪಿಸುವ ಕ್ರಮ.

1931ರ ಬಳಿಕ ದೇಶದಲ್ಲಿಯೇ ಜಾತಿವಾರು ಜನಗಣತಿ ನಡೆದಿಲ್ಲ. 2005ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು, ಈ ಮಾದರಿಯ ಸಮೀಕ್ಷೆ ಯೊಂದನ್ನು ನಡೆಸಲು ಮುಂದಾದರು. ಪ್ರಾಯೋಗಿಕವಾಗಿ ಕರ್ನಾಟಕದಲ್ಲಿ ಸಮೀಕ್ಷೆ ನಡೆಸುವ ನಿರ್ಧಾರ ಕೈಗೊಂಡ ಕೇಂದ್ರ, ಅದಕ್ಕಾಗಿ ಅನುದಾನ ನೀಡಿತು. ಆಗ ಎನ್. ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರು ರಾಜ್ಯದ ಪಾಲಿನ ಅನುದಾನ ಮಂಜೂರು ಮಾಡಿದರು. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಇದಕ್ಕೆ ಅನುದಾನವನ್ನೂ ತೆಗೆದಿರಿಸಿದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಯನ್ನು ನಡೆಸಿತು. ಸಂವಿಧಾನಬದ್ಧ ಆಯೋಗವೊಂದು ಸರ್ಕಾರಿ ನೌಕರರನ್ನೇ ನಿಯೋಜಿಸಿ ನಡೆಸಿದ ಸಮೀಕ್ಷೆಯೊಂದನ್ನು ಸುಳ್ಳು ಎನ್ನುವುದು ಸಂವಿಧಾನಕ್ಕೆ ಮಾಡುವ ಅಪಚಾರ.

ಜನಗಣತಿ ಜತೆ ಜಾತಿಗಣತಿಯನ್ನೂ ನಡೆಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಜನರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ವಾಸ್ತವಿಕ ಚಿತ್ರಣ ತಿಳಿಯಬೇಕಾದರೆ ಈ ತೆರನಾದ ಸಮೀಕ್ಷೆ ಅಗತ್ಯ. ನೈಜ ದತ್ತಾಂಶಗಳ ಆಧಾರದಲ್ಲಿ ಆಯಾ ಸಮುದಾಯದ ಹಿಂದುಳಿದಿರುವಿಕೆಯನ್ನು ಖಾತರಿಪಡಿಸಿಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ರಾಜಕೀಯ ಮೀಸಲಾತಿಯನ್ನು ನೀಡಬೇಕು ಎಂಬ ಷರತ್ತನ್ನು ಸುಪ್ರೀಂ ಕೋರ್ಟ್ ವಿಧಿಸಿದೆ. ಹೀಗಿರುವಾಗ, ಸಮೀಕ್ಷೆಯನ್ನು ವಿರೋಧಿಸಿದರೆ ಸುಪ್ರೀಂ ಕೋರ್ಟ್ ಆದೇಶವನ್ನೂ ವಿರೋಧಿಸಿದಂತೆ ಆಗುತ್ತದೆ.

ಹಾಗೆಂದು ಸಮೀಕ್ಷೆಯಲ್ಲಿ ಲೋಪಗಳೂ ಇಲ್ಲವೆಂದಲ್ಲ. ಸಮೀಕ್ಷೆ ನಡೆಯುತ್ತಿದ್ದಾಗ, ನಿರ್ದಿಷ್ಟ ಹೆಸರನ್ನಷ್ಟೇ ಉಲ್ಲೇಖಿಸಿ, ಉಪಪಂಗಡದ ಹೆಸರು ಸೇರಿಸಬೇಡಿ ಎಂದು ಆಯಾ ಸಮುದಾಯದ ಮುಖಂಡರು ಸೂಚಿಸಿದರೆ, ಇನ್ನು ಕೆಲವರು, ಉಪಪಂಗಡ ಅಥವಾ ಉಪಜಾತಿ ಹೆಸರನ್ನು ಉಲ್ಲೇಖಿಸಿ ಎಂದರು. ಗಣತಿದಾರರು ಮನೆಗೆ ಬಂದಾಗ, ನೀಡಿದ ಮಾಹಿತಿಯಷ್ಟೇ ದತ್ತಾಂಶದಲ್ಲಿ ಉಲ್ಲೇಖವಾಗಿದೆ. ಲಿಂಗಾಯತ, ಒಕ್ಕಲಿಗ ಅಥವಾ ಈಡಿಗ ಜಾತಿಗಳಲ್ಲಿ ಅನೇಕ ಉಪಪಂಗಡಗಳಿವೆ. ನಿರ್ದಿಷ್ಟ ಜಾತಿಯ ಹೆಸರು ಉಲ್ಲೇಖಿಸಿದವರನ್ನಷ್ಟೇ ಈ ಗುಂಪಿನಲ್ಲಿ ಗುರುತಿಸಿದ್ದಾರೆ. ಇದರಿಂದ, ಮೇಲ್ನೋಟಕ್ಕೆ ಜನಾಂಗದ ಒಟ್ಟು ಸಂಖ್ಯೆ ಕಡಿಮೆಯಾಗಿ ಕಾಣಿಸುತ್ತಿದೆ. ಸಮೀಕ್ಷೆ ವೇಳೆಯಲ್ಲೇ ಒಕ್ಕಲಿಗ-ಲಿಂಗಾಯತ ಉಪಪಂಗಡಗಳು ಒಂದೇ ಜಾತಿನಾಮ ಬರೆಸಿದ್ದರೆ, ಈಗ ಅಳುವ ಪ್ರಮೇಯವೇ ಬರುತ್ತಿರಲಿಲ್ಲ

ಸಮೀಕ್ಷೆಯೊಂದು ಸತ್ಯ ಹೇಳಿದಾಗ, ಇಲ್ಲಿಯವರೆಗೆ ‘ದೊಡ್ಡ ಸಂಖ್ಯೆ’ಯಲ್ಲಿ ಇದ್ದೇವೆ ಎಂದು ಭ್ರಮೆ ಹುಟ್ಟಿಸಿ, ಅಧಿಕಾರ ಅನುಭವಿಸುತ್ತಿರುವವರ ನಿಂತ ನೆಲ ಕುಸಿಯುವುದು ಖಚಿತ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗದೇ ಇರುವ ಸಮುದಾಯಗಳು ತಮ್ಮ ಹಕ್ಕು ಹಾಗೂ ಪ್ರಾತಿನಿಧ್ಯಕ್ಕೆ ಕೂಗೆಬ್ಬಿಸಿದರೆ, ಪ್ರಬಲ ಜಾತಿಗಳ ನಾಯಕರ ಬುಡವೇ ಅಲ್ಲಾಡಲಿದೆ. ತಾವೇ ಪ್ರಬಲ ಎಂದು ಬಿಂಬಿಸಿಕೊಂಡು ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣ ಹಾಗೂ ಕುರುಬ ಸಮುದಾಯದವರು ಏಳು ದಶಕಗಳ ಕಾಲ ಆಳ್ವಿಕೆ ನಡೆಸಿದ್ದಾರೆ. ಈ ಪ್ರಬಲರು ಇನ್ನು ಮುಂದಾದರೂ ಮೀಸಲಾತಿಯ ಗಂಧವನ್ನೇ ಈವರೆಗೆ ಅಸ್ವಾದಿಸದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಬಿಟ್ಟುಕೊಡಲೇಬೇಕಾದ ಅನಿವಾರ್ಯ ಎದುರಾಗಲಿದೆ. ದಶಕಗಳ ದಬ್ಬಾಳಿಕೆಯಿಂದ ಆಳಿದವರು ಇನ್ನು ಮುಂದೆ ಆಳಿಸಿಕೊಳ್ಳಬೇಕಾಗಿ ಬರುತ್ತದಲ್ಲ ಎಂಬ ಕೊರಗಿನಿಂದ ಈಗ ಸಮೀಕ್ಷೆಯ ವಿರುದ್ಧ ಕೂಗೆಬ್ಬಿಸಿದ್ದಾರೆ.

ಸಮೀಕ್ಷೆಯ ಮಾಹಿತಿಯಂತೆ, ಪರಿಶಿಷ್ಟ ಜಾತಿಯವರು 1.09 ಕೋಟಿ, ಪರಿಶಿಷ್ಟ ಪಂಗಡದವರು 42.81 ಲಕ್ಷದಷ್ಟಿದ್ದಾರೆ. ಲಿಂಗಾಯತ-ವೀರಶೈವರು 76.74 ಲಕ್ಷ, ಒಕ್ಕಲಿಗರು 61.58 ಲಕ್ಷ, ಬ್ರಾಹ್ಮಣರು 15.64 ಲಕ್ಷ ಇದ್ದಾರೆ. ಮುಸ್ಲಿಮರು 75.25 ಲಕ್ಷದಷ್ಟಿದ್ದಾರೆ. ಪ್ರವರ್ಗ 1ಎ, 1ಬಿ ಹಾಗೂ 2ಎ ಸೇರಿ ಹಿಂದುಳಿದವರ ಒಟ್ಟು ಸಂಖ್ಯೆ 1.86 ಕೋಟಿಯಷ್ಟಾಗಲಿದೆ. ಅಂದರೆ, ಪ್ರಬಲ ಜಾತಿಯವರಿಗಿಂತ ಹಿಂದುಳಿದವರು, ಪರಿಶಿಷ್ಟ ಸಮುದಾಯದವರ ಸಂಖ್ಯೆಯೇ ಹೆಚ್ಚಿದೆ. ಹಿಂದುಳಿದವರು, ಮುಸ್ಲಿಮರು, ಪರಿಶಿಷ್ಟರು ಒಟ್ಟಾದರೆ ಪ್ರಬಲ ಜಾತಿಗಳ ಅಧಿಕಾರದ ನೆಲೆ ಸಡಿಲಗೊಳಿಸಬಹುದು.

ಹಾಗೆ ನೋಡಿದರೆ, ಈ ವರದಿಯು ಪ್ರವರ್ಗ 1ರಲ್ಲಿದ್ದ ಅಲೆಮಾರಿ, ಅರೆ ಅಲೆಮಾರಿ ಗುಣಲಕ್ಷಣಗಳಿರುವ ಜಾತಿಯವರಿಗೆ ಆಘಾತಕಾರಿಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1ರಲ್ಲಿದ್ದ ಸಮುದಾಯಗಳಿಗೆ ಈ ಹಿಂದೆ ಕೆನೆಪದರ ನೀತಿ ಅನ್ವಯವಾಗುತ್ತಿರಲಿಲ್ಲ.

ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಹೊಸದಾಗಿ ಸೃಜಿಸಿರುವ ಪ್ರವರ್ಗ ‘1ಎ’ ಪಟ್ಟಿಯಲ್ಲಿ ಇರುವವರಿಗೆ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಯಲ್ಲಿ ಕೆನೆಪದರ ನೀತಿಯಡಿ ಆದಾಯದ ಮಿತಿ ಹೇರುವಂತೆ ಶಿಫಾರಸು ಮಾಡಿದೆ. ಪ್ರತಿಭಟಿಸಬೇಕಾದ ಸಮುದಾಯ ಇನ್ನೂ ಮೌನದಲ್ಲಿಯೇ ಇದೆ. ತಲಾ ಶೇ 3ರಷ್ಟು ಹೆಚ್ಚುವರಿ ಮೀಸಲಾತಿ ದಕ್ಕಲಿರುವ ಒಕ್ಕಲಿಗ-ಲಿಂಗಾಯತರು ಮಾತ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇದು ನಿಜಕ್ಕೂ ಚೋದ್ಯ.

ಕೊನೆಯದಾಗಿ, ಜಯಪ್ರಕಾಶ್ ಹೆಗ್ಡೆ ನೇತೃತ್ವದ ಅಯೋಗ ಹಾಗೂ ಸದಸ್ಯರ ನೇಮಕವಾಗಿದ್ದು ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ. ಎಚ್. ಕಾಂತರಾಜ ಆಯೋಗದ ದತ್ತಾಂಶವನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿದ್ದು ಇದೇ ಆಯೋಗ, ವಿಚಿತ್ರವೆಂದರೆ, ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ರಚನೆಯಾಗಿದ್ದ ಆಯೋಗದ ವರದಿ ಅವೈಜ್ಞಾನಿಕ ಹಾಗೂ ಅದನ್ನು ಕಸದಬುಟ್ಟಿಗೆ ಹಾಕಿ ಎಂದು ಬಿಜೆಪಿಯ ನಾಯಕರೇ ಏರುಧ್ವನಿಯಲ್ಲಿ ಆಗ್ರಹಿಸುತಿದ್ದಾರೆ. ಇದನ್ನು ರಾಜಕೀಯ ಎನ್ನಬೇಕೇ? ಕುಚೋದ್ಯ ಎನ್ನಬೇಕೇ? ಕಾಲವೇ ನಿರ್ಣಯಿಸಬೇಕು.

ಕೃಪೆ: ಪ್ರಜಾವಾಣಿ

Key words: Caste census, Powerful, communities,  fear, collapse , power base

The post ಜಾತಿ ಗಣತಿ: ಅಧಿಕಾರದ ನೆಲೆ ಕುಸಿಯುವ ಭೀತಿಯಲ್ಲಿ ಪ್ರಬಲ ಸಮುದಾಯಗಳು.. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ನಿರಾಕರಣೆ: ಆಕ್ರೋಶ, ಡಿಸಿಗೆ ದೂರು

ಶಿವಮೊಗ್ಗ,ಏಪ್ರಿಲ್,18,2025 (www.justkannada.in):  ಜನಿವಾರ ಹಾಕಿ ಬಂದಿದ್ದಕ್ಕೆ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ...

ಹರಕೆ ಗೂಳಿ ಸಾವು:  ಮರುಗಿದ ಜನತೆ: ಸಾಂಪ್ರದಾಯಿಕ ಅಂತ್ಯ ಸಂಸ್ಕಾರ.

ಮೈಸೂರು,ಏಪ್ರಿಲ್,18,2025 (www.justkannada.in): ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಹರಕೆ ಗೂಳಿ ಸಾವನ್ನಪ್ಪಿದ್ದು ಗೂಳಿಯ...

ಜಾತಿ ಗಣತಿ ವಿಚಾರವಾಗಿ ಸರ್ಕಾರ ಮುಕ್ತ- ಸಚಿವ ಎಂ.ಸಿ ಸುಧಾಕರ್

ಬೆಂಗಳೂರು,ಏಪ್ರಿಲ್,18,2025 (www.justkannada.in):  ಜಾತಿ ಗಣತಿ ವಿಚಾರವಾಗಿ ನಿನ್ನೆ ವಿಶೇಷ ಸಂಪುಟ ಸಭೆ...

ಜನಿವಾರ ತೆಗೆಸಿದ ಘಟನೆಗೆ ಖಂಡನೆ: ಕ್ರಮ ಕೈಗೊಳ್ಳುವ ಭರವಸೆ ನೀಡಿದ ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಏಪ್ರಿಲ್,18,2025 (www.justkannada.in):  ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಹಾಕಿದ್ದ ಜನಿವಾರ ತೆಗೆಸಿದ...