ದಕ್ಷಿಣ ಕನ್ನಡ,ಜುಲೈ12,2025 (www.justkannada.in): ಧರ್ಮಸ್ಥಳ ಗ್ರಾಮದಲ್ಲಿ ರಹಸ್ಯವಾಗಿ ನೂರಕ್ಕೂ ಹೆಚ್ಚು ಮೃತದೇಹಗಳನ್ನ ಹೂತು ಹಾಕಿದ್ದೇನೆ ಎಂದು ಇತ್ತೀಚೆಗೆ ದೂರು ನೀಡಿದ್ದ ವ್ಯಕ್ತಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 4 ರಂದು ವಕೀಲರ ಮೂಲಕ ದೂರು ನೀಡಿದ್ದ ವ್ಯಕ್ತಿ ನಿನ್ನೆ ಬೆಳ್ತಂಗಡಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ಕೆ. ಅವರ ಮುಂದೆ ಹಾಜರಾಗಿ, ಬಿಎನ್ಎಸ್ 183 ಪ್ರಕಾರ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಚೇರಿಯು, ಸಾಕ್ಷಿ ದೂರುದಾರರು ಬೆಳ್ತಂಗಡಿಯ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಸಾಕ್ಷಿ ದೂರುದಾರರು ಸ್ವತಃ ತಾವೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದಾರೆ, ಅವುಗಳನ್ನು ದೂರುದಾರರ ಪರ ವಕೀಲರು ಹಾಗೂ ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ದೂರುದಾರರಿಗೆ ಜೀವ ಬೆದರಿಕೆವೊಡ್ಡಿ, ಈ ಅಪರಾಧ ಕೃತ್ಯಗಳ ಮೃತದೇಹಗಳನ್ನು ದೂರುದಾರರ ಮೂಲಕ ರಹಸ್ಯವಾಗಿ ಹೂಳಲಾಗಿದೆ. ಹಲವಾರು ಮೃತದೇಹಗಳನ್ನು ದೂರುದಾರರು ವಿಲೇವಾರಿ ಮಾಡಿದ್ದು, ಪ್ರಸ್ತುತ ದೂರುದಾರರಿಗೆ ಪಾಪಪ್ರಜ್ಞೆ ಕಾಡುತ್ತಿದ್ದು, ಈ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿ ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ದನಿದ್ದೇನೆ ಎಂದು ವ್ಯಕ್ತಿ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.
Key words: Dharmasthala, Man, bodies, court, records, statement
The post ಧರ್ಮಸ್ಥಳ: ಮೃತದೇಹಗಳನ್ನ ಹೂತಿದ್ದೇನೆ ಎಂದಿದ್ದ ವ್ಯಕ್ತಿ ಕೋರ್ಟ್ ಗೆ ಹಾಜರು, ಹೇಳಿಕೆ ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.