ಮೈಸೂರು ಜುಲೈ, 4,2025 (www.justkannada.in): ಕ್ಷೇತ್ರ ಭೇಟಿಯಲ್ಲಿ,ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ,ಕರ್ತವ್ಯ ಲೋಪವೆಸಗುವ ಅಧಿಕಾರಿ ಸಿಬ್ಬಂದಿ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.
ಮೈಸೂರಿನ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಚಲುವರಾಯಸ್ವಾಮಿ ಅವರು, ಇನ್ನಷ್ಟು ಕಾಳಜಿ ವಹಿಸಿ ಕೆಲಸ ಮಾಡುವಂತೆ ಸೂಚನೆ ನೀಡಿದರು.
ಬಿತ್ತನೆ ಬೀಜ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ನಿಗಾ ವಹಿಸಿ. ಶೇ 100% ಬಿತ್ತನೆಯಾಗುವಂತೆ ನೋಡಿಕೊಳ್ಳಿ. ಭೂಮಿಯ ಫಲವತ್ತತೆ, ಪರಿಸರ ಸಂರಕ್ಷಣೆ ಹಾಗೂ ಮಾನವನ ಆರೋಗ್ಯದ ದೃಷ್ಟಿಯಿಂದ ರಾಸಾಯನಿಕ ಮತ್ತು ಕೀಟನಾಶಕಗಳ ಬಳಕೆ ಕಡಿಮೆ ಮಾಡಲು ರೈತಾಪಿ ವರ್ಗದಲ್ಲಿ ಜಾಗೃತಿ ಮೂಡಿಸಿ ಎಂದು ನಿರ್ದೇಶನ ನೀಡಿದರು.
ರೈತರನ್ನು ಅನಗತ್ಯವಾಗಿ ಅಲೆದಾಡಿಸಬೇಡಿ.
ಮಳೆ ಪರಿಸ್ಥಿತಿಗೆ ಅನುಗುಣವಾಗಿ ಪರ್ಯಾಯ ಬೆಳೆಗಳ ಬಗ್ಗೆಯೂ ಮಾರ್ಗದರ್ಶನ ನೀಡಿ, ಕೃಷಿ ಯಾಂತ್ರಿಕರಣ, ಕೃಷಿ ಭಾಗ್ಯ ಯೋಜನೆ ಜಾರಿ ,ಸಾವಯವ ಕೃಷಿ, ಸಮಗ್ರ ಬೇಸಾಯದ ಬಗ್ಗೆ ಜಾಗೃತಿ ಮೂಡಿಸಲು ಆದ್ಯತೆ ನೀಡಿ ಎಂದ ಅವರು ಹೇಳಿದರು.
ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳ ಫಲ ರೈತರಿಗೆ ತಲುಪಿಸುವಲ್ಲಿ ಆಸಕ್ತಿ ವಹಿಸಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಕೃಷಿ ಆಯುಕ್ತ ವೈ.ಎಸ್ ಪಾಟೀಲ್ ನಿರ್ದೇಶಕರಾದ ಡಾ. ಜಿ.ಟಿ ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹಮದ್ ಪರವೇಜ ಬಂಥನಾಳ, ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನುಪ್, ಬೀಜ ಪ್ರಮಾಣೀಕರಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಸದಾಶಿವ ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೃಷಿ ಅಧಿಕಾರಿಗಳು ಹಾಜರಿದ್ದರು.
Key words: Strict action, negligent officials, Minister, N. Chaluvarayaswamy
The post ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಎನ್.ಚಲುವರಾಯಸ್ವಾಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.