ದೊಡ್ಡಬಳ್ಳಾಪುರ ಜೂನ್, 11,2025 (www.justkannada.in): ನಮ್ಮ ಸರ್ಕಾರ ಪ್ರತೀ ವರ್ಷ 19000 ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣ ನೀಡುತ್ತಿದ್ದೇವೆ. ಹಿಂದಿನ ಬಿಜೆಪಿ ಸರ್ಕಾರ ಎರಡು ವರ್ಷ ಈ ಯೋಜನೆ ಆರಂಭಿಸಲೇ ಇಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬಂದು ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಇಂಧನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಮತ್ತು ಜಿಲ್ಲಾಡಳಿತ ಹಾಗೂ ಡಾ.ಎಚ್.ನರಸಿಂಹಯ್ಯ ಸಾಂಸ್ಕೃತಿಕ ಕೇಂದ್ರ, ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆಗೆ ನೀಡಿ, ‘ಲಿಪಿ-ಮನೆ’ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಇಂದು ನಾನು ಉದ್ಘಾಟನೆ ಮಾಡಿರುವ, 70 ಮೆವ್ಯಾ ವಿದ್ಯುತ್ ಉತ್ಪಾದನೆಯ ಸೌರೀಕರಣ ಘಟಕದಿಂದ ರೈತರಿಗೆ ಹಗಲಿನಲ್ಲೇ 3 ಫೇಸ್ ವಿದ್ಯುತ್ ಅನ್ನು 5 ಗಂಟೆಗಳ ಕಾಲ ಒದಗಿಸಲಾಗುತ್ತಿದೆ. ಸಂಪೂರ್ಣ ಗುಣಮಟ್ಟದ ವಿದ್ಯುತ್ ರೈತರ ಪಂಪ್ ಸೆಟ್ ಗಳಿಗೆ ಸಿಗುತ್ತಿರುವುದರಿಂದ ವಿದ್ಯುತ್ ಅಪವ್ಯಯ ಆಗುವುದು ತಪ್ಪಿದೆ ಎಂದು ಮೆಚ್ಚುಗೆ ಸೂಚಿಸಿದರು.
ಹೆಸರಿಗೆ ಇದು ಕೇಂದ್ರದ ಯೋಜನೆ. ಆದರೆ ರಾಜ್ಯ ಸರ್ಕಾರ ಶೇ 50 ರಷ್ಟು ಹಣ ಕೊಡುತ್ತದೆ. ಶೇ 20 ರಷ್ಟು ಹಣ ಹೂಡಿಕೆದಾರರದ್ದು. ಕೇಂದ್ರ ಸರ್ಕಾರ ಕೊಡುವುದು ಕೇವಲ ಶೇ 30 ರಷ್ಟು ಹಣ ಮಾತ್ರ. ಆದರೂ ಇದಕ್ಕೆ ಕೇಂದ್ರದ ಯೋಜನೆ ಎಂದು ಹೆಸರಿಟ್ಟಿದ್ದಾರೆ ಎಂದರು.
ಒಂದು ಮೆವ್ಯಾ ವಿದ್ಯುತ್ ಉತ್ಪಾದನೆಗೆ 3 ಕೋಟಿ ಖರ್ಚಾದರೆ ಒಂದು ಕೋಟಿ ಮಾತ್ರ ಕೇಂದ್ರ ಸರ್ಕಾರದ್ದು. ಉಳಿದದ್ದಷ್ಟನ್ನೂ ನಾವು ಕೊಡ್ತೇವೆ. ನಾವು ಅಧಿಕಾರಕ್ಕೆ ಬಂದು 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದೇವೆ. ಈಗ ಒಟ್ಟು 30 ಸಾವಿರ ಮೆವ್ಯಾ ಉತ್ಪಾದನೆ ಆಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಮೆವ್ಯಾ ಗೆ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ವಿವರಿಸಿದರು. ಆ ಮೂಲಕ ರೈತರ ಬಹು ದೊಡ್ಡ ಸಂಕಷ್ಟಕ್ಕೆ ಪರಿಹಾರ ಒದಗಿಸಿಕೊಡುತ್ತಿದ್ದೇವೆ ಎಂದರು.
ನಾವು ಚುನಾವಣೆಗೂ ಮೊದಲು ಕೊಟ್ಟಿದ್ದ ಭರವಸೆಗಳಲ್ಲಿ ಬಹುಪಾಲನ್ನು ಈಗಾಗಲೇ ಈಡೇರಿಸಿ ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ್ದದ್ದೆಲ್ಲವನ್ನೂ ಈಡೇರಿಸಿ ನುಡಿದಂತೆ ನಡೆಯುವ ನಮ್ಮ ಪರಂಪರೆಯನ್ನು ಮುಂದುವರೆಸುತ್ತೇವೆ ಎಂದರು.
ಗೌರಿಬಿದನೂರಿಗೆ ಬಂಪರ್
ಮುಂದಿನ ಬಜೆಟ್ ನಲ್ಲಿ ಗೌರಿಬಿದನೂರಿಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಅಲಿಪುರ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಪುಟ್ಟಸ್ವಾಮಿಗೌಡರು ಮತ್ತು ಶಿವಶಂಕರ ರೆಡ್ಡಿಯವರು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
Key words: Pump set, subsidy , Rs 19000 crore, each year, CM Siddaramaiah
The post ಪ್ರತೀ ವರ್ಷ 19000 ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣ ನಮ್ಮ ಸರ್ಕಾರ ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.