ಮೈಸೂರು,ಫೆಬ್ರವರಿ,7,2026 (www.justkannada.in): ಮೈಸೂರಿನಲ್ಲಿ ಕನಿಷ್ಠ 2 ಸಾವಿರ ಕ್ಯಾಮರಾಗಳನ್ನು ಅಳವಡಿಸುವ ಅಗತ್ಯವಿದೆ. ಮೈಸೂರಿನಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿ ಪ್ರವಾಸಿ ಸ್ನೇಹಿಯನ್ನಾಗಿ ಮಾಡಬೇಕು ಎಂದು ಪೊಲೀಸರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದರು.
ಮೈಸೂರಿನ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಗೃಹ ಸಚಿವ ಡಾ. ಜಿ ಪರಮೇಶರ್ ಮಾತನಾಡಿದರು.
ಬಹಳ ಸಂತೋಷದಿಂದ ಸಂಚಾರ ಪೊಲೀಸ್ ಠಾಣೆಯ ಕಟ್ಟಡದ ಉದ್ಘಾಟನೆ ಮಾಡಿದ್ದೇನೆ. ಚಿಕ್ಕಂದಿನಲ್ಲಿ ಮೈಸೂರಿಗೆ ಬರುವಾಗ ಹೇಗಿತ್ತೋ ಈಗ ಆ ರೀತಿ ಇಲ್ಲ. ಹಲವು ಬದಲಾವಣೆಗಳ ನಡುವೆಯೂ ಮೈಸೂರು ತನ್ನ ಇತಿಹಾಸ ಇಟ್ಟುಕೊಂಡು ಬೆಳೆದಿದೆ. ಮೈಸೂರನ್ನು ಪ್ರವಾಸಿ ಸ್ನೇಹಿಯಾಗಿಸಬೇಕು. ಕಳೆದ ಹತ್ತು ವರ್ಷಗಳಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಆಗಬೇಕು. ಜನ ಸಮುದಾಯ ಅದನ್ನೇ ಬಯಸುತ್ತದೆ ಎಂದರು.
ಎಲ್ಲರನ್ನೂ ಅಪರಾಧಿ ದೃಷ್ಟಿಯಿಂದ ನೋಡಬಾರದು. ಕಷ್ಟ ಪರಿಹಾರಕ್ಕಾಗಿ ಜನರು ಪೊಲೀಸ್ ಠಾಣೆಗೆ ಬರುತ್ತಾರೆ. ಕಷ್ಟ ಪರಿಹಾರಕ್ಕಾಗಿ ದೇಗುಲಕ್ಕೆ ಹೋಗುವಂತೆ ಪೊಲೀಸ್ ಠಾಣೆಗೂ ಜನರು ಬರುತ್ತಾರೆ. ಒಂದರ್ಥದಲ್ಲಿ ಪೊಲೀಸ್ ಠಾಣೆಯೂ ದೇಗುಲವಿದ್ದಂತೆ. ಹಾಗಾಗಿ ಪೊಲೀಸ್ ಠಾಣೆಗಳು ಜನಸ್ನೇಹಿ ಆಗಬೇಕು. ರಾಜ್ಯದ ಪೊಲೀಸ್ ವ್ಯವಸ್ಥೆ ಅತ್ಯುತ್ತಮ ಆಗಿದೆ. ಹಾಗಾಗಿ ಇಡೀ ದೇಶದಲ್ಲೇ ಮೂರನೇ ಸ್ಥಾನ ಗಳಿಸಿದೆ. ನಾನು ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಆಗಿದ್ದಾಗ ಮನೆ ಮನೆಗೂ ಕಾಂಗ್ರೆಸ್ ಅಭಿಯಾನ ಮಾಡಿದ್ದೆ. ಅದೇ ಮಾದರಿಯಲ್ಲಿ ಈಗ ಮನೆ ಮನೆಗೂ ಪೊಲೀಸ್ ಎಂಬ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದೇನೆ. ಪೊಲೀಸರು ಪ್ರತಿ ಮನೆಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಸೂಚಿಸಿದರು.
ಮೈಸೂರು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಗ್ರೇಟರ್ ಮೈಸೂರು ಆದರೆ ಮತ್ತಷ್ಟು ಗ್ರೇಟ್ ಆಗಲಿದೆ. ಜನಸಂಖ್ಯೆ ಹೆಚ್ಚಾಗುತ್ತದೆ. ಇದರ ಜೊತೆಗೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತದೆ. ಪೊಲೀಸರಲ್ಲಿರುವ ಕೀಳರಿಮೆ ಹೋಗಲಾಡಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಮೈಸೂರು ನಗರದಲ್ಲಿ 380 ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಮೈಸೂರಿನಲ್ಲಿ ಕನಿಷ್ಠ 2 ಸಾವಿರ ಕ್ಯಾಮರಾಗಳನ್ನು ಅಳವಡಿಸುವ ಅಗತ್ಯವಿದೆ. ಆದಷ್ಟು ಬೇಗನೆ 2 ಸಾವಿರ ಕ್ಯಾಮರಾಗಳನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ವೇದಿಕೆಯಲ್ಲಿ ಆಸೀನರಾಗಿದ್ದ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಗೆ ಸಚಿವ ಪರಮೇಶ್ವರ್ ಸೂಚಿಸಿದರು.
ಮೈಸೂರಿನಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿ ಪ್ರವಾಸಿ ಸ್ನೇಹಿಯನ್ನಾಗಿ ಮಾಡಬೇಕು. ಡ್ರಗ್ಸ್ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಬೆಂಗಳೂರಿನಲ್ಲಿ ಪ್ರತಿನಿತ್ಯವೂ ಕಠಿಣಕ್ರಮ ಕೈಗೊಳ್ಳಲಾಗ್ತಿದೆ. ಡ್ರಗ್ಸ್ ತಯಾರಿ ಶಂಕೆಯ ಕಾರಣ ರಾಜಸ್ಥಾನದಲ್ಲಿ 27 ಕೆಮಿಕಲ್ ಫ್ಯಾಕ್ಟರಿ ಗುರ್ತಿಸಿದ್ದಾರೆ. ಹಾಗಾಗಿ ರಾಜ್ಯದಲ್ಲಿರುವ ಎಲ್ಲ ಕೆಮಿಕಲ್ ಫ್ಯಾಕ್ಟರಿಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದೇವೆ. ಕರ್ನಾಟಕವನ್ನು ಮತ್ತೊಂದು ಉಡ್ತಾ ಪಂಜಾಬ್ ಆಗಲು ಬಿಡುವುದಿಲ್ಲ. ಆ ಹಂತಕ್ಕೆ ಹೋಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಶಾಸಕರಾದ ತನ್ವೀರ್ ಸೇಠ್, ಶ್ರೀವತ್ಸ, ಅನಿಲ್ ಚಿಕ್ಕಮಾದು, ಎಂಎಲ್ಸಿ., ಸಿ ಎನ್ ಮಂಜೇಗೌಡ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Key words: 2,000 , CCTV cameras, Mysore, Home Minister, Parameshwar
The post ಮೈಸೂರಿನಲ್ಲಿ 2 ಸಾವಿರ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಕ್ತ ಕ್ರಮ: ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿ-ಗೃಹ ಸಚಿವ ಪರಮೇಶ್ವರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




