ಮೈಸೂರು, ಆಗಸ್ಟ್,8,2025 (www.justkannada.in): ಆಂಧ್ರಪ್ರದೇಶದ ಖ್ಯಾತ ಧಾರ್ಮಿಕ ಕ್ಷೇತ್ರ ತಿರುಪತಿಗೆ ಸಾಂಸ್ಕೃತಿಕ ರಾಜಧಾನಿ ಮೈಸೂರು, ಮಂಡ್ಯ, ಚಾಮರಾಜನಗರದಿಂದ ಅತಿ ಹೆಚ್ಚು ಭಕ್ತರು ಪ್ರಯಾಣಿಸುತ್ತಿರುವುದರಿಂದ ಹೆಚ್ಚುವರಿ ರೈಲ್ವೆ ಸೇವೆ ಒದಗಿಸಬೇಕು ಎಂದು ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭೇಟಿ ಮಾಡಿ ತಿರುಪತಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲನ್ನು ಮೈಸೂರಿನವರೆಗೆ ವಿಸ್ತರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ ಬಳಿಕ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಸಂಸದ ಯದುವೀರ್ ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದ ತಿರುಪತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ತಿರುಪತಿಗೆ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ಭಕ್ತರ ದೀರ್ಘಕಾಲದ ಬೇಡಿಕೆಯಂತೆ ತಿರುಪತಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರವನ್ನು ಮೈಸೂರಿನವರೆಗೆ ವಿಸ್ತರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ, ಅಸ್ತಿತ್ವದಲ್ಲಿರುವ ರೈಲು ಸೇವೆಗಳು ವಿರಳವಾಗಿವೆ. ಕೆಲವು ದೀರ್ಘ ಪ್ರಯಾಣದ ಅವಧಿಯದ್ದಾಗಿದೆ. ಇದರಿಂದ ಹಿರಿಯ ನಾಗರಿಕರು, ಭಕ್ತರು ಮತ್ತು ಪ್ರವಾಸಿಗರಿಗೆ ಅನಾನುಕೂಲತೆಯನ್ನುಂಟು ಮಾಡುತ್ತಿದೆ ಎಂದು ಸಚಿವರಿಗೆ ವಿವರಿಸಲಾಯಿತು ಎಂದು ಹೇಳಿದ್ದಾರೆ.
ಮೈಸೂರು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಲಭ್ಯತೆ ಮತ್ತು ನಿರ್ವಹಣಾ ಸೌಲಭ್ಯಗಳನ್ನು ಪರಿಗಣಿಸಿ, ಮೈಸೂರು – ರೇಣಿಗುಂಟ/ತಿರುಪತಿ – ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ಆರಂಭಿಸಬಹುದಾಗಿದೆ. ಈ ನಿಟ್ಟಿನಲ್ಲಿ, ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆ ವಿಸ್ತರಿಸಲು ಎಂದು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಯದುವೀರ್ ತಿಳಿಸಿದ್ದಾರೆ.
ಈ ಅತಿ ವೇಗದ, ಆಧುನಿಕ ರೈಲು ಸೇವೆಯು ಸಾವಿರಾರು ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಪ್ರಯಾಣ ಆಯ್ಕೆಯನ್ನು ಒದಗಿಸುತ್ತದೆ. ಇದರಿಂದ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು ವಿವರಿಸಿದ್ದಾರೆ.
ಮೈಸೂರು-ರೇಣಿಗುಂಟ/ತಿರುಪತಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭವಾದರೆ ಕರ್ನಾಟಕದ ಮೈಸೂರು ಭಾಗದಿಂದ ಸಾವಿರಾರು ಭಕ್ತರು ತೆರಳಿ ದರ್ಶನ ಪಡೆಯಲು ಸಹಾಯವಾಗಲಿದೆ ಎಂದು ಯದುವೀರ್ ಹೇಳಿದ್ದಾರೆ.
ಮನವಿ ಪತ್ರವನ್ನು ಸ್ವೀಕರಿಸಿದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಅತಿ ಶೀಘ್ರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ಮಾಹಿತಿ ನೀಡಿದ್ದಾರೆ.
ರೈಲ್ವೆ ಸಚಿವರಿಗೆ ಕೃತಜ್ಞತೆ
ಮೈಸೂರು-ಚಾಮರಾಜನಗರ ರೈಲು ಮಾರ್ಗದ ವಿದ್ಯುದೀಕರಣವನ್ನು ತ್ವರಿತಗೊಳಿಸುವಲ್ಲಿ ರೈಲ್ವೆ ಸಚಿವರು ನೀಡಿದ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ, ಇದು ಈಗ ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ದಾರಿ ಮಾಡಿಕೊಡುವ ನಿರ್ಣಾಯಕ ಹೆಜ್ಜೆಯಾಗಿದೆ. ಅವರ ಸಕಾಲಿಕ ನಡೆಯು ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಯದುವೀರ್ ತಿಳಿಸಿದ್ದಾರೆ.
ರಾಮೇಶ್ವರಂಗೂ ರೈಲು ಸೇವೆಗೆ ಮನವಿ
ತಮಿಳುನಾಡಿನ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ರಾಮೇಶ್ವರಂಗೆ ಮೈಸೂರಿನಿಂದ ಇದುವರೆಗೆ ಯಾವುದೇ ನೇರ ರೈಲು ಸಂಪರ್ಕ ಇಲ್ಲ. ಇದರಿಂದ ಮೈಸೂರು ಭಾಗದ ಜನರಿಗೆ ಈ ತೀರ್ಥ ಕ್ಷೇತ್ರಕ್ಕೆ ತೆರಳಲು ಅನಾನುಕೂಲವಾಗುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು-ರಾಮೇಶ್ವರಂ ನಡುವೆ ರೈಲು ಸಂಚಾರ ಆರಂಭಿಸಬೇಕೆಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮನವಿ ಮಾಡಲಾಗಿದೆ ಎಂದು ಯದುವೀರ್ ಮಾಹಿತಿ ನೀಡಿದ್ದಾರೆ.
Key words: MP Yaduveer, Union Minister, additional train, Mysore, Tirupati
The post ಮೈಸೂರು-ತಿರುಪತಿಗೆ ಹೆಚ್ಚುವರಿ ರೈಲು ಸೇವೆ ಒದಗಿಸಿ-ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.