ಮೈಸೂರು ಮಾರ್ಚ್, 24,2026 (www.justkannada.in): ರಸ್ತೆ ಅಪಘಾತದಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದು, ಕೆಲವರು ಅಂಗವಿಕಲರಾಗುತ್ತಿದ್ದಾರೆ ಆದ್ದರಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿ ಲಕ್ಷ್ಮೀಕಾಂತ ರೆಡ್ಡಿ, ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಅಪಘಾತ ಸಂಭವಿಸದಂತೆ ಕ್ರಮಗಳನ್ನು ಕೈಗೊಳ್ಳಿ. ಅವೈಜ್ಞಾನಿಕ ಹುಬ್ಬುಗಳು ಇದ್ದರೆ ತೆರವುಗೊಳಿಸಿ. ಅಪಘಾತಗಳು ಹೆಚ್ಚು ಸಂಭವಿಸುತ್ತಿರುವ ಸ್ಥಳಗಳನ್ನು ಗುರುತಿಸಿ, ದುರಸ್ಥಿಗೆ 15 ದಿನಗಳ ಒಳಗೆ ಎಸ್ಟಿಮೇಟ್ ಸಲ್ಲಿಸಿ, ಈಗಾಗಲೇ ಅನುಮೋದನೆ ಆಗಿರುವ ಕಡೆ 30 ದಿನಗಳ ಒಳಗೆ ಕಾಮಗಾರಿ ಮುಗಿಸಬೇಕು ಎಂದು ಸೂಚನೆ ನೀಡಿದರು.
ತೀವ್ರ ತಿರುವು ಇರುವ ರಸ್ತೆಗಳಲ್ಲಿ ತಿರುವುಗಳನ್ನು ಸ್ವಲ್ಪ ಕಡಿಮೆ ಮಾಡಬೇಕು. ತಿರುವುಗಳಲ್ಲಿ ಸೈನ್ ಬೋರ್ಡ್ ಗಳನ್ನು ಅಳವಡಿಸಿ, ಅಗತ್ಯ ಇರುವ ಕಡೆ ವೈಜ್ಞಾನಿಕ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸಿ, ಹೈವೇ ರಸ್ತೆಗಳಿಗೆ ಹಂಬ್ಸ್ ಗಳನ್ನು ಅಳವಡಿಸಬಾರದು. ಪ್ರತಿಯೊಂದು ಅಪಘಾತ ವಲಯಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ವೈಜ್ಞಾನಿಕ ಕ್ರಮಗಳನ್ನು ಗುರುತಿಸಿ ಎಸ್ಟಿಮೇಟ್ ಮಾಡಿ ಅನುಮೋದನೆ ಪಡೆದು ಅಳವಡಿಸಬೇಕು. ಒಟ್ಟಿನಲ್ಲಿ ಅಪಘಾತಗಳನ್ನು ಅದಷ್ಟು ಕಡಿಮೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿಯೊಂದು ಜೀವವು ಅಮೂಲ್ಯವಾದದ್ದು, ರಸ್ತೆಗಳು ವೈಜ್ಞಾನಿಕವಾಗಿ ಇದ್ದರೆ, ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿದರೆ ಅಪಘಾತಗಳನ್ನು ಕಡಿಮೆ ಮಾಡಬಹುದು. ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರದ ವಾಹನ ಚಾಲಕರು ಕಡ್ಡಾಯವಾಗಿ ಶೀಟ್ ಬೆಲ್ಟ್ ಧರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿಪಿ ಸುಂದರ್ ರಾಜ್, ರಸ್ತೆ ಸುರಕ್ಷತಾ ಸಮಿತಿ ಸಭೆಯ ಸದಸ್ಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Key words: precautionary, prevent, road accidents, Mysore DC, G Laxmikanth Reddy
The post ರಸ್ತೆ ಅಪಘಾತಗಳ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ – DC ಜಿ ಲಕ್ಷ್ಮೀಕಾಂತ ರೆಡ್ಡಿ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




