ಬೆಂಗಳೂರು ಜುಲೈ,1,2025 (www.justkannada.in): ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು. ಸತ್ಯ ಬರೆಯಿರಿ, ಜನರ ಪ್ರಜಾಪ್ರಭುತ್ವದ ಪರವಾಗಿ ಇರಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ “ಪತ್ರಿಕಾ ದಿನಾಚರಣೆ-2025” ಹಾಗೂ “ನಿಜ ಸುದ್ದಿಗಾಗಿ ಸಮರ” ಸಂವಾದವನ್ನು ಉದ್ಘಾಟಿಸಿ, ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಅಂಥ ತಾನೇ ಅರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಊಹಾ ಪತ್ರಿಕೋದ್ಯಮ ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ. ಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಯಾವುದೇ ಚಾನಲ್ ಗಳು ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಕೂಡ ಮಾಡುವುದಿಲ್ಲ ಎಂದರು.
ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ ? ಜನರನ್ನು ಮೌಢ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ನಾನು ಇಂದು ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಆರೋಗ್ಯ ಸಂಜೀವಿನಿ ಉದ್ಘಾಟಿಸಿ ಪತ್ರಕರ್ತರಿಗೆ ಅನುಕೂಲ ಒದಗಿಸಿದ್ದೇವೆ. ನಮ್ಮ ಪರವಾಗಿ ಬರೆಯಲಿ ಎನ್ನುವ ಕಾರಣದಿಂದ ಜಾರಿ ಮಾಡಿರುವುದಲ್ಲ. ಸತ್ಯ ಬರೆಯಿರಿ, ಜನರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಇರಿ ಎಂದು ಕರೆ ನೀಡಿದರು.
ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಎಚ್ಚರಿಸುವ, ಸ್ವಾತಂತ್ರ್ಯ ಹೋರಾಟದ ಪರವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು. ಸಂವಿಧಾನದ ಮೌಲ್ಯಗಳು ಮತ್ತು ಸತ್ಯವನ್ನು ಮರೆಮಾಚುವ ಕೆಲಸ ಆಗಬಾರದು. ಎಲ್ಲ ಜನರಿಗೂ ಸಮಾನ ಅವಕಾಶ ಮತ್ತು ಜಾತಿ-ವರ್ಗ ರಹಿತ ಸಮಾಜ ಸೃಷ್ಟಿಯಾಗಬೇಕು ಎನ್ನುವುದು ಸಂವಿಧಾನದ ಮೌಲ್ಯ. ಇದನ್ನು ಎತ್ತಿ ಹಿಡಿಯುವುದು ಪತ್ರಿಕಾ ವೃತ್ತಿಯ ಜವಾಬ್ದಾರಿ. ದ್ವೇಷದ, ಪ್ರೀತಿಯಿಲ್ಲದ ಸಮಾಜ ಸೃಷ್ಟಿಸುವ ಪ್ರಯತ್ನಕ್ಕೆ ಮಾಧ್ಯಮಗಳು ಬೆಂಬಲಿಸಬಾರದು. ನನ್ನ ಮಾತುಗಳನ್ನು ಕೇವಲ ಪಕ್ಷದ ಚೌಕಟ್ಟಿನಲ್ಲಿ ಮಾತ್ರ ನೋಡದೆ ಸಮಾಜ ಮುಖಿಯಾಗಿ ಕೂಡ ನೋಡಬೇಕು ಎಂದರು.
Key words: CM Siddaramaiah, Press Day-2025, bus pass, journalists
The post ಓಲೈಕೆ ಬೇಡ: ಸತ್ಯ ಬರೆಯಿರಿ, ಜನರ ಪ್ರಜಾಪ್ರಭುತ್ವದ ಪರವಾಗಿ ಇರಿ- ಮಾಧ್ಯಮಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.