ಬೆಂಗಳೂರು,ಜುಲೈ,3,2025 (www.justkannada.in): ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ ಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕರ್ನಾಟಕದ ಬಿಜೆಪಿ ನಾಯಕರಿಂದ ಮಹಿಳೆಯರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಓರ್ವ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರೀತಿ ಬಿಜೆಪಿ ಎಂಎಲ್ಸಿ ಅವರ ಮನಸ್ಥಿತಿ ಎಂಥಹದ್ದು ಎಂದು ತೋರಿಸುತ್ತದೆ. ರವಿ ಕುಮಾರ್ ಅವರು ಸಮಸ್ತ ಮಹಿಳಾ ಕುಲಕ್ಕೆ ಮಾಡಿರುವ ಅವಮಾನ ಇದಾಗಿದೆ. ರವಿಕುಮಾರ್ ಅವರ ಹೇಳಿಕೆಯನ್ನು ಕೇಂದ್ರ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುವರೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಸಿಟಿ ರವಿ ಅವರು ನನ್ನ ಬಗ್ಗೆ ಕೆಟ್ಟಾಗಿ ಮಾತನಾಡಿದಾಗ ಆ ಪಕ್ಷದ ನಾಯಕರು ಒಂದೂ ಮಾತನಾಡಲಿಲ್ಲ. ಇಂಥ ನಾಯಕರ ಹೇಳಿಕೆಗಳಿಗೆ ಕೇಂದ್ರದ ನಾಯಕರು ಪರೋಕ್ಷ ಬೆಂಬಲ ನೀಡಿದಂತಿದೆ. ಇದು ಮಹಿಳೆಯರಿಗೆ ಬಿಜೆಪಿ ನಾಯಕರು ಕೊಡುವ ಗೌರವ ಎಂತದ್ದು ಎಂಬುದನ್ನು ತೋರಿಸುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂಥ ಅವಹೇಳನಕಾರಿ ಪದಗಳನ್ನು ಬಳಸುವ ಬಿಜೆಪಿ ನಾಯಕರಿಗೆ ಬುದ್ದಿ ಭ್ರಮಣೆಯಾಗಿದೆ ಅನಿಸುತ್ತದೆ. ಇನ್ನು ಮುಂದಾದರೂ ಇಂಥ ಹೇಳಿಕೆಗಳನ್ನು ನೀಡದೆ, ಜವಾಬ್ದಾರಿಯಿಂದ ವರ್ತಿಸಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕ್ಷಮೆಯಾಚನೆಗೆ ಪಟ್ಟು
ಸಾರ್ವಜನಿಕವಾಗಿ ಮಹಿಳಾ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರವಿ ಕುಮಾರ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ. ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳಲಿ, ಇಲ್ಲವಾದರೆ ರವಿ ಕುಮಾರ್ ಅವರು ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ ನೀಡಿದ್ದಾರೆ.
Key words: BJP, insult, women, Ravi Kumar, Minister, Lakshmi Hebbalkar
The post ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಕ್ಷಮೆಯಾಚಿಸಲು ರವಿ ಕುಮಾರ್ ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.