ಮೈಸೂರು,ಜುಲೈ,3,2025 (www.justkannada.in): ಆಷಾಢ ಮಾಸ ಹಿನ್ನೆಲೆಯಲ್ಲಿ ಇಂದು ಚಾಮುಂಡಿ ಬೆಟ್ಟಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ನಾಡದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಆಷಾಡ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಮಾಡಲಾಗಿರುವ ವ್ಯವಸ್ಥೆಯನ್ನ ಸಂಸದ ಯದುವೀರ್ ಖುದ್ದು ಪರಿಶೀಲನೆ ನಡೆಸಿದರು. ಆಷಾಢ ಮಾಸದ ದರ್ಶನದಲ್ಲಿ ಅವ್ಯವಸ್ಥೆ ಎಂಬ ವಿಚಾರ ಕೇಳಿ ಬಂದ ಹಿನ್ನಲೆಯನ್ನ ಸಂಸದ ಯದುವೀರ್ ಭೇಟಿ ನೀಡಿದ್ದು, 2000 ಟಿಕೆಟ್, 300 ರೂ ಟಿಕೆಟ್, ಸಾಮಾನ್ಯ ದರ್ಶನ ಭಾಗದಲ್ಲಿ ವೀಕ್ಷಣೆ ನಡೆಸಿದರು. ಈ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ರೂಪ ಉಪಸ್ಥಿತರಿದ್ದು ಅವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್, ಬೆಟ್ಟದಲ್ಲಿ ಭಕ್ತಾಧಿಗಳಿಗೆ ಅವ್ಯವಸ್ಥೆ ಆಗಿದೆ ಎಂದು ದೂರು ಕೇಳಿ ಬಂದಿತ್ತು. ಅದರ ಪ್ರಯುಕ್ತ ಇಂದು ನಾನು ಒಬ್ಬ ಜನಪ್ರತಿನಿಧಿಯಾಗಿ ಭೇಟಿ ಮಾಡಿದ್ದೇನೆ. ಎಲ್ಲವನ್ನು ವೀಕ್ಷಣೆ ಮಾಡಿದ್ದೇನೆ. ಅಧಿಕಾರಿಗಳಿಗೂ ಸೂಚನೆ ನೋಡಿದ್ದೇನೆ. ದರ್ಶನ ಸಂದರ್ಭದಲ್ಲಿ ಸರಿಯಾಗಿ ವ್ಯವಸ್ಥೆ ಮಾಡಿಲ್ಲ, ಧರ್ಮ ದರ್ಶನ, ಟಿಕೆಟ್ ಪಡೆದು ಹೋಗುವವರು ಎಲ್ಲರಿಗೂ ಒಂದು ಕಡೆ ಬಂದು ಸೇರಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ ಮತ್ತು ಪ್ರಸಾದ ವಿತರಣೆಯಲ್ಲೂ ಸರಿಯಾಗಿ ವಿತರಣೆ ಮಾಡಿತ್ತಿಲ್ಲ ಎಂಬ ದೂರು ಕೇಳಿ ಬಂದಿತ್ತು. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
ಚಾಮುಂಡಿ ಬೆಟ್ಟದಲ್ಲೂ ವಸ್ತ್ರ ಸಂಹಿತೆ ಜಾರಿಯಾಗಬೇಕು.
ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ವಸ್ತ್ರ ಸಂಹಿತೆ ಪರವಾಗಿ ನಾನು ಯಾವಾಗಲು ಇದ್ದೇನೆ. ಧಾರ್ಮಿಕ ಕ್ಷೇತ್ರಗಳಿಗೆ ಬಂದಾಗ ಜನರು ಧಾರ್ಮಿಕ ಭಾವನೆಯಿಂದಲೇ ಬರಬೇಕು. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಚಾಮುಂಡಿ ಬೆಟ್ಟದಲ್ಲೂ ವಸ್ತ್ರ ಸಂಹಿತೆ ಜಾರಿಯಾಗಬೇಕು. ಇದರಿಂದ ಬರುವ ಭಕ್ತರಿಗೂ ಸಮಸ್ಯೆ ಆಗಬಾರದು. ತಿರುಪತಿ ಮಾದರಿ ಚಾಮುಂಡಿ ಬೆಟ್ಟದಲ್ಲೂ ಮೊಬೈಲ್ ನಿರ್ಬಂಧ ಮಾಡಬೇಕು. ಇತ್ತೀಚಿಗೆ ಕೆಲವರು ಗೊತ್ತಿದ್ದೋ ಗೊತ್ತೊಲ್ಲದೋ ದೇವಿಯ ಮೂಲ ವಿಗ್ರಹದ ವಿಡಿಯೋ ಮಾಡುತ್ತಿದ್ದಾರೆ. ಇದು ಧಾರ್ಮಿಕ ಕ್ಷೇತ್ರದ ಪಾವಿತ್ರತೆಗೆ ಧಕ್ಕೆ ತರುತ್ತದೆ. ಹಾಗಾಗಿ ಈ ನಿಟ್ಟಿನಲ್ಲಿ ಸೂಕ್ತ ಕಾನೂನನ್ನು ಜಾರಿ ಮಾಡಬೇಕು ಎಂದರು.
ಸ್ವಯಂ ನಿವೃತ್ತಿಗೆ ಪೊಲೀಸ್ ಅಧಿಕಾರಿ: . ಸಿಎಂ ಸಿದ್ದರಾಮಯ್ಯ ವರ್ತನೆ ಸರಿ ಇರಲಿಲ್ಲ
ಸಿಎಂ ಸಿದ್ದರಾಮಯ್ಯ ಪೋಲಿಸ್ ಅಧಿಕಾರಿಗೆ ಗದರಿದ್ದ ವಿಚಾರ, ಸಿಎಂ ಬಹಿರಂಗವಾಗಿ ಬೈದ ಕಾರಣ ಪೊಲೀಸ್ ಅಧಿಕಾರಿ ಸ್ವಯಂ ನಿವೃತ್ತಿ ಘೋಷಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಮೈಸೂರಿನ ಸಂಸದ ಯದುವೀರ್ ಒಡೆಯರ್, ಅವರು ಮಾನಸಿಕವಾಗಿ ಕುಗ್ಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಅಧಿಕಾರಿಗಳು ತಪ್ಪು ಮಾಡಿದ್ದರೆ, ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಲಿ. ಈ ರೀತಿ ಬಹಿರಂಗವಾಗಿ ಅಧಿಕಾರಿಗೆ ಅವಮಾನ ಮಾಡುವುದು ಸರಿಯಲ್ಲ. ಇದು ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ ಎಲ್ಲೂ ಆಗಬಾರದು ಅಧಿಕಾರಿಗಳು ಜನಪ್ರತಿನಿಧಿಗಳು ಪರಸ್ಪರ ಗೌರವ ಕೊಟ್ಟು ಕೆಲಸ ಮಾಡಬೇಕು. ಸಿಎಂ ಸಿದ್ದರಾಮಯ್ಯ ನಡೆದುಕೊಂಡು ರೀತಿ ಎಲ್ಲರೂ ಮಾಧ್ಯಮಗಳಲ್ಲಿ ನೋಡಿದ್ದಾರೆ. ಸಿಎಂ ಸಿದ್ದರಾಮಯ್ಯ ವರ್ತನೆ ಸರಿ ಇರಲಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಆದೇಶ ಪಾಲಿಸಬೇಕು. ಒಂದು ವೇಳೆ ಪಾಲಿಸದಿದ್ದರೆ ಅದನ್ನ ಕೇಳಲು ಸಾಕಷ್ಟು ಮಾರ್ಗಗಳಿವೆ. ಅದನ್ನ ಬಿಟ್ಟು ನಿಂದಿಸಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹುಲಿ ಮತ್ತು ಕೋತಿಗಳ ಮಾರಣಹೋಮ: ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ
ಚಾಮರಾಜನಗರದಲ್ಲಿ ಹುಲಿಗಳು ಹಾಗು ಕೋತಿಗಳ ಹತ್ಯೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಈ ಸಂಬಂಧ ಚಾಮರಾಜನಗರದ ಯಾವುದೇ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಇದೊಂದು ಗಂಭೀರ ಸಮಸ್ಯೆ ಆಗಿದೆ. ಯಾಕೆ ಅವರಿಗೆ ಅರ್ಥ ಆಗುತ್ತಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ನಾನು ಮಾತ್ರವೇ ಧ್ವನಿ ಎತ್ತುವ ಕೆಲಸ ಆಗುತ್ತಿದೆ. ಅರಣ್ಯ ರಾತ್ರಿ ಸಂಚಾರದ ಬಗ್ಗೆ ಕೂಡ ಸದನದಲ್ಲಿ ನಾನೋಬ್ಬನೇ ದನಿ ಎತ್ತುತ್ತಿದ್ದೇನೆ. ಚಾಮರಾಜನಗರ ಜನಪ್ರತಿನಿಧಿಗಳು ಇನ್ನಾದರೂ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣ ಸಂಬಂಧ ಅರಣ್ಯ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಆಗಬೇಕು. ಅರಣ್ಯ ಅಧಿಕಾರಿಗಳು ಸಭೆ ಕರೆದಾಗಲೂ ಯಾರೂ ಬರುವುದಿಲ್ಲ. ಅರಣ್ಯದ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದುಕೊಂಡಿದ್ದಾರೆ. ಆದರೆ ನಮಗೆ ಎಲ್ಲ ಗೊತ್ತಿದೆ. ಚಾಮರಾಜನಗರ ಶೇಕಡ 50ಕ್ಕೂ ಹೆಚ್ಚು ಅರಣ್ಯ ಹೊಂದಿದೆ. ಅದನ್ನ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷತ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಪಕ್ಷದ ಆಂತರಿಕ ವಿಚಾರವನ್ನ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ, ಕಾಂಗ್ರೆಸ್ ಆಂತರಿಕ ವಿಚಾರದ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಆಂತರಿಕ ಕಚ್ಚಾಟದಿಂದ ಆಡಳಿತ ಯಂತ್ರ ಕುಸಿದಿದೆ. ಪ್ರಾಣಿಗಳ ಸಾವು, ಚಾಮುಂಡಿ ಬೆಟ್ಟದ ನಿರ್ವಹಣೆ ಸೇರಿ ಎಲ್ಲಾ ವಲಯದಲ್ಲಿ ವಿಫಲವಾಗಿದೆ.ಇದೆಲ್ಲಾ ಬಿಟ್ಟು ಸರ್ಕಾರ ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಬೇಕು ಎಂದು ಯದುವೀರ್ ಹೇಳಿದರು.
Key words: Ashada Friday, MP Yaduveer , arrangements, Chamundi Hills
The post ಆಷಾಢ ಶುಕ್ರವಾರ: ಚಾ.ಬೆಟ್ಟದ ವ್ಯವಸ್ಥೆ ಪರಿಶೀಲಿಸಿದ ಸಂಸದ ಯದುವೀರ್. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.