ಬೆಂಗಳೂರು,ಜುಲೈ,22,2025 (www.justkannada.in): ಕುಸುಮ್ ಬಿ ಯೋಜನೆಯಡಿ 40 ಸಾವಿರ ಪಂಪ್ ಸೆಟ್ ಗಳಿಗೆ ಅನುಮೋದನೆ ನೀಡಲಾಗಿದ್ದು, ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕುಸುಮ್ ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕುಸುಮ್ ಬಿ ಯೋಜನೆಯಡಿ ಸೋಲಾರ್ ಕೃಷಿ ಪಂಪ್ಸೆಟ್ ಅಳವಡಿಸಲು, ಕೇಂದ್ರ ಸರ್ಕಾರ ಶೇ.30, ರಾಜ್ಯ ಸರ್ಕಾರ ಶೇ.50ರಷ್ಟು ಸಬ್ಸಿಡಿ ಒದಗಿಸುತ್ತಿದ್ದು, ಫಲಾನುಭವಿಗಳು ಶೇ.20ರಷ್ಟು ಭರಿಸಬೇಕಿದೆ. ಈ ಯೋಜನೆಯಡಿ 40 ಸಾವಿರ ಪಂಪ್ಸೆಟ್ಗಳಿಗೆ ಅನುಮೋದನೆ ನೀಡಲಾಗಿದ್ದು, ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
25 ಸಾವಿರ ರೈತರು ಹೆಚ್ಚುವರಿಯಾಗಿ ಕುಸುಮ್ ಬಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ. ಯೋಜನೆಯಡಿ ರಾಜ್ಯ ಸರ್ಕಾರ 752 ಕೋಟಿ ರೂ. ವೆಚ್ಚ ಮಾಡಲಿದೆ. ಯೋಜನೆ ಸಮರ್ಪಕ ಅನುಷ್ಠಾನಗೊಳಿಸಿದ ಬಳಿಕ ಸಬ್ಸಿಡಿ ಮೊತ್ತ ಕಡಿಮೆಯಾಗಲಿದೆ. 4.5ಲಕ್ಷ ಅನಧಿಕೃತ ಐಪಿ ಸೆಟ್ ಗಳ ಪೈಕಿ 2ಲಕ್ಷ ಐಪಿ ಸೆಟ್ ಸಂಪರ್ಕ ಅಧಿಕೃತಗೊಳಿಸಲಾಗಿದೆ. ಈ ಅನಧಿಕೃತ ಐಪಿ ಸೆಟ್ಗಳನ್ನು ಕುಸುಮ್ ಬಿ ಯೋಜನೆಯಡಿ ಆದ್ಯತೆ ಮೇಲೆಗೆ ತರುವ ಬಗ್ಗೆ ಚರ್ಚೆ ಮಾಡಲಾಗಿದ್ದು, ರೈತರಿಗೆ ಸ್ವಯಂ ವಿದ್ಯುತ್ ಮೂಲಸೌಕರ್ಯ ಕಲ್ಪಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಟ್ರಾನ್ಸ್ ಫಾರ್ಮ್ ಗಳನ್ನು ಇಲಾಖೆ ಒದಗಿಸಲಿದೆ.
ನೀರಾವರಿ ಪಂಪ್ ಸೆಟ್ ಗಳಿಗೆ 2024-25ರ ಸಾಲಿನಲ್ಲಿ 12785 ಕೋಟಿ ರೂಪಾಯಿಗಳ ಅನುದಾನ ಹಂಚಿಕೆ ಆಗಿದ್ದು ಫೆಬ್ರವರಿ 2025 ವರೆಗೆ ರೂ. 11720ಕೋಟಿ ಬಿಡುಗಡೆ ಆಗಿದೆ. 2025-26ರಲ್ಲಿ 16021 ಕೋಟಿ ರೂಪಾಯಿಗಳ ಆಯವ್ಯಯ ಹಂಚಿಕೆ ಆಗಿದೆ ಎಂದು ತಿಳಿಸಿದರು.
ಇಂಧನ ಸಚಿವ ಕೆ.ಜೆ ಜಾರ್ಜ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Kusum B Scheme, CM Siddaramaiah, adopt, 40 thousand, pump sets
The post ಕುಸುಮ್ ಬಿ ಯೋಜನೆ: 40 ಸಾವಿರ ಪಂಪ್ ಸೆಟ್ ಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.