ಬೆಂಗಳೂರು,ಮಾರ್ಚ್,10,2026 (www.justkannada.in): ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಈ ಮೂರೂ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಸೂಕ್ತ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಹೇಗೆ ಎನ್ನುವ ಚಿಂತನೆ ಇದೆ. ಆದರೆ, ಈ ಸಂಬಂಧ ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಮುಖ್ಯಮಂತ್ರಿ ಜತೆ ಸಭೆ ನಡೆಸಿದ ನಂತರ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಅವರು ವಿಧಾನ ಪರಿಷತ್ತಿಗೆ ತಿಳಿಸಿದರು.
ಬಿಜೆಪಿ ಸದಸ್ಯ ವೈ ಎಂ ಸತೀಶ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ ಪಾಟೀಲ್, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಆಲೋಚನೆ ಬಂದಿದ್ದು 2010ರಲ್ಲಿ. ಇದಕ್ಕಾಗಿ 900 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಚೆನ್ನೈನ ಮೆ.ಮಾರ್ಗ್ ಶ್ರೀಕೃಷ್ಣದೇವರಾಯ ಏರ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಿಮಾನ ನಿಲ್ದಾಣ ನಿರ್ಮಿಸಲು ವಹಿಸಿ, ಭೂಮಿಯನ್ನು ಹಸ್ತಾಂತರಿಸಲಾಗಿತ್ತು. ಆದರೆ, ಆ ಸಂಸ್ಥೆಯು ನಿಯಮಾನುಸಾರ 2 ವರ್ಷವಾದರೂ ಕೆಲಸ ಶುರು ಮಾಡಲಿಲ್ಲ. ಹೀಗಾಗಿ, ಅದರೊಂದಿಗಿನ ಒಪ್ಪಂದ ರದ್ದಾಗಿದೆ. ಇದಾದ ಮೇಲೆ, ಯೋಜನೆಗೆ ಡಿಪಿಆರ್ ತಯಾರಿಸಲು ಸಲಹೆಗಾರರನ್ನು ನೇಮಿಸಿಕೊಳ್ಳಲು ಕಳೆದ ಅಕ್ಟೋಬರ್ ನಲ್ಲಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ವಿವರಿಸಿದ್ದಾರೆ.
ಈ ನಡುವೆ ವಿಜಯನಗರ ಮತ್ತು ಕೊಪ್ಪಳ ಭಾಗದವರೂ ವಿಮಾನ ನಿಲ್ದಾಣ ಬೇಕೆನ್ನುತ್ತಿದ್ದಾರೆ. ಹೀಗಾಗಿ ಜಿಲ್ಲೆಗೊಂದು ವಿಮಾನ ನಿಲ್ದಾಣ ಮಾಡುವುದು ಕಾರ್ಯಸಾಧುವಲ್ಲ ಎಂದು ಈ ರೀತಿಯ ಚಿಂತನೆ ಮಾಡಲಾಗುತ್ತಿದೆ. ಆದರೆ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಕ್ಕೆಂದು ಸ್ವಾಧೀನ ಪಡಿಸಿಕೊಂಡಿರುವ ಜಮೀನನ್ನು ವಾಪಸ್ ಕೊಡಲು ಬರುವುದಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಕೇಂದ್ರ ಸರಕಾರವು ದೇಶೀಯ ವಿಮಾನಯಾನ ಉತ್ತೇಜಿಸಲು ಉಡಾನ್ ಯೋಜನೆ ತಂದಿದೆ. ಅದರಿಂದ ಮೊದಲ ಮೂರು ವರ್ಷಗಳ ಕಾಲ ರಾಜ್ಯದ ವಿಮಾನ ನಿಲ್ದಾಣಗಳು ಚೆನ್ನಾಗಿ ನಡೆದವು. ಇದಾದ ಮೇಲೆ ಬೀದರ್, ಕಲಬುರಗಿ ವಿಮಾನ ನಿಲ್ದಾಣಗಳಿಂದ ವಿಮಾನ ಸೇವೆ ಸ್ಥಗಿತಗೊಂಡಿತು. ಈಗ ಬೀದರ್ ನಡೆಯುತ್ತಿದೆ. ಈ ಪರಿಸ್ಥಿತಿ ಬಳ್ಳಾರಿ ವಿಮಾನ ನಿಲ್ದಾಣಕ್ಕೂ ಬರಬಾರದು ಎನ್ನುವ ಕಾರಣಕ್ಕೆ ಮೂರೂ ಜಿಲ್ಲೆಗಳನ್ನು ಸೇರಿಸಿಕೊಂಡು ಸೂಕ್ತ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶ ಇದೆ ಎಂದು ಹೇಳಿದರು.
ಬಳ್ಳಾರಿ ವಿಮಾನ ನಿಲ್ದಾಣವನ್ನು ಬಿಳಿಯಾನೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ಕಲ್ಬುರ್ಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಸೊರಗಿವೆ. ಆದ್ದರಿಂದ ಉಡಾನ್ ಯೋಜನೆಯನ್ನು 5 ವರ್ಷಗಳಿಗೆ ವಿಸ್ತರಿಸಬೇಕೆಂದು ಕೇಳುತ್ತಿದ್ದೇವೆ. ಮೂರೂ ಜಿಲ್ಲೆಗಳಿಗೆ ಸರಿ ಹೊಂದುವ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಆರ್ಥಿಕ ವಾಗಿಯೂ ಕಾರ್ಯಸಾಧುವಾಗಲಿದೆ ಎನ್ನುವ ಭಾವನೆ ಇದೆ. ಈ ಸಂಬಂಧ ಎಲ್ಲರ ಜತೆ ಚರ್ಚಿಸಿಯೇ ತೀರ್ಮಾನಿಸಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ಅವರು ಸಭೆಗೆ ತಿಳಿಸಿದರು.
ವಿಜಯಪುರದಲ್ಲಿ 3 ಕಂಪನಿಗಳಿಂದ ಹೂಡಿಕೆ
ಬಿಜೆಪಿ ಸದಸ್ಯ ಪಿ.ಎಚ್ ಪೂಜಾರ ಕೇಳಿದ ಮತ್ತೊಂದು ಪ್ರಶ್ನೆಗೆ ಸಚಿವ ಎಂ.ಬಿ ಪಾಟೀಲ್, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಿಮೆಂಟ್ ಮತ್ತು ಸಕ್ಕರೆ ಉದ್ಯಮ ಬಿಟ್ಟು ಬೇರೆ ಕ್ಷೇತ್ರಗಳಿಗೆ ಸೇರಿದ ಉದ್ಯಮಗಳ ಸ್ಥಾಪನೆಗೆ ಮಾತುಕತೆ ನಡೆದಿದೆ.
ವಿಜಯಪುರ ಜಿಲ್ಲೆಯಲ್ಲಿ ಈ ಉದ್ಯಮಗಳಲ್ಲದೆ, ಇತರ 7-8 ಕಂಪನಿಗಳ ಜತೆ ಹೂಡಿಕೆ ಸಂಬಂಧ ಮಾತುಕತೆ ನಡೆಸಲಾಗಿದೆ. ಈ ಪೈಕಿ ರಿಲಯನ್ಸ್ ಸಮೂಹದ ಭಾಗವಾದ ಕ್ಯಾಂಪಾಕೋಲಾ, ಪವನ ವಿದ್ಯುತ್ ವಲಯಕ್ಕೆ ಸೇರಿದ ಸುಜ್ಲಾನ್ ಹಾಗೂ ತೊಗರಿ ಬೇಳೆ ಸಂಸ್ಕರಣೆ ಮಾಡುವ ವಿಟೇರಾ ಸಂಸ್ಥೆ ಹೂಡಿಕೆ ಮಾಡುವುದು ನಿಶ್ಚಿತವಾಗಿದೆ. ಕ್ಯಾಂಪಾಕೋಲಾ ಮುಂದಿನ ವಾರದಲ್ಲೇ ತನ್ನ ಸ್ಥಾವರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುತ್ತಿದೆ. ಉಳಿದ 5 ಕಂಪನಿಗಳ ಜತೆ ವಿಚಾರ ವಿನಿಮಯ ಪ್ರಗತಿಯಲ್ಲಿದೆ ಎಂದು ಉತ್ತರಿಸಿದ್ದಾರೆ.
Key words: Airport, Kalyan Karnataka, Meeting, Minister, M.B. Patil
The post ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಮಾನ ನಿಲ್ದಾಣ: ಸಭೆ ಮಾಡಿ ಅಂತಿಮ ನಿರ್ಧಾರ- ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




