ಬೆಂಗಳೂರು, ಫೆಬ್ರವರಿ, 21,2025 (www.justkannada.in): ಬೆಂಗಳೂರಿನ ಅಭಿವೃದ್ಧಿಗಾಗಿ ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸಬೇಕು. ಇದಕ್ಕಾಗಿ ನ್ಯಾಯಾಲಯದಲ್ಲಿ ವಾದ ಮಾಡಲು ತಜ್ಞರ ತಂಡ ರಚಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.
ಬಿಬಿಎಂಪಿ ಚುನಾವಣೆ ಹಾಗೂ ಬೆಂಗಳೂರಿನ ಅಭಿವೃದ್ಧಿ ಕುರಿತು ನಡೆದ, ಬಿಜೆಪಿ ಶಾಸಕರು, ಮುಖಂಡರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಆರ್.ಅಶೋಕ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಈ ಸಂಬಂಧ ನ್ಯಾಯಾಲಯದಲ್ಲಿ ವಾದ ಮಾಡಲು 15 ತಜ್ಞರ ತಂಡವನ್ನು ರಚಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿ ಸೊನ್ನೆಯಾಗಿದೆ. ರಸ್ತೆಗುಂಡಿಗಳ ಆಕಾರ ಸೊನ್ನೆಯಾಗಿರುವಂತೆಯೇ ಅಭಿವೃದ್ಧಿಯೂ ಸೊನ್ನೆಯೇ ಆಗಿದೆ. ರಸ್ತೆಗುಂಡಿಗಳಿಂದ ಬಿದ್ದು ಗಾಯಕ್ಕೊಳಗಾಗಿ ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಎಲ್ಲ ಕಡೆ ಕಸದ ರಾಶಿ ಕಂಡುಬರುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಿಮಾಲಯದ ಶಿಖರದಂತೆ ನಗರದ ಅಭಿವೃದ್ಧಿಯನ್ನು ಬ್ರ್ಯಾಂಡ್ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಅವರೇ ಬೆಂಗಳೂರನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ವಿರುದ್ಧ ಹೋರಾಟ ರೂಪಿಸಲು ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ಚುನಾವಣೆ ನಡೆಸುವ ಮನಸ್ಸಿಲ್ಲದ ಸರ್ಕಾರ, ಗ್ರೇಟರ್ ಬೆಂಗಳೂರು ರಚಿಸುತ್ತೇವೆ, ಇನ್ನಷ್ಟು ಪ್ರದೇಶಗಳನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದು ಹೇಳುತ್ತಿದೆ. ಇರುವ ನಗರವನ್ನೇ ಸುಧಾರಣೆ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಹೊಸ ಪ್ರದೇಶಗಳ ಅಭಿವೃದ್ಧಿ ಹೇಗೆ ಸಾಧ್ಯ? ಬೆಂಗಳೂರನ್ನು ಒಡೆದರೆ ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಮಾಡಿದಂತಾಗುತ್ತದೆ. ಕೆಂಪೇಗೌಡರನ್ನು ನಂಬುವ ಜನರ ಮನಸ್ಸಿಗೆ ನೋವಾಗುತ್ತದೆ ಎಂದರು.
ಈಗ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಿದರೆ ಸಾಕು. ರಸ್ತೆ ಮೇಲ್ಭಾಗದಲ್ಲೇ ಸುರಂಗ ನಿರ್ಮಾಣವಾಗುತ್ತಿರುವಾಗ 150 ಅಡಿ ಕೆಳಗೆ ಸುರಂಗ ಕೊರೆಯಲು ಹೊರಟಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗಳಿಂದ ಜನರು ರೊಚ್ಚಿಗೆದ್ದಿದ್ದಾರೆ. ಬೆಂಗಳೂರು ಇಂದು ಸರಿಹೋಗಲಿದೆ ಎಂದು ಜನರು ಕಾಯುತ್ತಿದ್ದಾರೆ. ಬೆಂಗಳೂರಿಗೆ ಬೆಂಗಳೂರಿನವರೇ ಆದ ಸಚಿವರಿಲ್ಲ. ಬೇರೆ ಜಿಲ್ಲೆಯ ಸಚಿವರಿಗೆ ನಗರದ ಬಗ್ಗೆ ಆಸಕ್ತಿ ಇಲ್ಲ. ಸರ್ಕಾರದಿಂದಾಗಿ ಬೆಂಗಳೂರು ಅನಾಥವಾಗಿದೆ ಎಂದು ದೂರಿದರು.
ಬೆಂಗಳೂರು ಮಾಫಿಯಾಗಳ ಕೈಗೆ ಸಿಲುಕಿದೆ. ಡಾನ್‌ಗಳ ಕೈಗೆ ಸಿಕ್ಕಿದೆ. ಮೈಸೂರು ಗಲಭೆ, ಬೆಂಗಳೂರಿನ ಬಾಂಬ್ ಬ್ಲಾಸ್ಟ್, ಅತ್ಯಾಚಾರ ಮೊದಲಾದ ಅಪರಾಧಿ ಚಟುವಟಿಕೆ ನಡೆಯುತ್ತಿದೆ. ಜನರೇ ಸ್ವತಃ ಆತ್ಮರಕ್ಷಣೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಕಾಂಗ್ರೆಸ್ ನಾಯಕರು ಇನ್ನೂ ಗ್ಯಾರಂಟಿಗಳ ಗುಂಗಿನಲ್ಲೇ ಇದ್ದಾರೆ. ಕೊಲೆ, ಸುಲಿಗೆ ನಿರಂತರವಾಗಿದ್ದು, ಈ ಸರ್ಕಾರ ತೊಲಗಿದರೆ ಸಾಕು ಎಂದು ಜನರು ಹೇಳುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಜವಾಬ್ದಾರಿ ವಹಿಸಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೇವರ ಮೊರೆ ಹೋಗಿ, ನಗರವನ್ನು ದೇವರಿಗೆ ಅರ್ಪಣೆ ಮಾಡಿದ್ದಾರೆ. ರಾಜಧಾನಿಯನ್ನು ದೇವರೇ ಕಾಪಾಡಬೇಕಿದೆ. ಬೆಂಗಳೂರಿನ ಉಸ್ತುವಾರಿಯನ್ನು ಯಾರಾದರೂ ವಹಿಸಲಿ. ಆದರೆ ಬೆಂಗಳೂರನ್ನು ಉದ್ಧಾರ ಮಾಡುವವರು, ನಗರದ ಬಗ್ಗೆ ಜ್ಞಾನ ಇರುವವರು ಸಚಿವರಾಗಲಿ ಎಂದರು.
Key words: government, BBMP, elections, R. Ashok
The post ಬೆಂಗಳೂರು ಅಭಿವೃದ್ಧಿ ಸೊನ್ನೆ: ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರಕ್ಕೆ ಒತ್ತಾಯ: ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




