ಬಾಗಲಕೋಟೆ ಮಾರ್ಚ್,30,2026 (www.justkannada.in): ನಮ್ಮ ಜನಪರವಾದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರು ಅಣಕಿಸಿದ್ದಾರೆ. ಆದರೆ, ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ನಮ್ಮದು ಪಕ್ಷಾತೀತವಾದ ಅಭಿವೃದ್ಧಿಪರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಬಾಗಲಕೋಟೆ ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮುಗುಳೊಳ್ಳಿ ಮತ್ತು ನೀಲಾ ನಗರ ಗ್ರಾಮ ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಬಿಜೆಪಿಯವರಿಗೆ ಬಡವರ, ಮಹಿಳೆಯರ ಕಷ್ಟ ಗೊತ್ತಿಲ್ಲ. ಅದಕ್ಕೇ ಅವರು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ದಲಿತರಿಗೆ ಮೀಸಲಾತಿ ತಂದವರು ನಾವು. ಬಿಜೆಪಿ ತರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಬ್ರಿಟೀಷರ ಜೊತೆ ಸೇರಿದ್ದ ಬಿಜೆಪಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಲೇ ಇಲ್ಲ. 1925 ರಲ್ಲೇ RSS ಸ್ಥಾಪನೆ ಆಗಿದ್ದರೂ ಬ್ರಿಟೀಷರ ವಿರುದ್ಧ RSS ಧ್ವನಿ ಎತ್ತಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಇದು ಕಾಂಗ್ರೆಸ್ ನ ಹೋರಾಟದ ಪರಂಪರೆ ಮತ್ತು ಕಾಂಗ್ರೆಸ್ ಪಕ್ಷದ ಇತಿಹಾಸ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಸಂವಿಧಾನ ದೇಶದಲ್ಲಿ ಜಾರಿಯಾಗಲು ಸಾಧ್ಯವಾಯಿತು ಎಂದರು.
ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ ಬರಲಿಲ್ಲ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೂ ಬಡವರ, ಹಿಂದುಳಿದವರ ಅಭಿವೃದ್ಧಿಗೆ ಕೆಲಸ ಮಾಡಲೇ ಇಲ್ಲ ಎಂದರು.
ಮಾತೆತ್ತಿದರೆ ಡಬಲ್ ಎಂಜಿನ್ ಸರ್ಕಾರ ಎನ್ನುತ್ತಿದ್ದರು. ಆದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೃಷ್ಣ ಮೇಲ್ದಂಡೆ ಮತ್ತು ಆಲಮಟ್ಟಿ ವಿಚಾರದಲ್ಲಿ ಜನವಿರೋಧಿ ನಿಲುವು ಹೊಂದಿದ್ದರಿಂದಲೇ ಹದಿಮೂರು ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಲಿಲ್ಲ. ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗಲೂ ಭೂ ಪರಿಹಾರ ಘೋಷಿಸಿದರೂ ಹಣ ನೀಡಲಿಲ್ಲ. ನಾನು ಮುಖ್ಯಮಂತ್ರಿಯಾಗಿ ಸಭೆ ನಡೆಸಿ ಎಕರೆ ನೀರಾವರಿ ಜಮೀನಿಗೆ 40ಲಕ್ಷ, ಒಣ ಭೂಮಿಗೆ 30 ಲಕ್ಷ ರೂ ಪರಿಹಾರ ಕೊಡುವ ತೀರ್ಮಾನ ಮಾಡಿ ಕೆಲಸ ಪ್ರಾರಂಭ ಮಾಡಿದ್ದು ಮೂರು ವರ್ಷದಲ್ಲಿ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಹೀಗಾಗಿ ಬಿಜೆಪಿ ಗೆ ಮತ ಹಾಕಬೇಡಿ. ಎಚ್.ವೈ.ಮೇಟಿಯವರ ಒತ್ತಾಯದಂತೆ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ತರಲು ಶಂಕು ಸ್ಥಾಪನೆ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮತ್ತು ಟ್ರಾಮಾ ಸೆಂಟರನ್ನೂ ನಾವು ಮಾಡುತ್ತೇವೆ. ಮೇಟಿ ಅವರು ಅಪಾರ ಪಕ್ಷ ನಿಷ್ಠೆಯ ನಾಯಕರಾಗಿದ್ದರು. ನಾವು ಮೇಟಿಯವರ ಕನಸಿನ ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ ದಿನವೇ ರೈತರಿಗೆ ಪರಿಹಾರದ ಚೆಕ್ ನೀಡಿದ್ದೇವೆ. ಭೂಮಿ ಕಳೆದುಕೊಂಡ ಎಲ್ಲರಿಗೂ ಪರಿಹಾರ ನೀಡುತ್ತೇವೆ ಎಂದರು.
ಒಳ ಮೀಸಲಾತಿಯಲ್ಲಿ ನಿಮ್ಮ ಸಮುದಾಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ನೀಲಾ ನಗರ ಗ್ರಾಮದಲ್ಲಿ ನೆರೆದಿದ್ದ ಲಂಬಾಣಿ ಸಮುದಾಯದವರಿಗೆ ಭರವಸೆ ನೀಡಿದರು. ಎಡಗೈ ಮತ್ತು ಬಲಗೈ ಸಮುದಾಯದ ಯಾರೂ ಒಳ ಮೀಸಲಾತಿ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಸಾಮಾಜಿಕ ನ್ಯಾಯ ನಮ್ಮ ಪಕ್ಷದ ಸಿದ್ಧಾಂತ ಎಂದರು.
ಕೇಂದ್ರದ ಬಿಜೆಪಿ ಸರ್ಕಾರ ಕಬ್ಬು ಬೆಳೆಗೆ ರೈತರ ಬೇಡಿಕೆಯಷ್ಟು ಬೆಂಬಲ ಬೆಲೆ ನೀಡದಿದ್ದಾಗ ನಾನು ರೈತ ಸಂಘಟನೆಗಳು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ 200 ರೂ ಹೆಚ್ಚು ಮಾಡಿದೆವು. ಎಚ್.ವೈ.ಮೇಟಿಯವರು ಜನರ ಕೈಗೆ ಸಿಗುತ್ತಿದ್ದರು. ಅಹಿಂದ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಅಧಿಕಾರದಲ್ಲಿದ್ದಾಗ ಜನರಿಗೆ ಸ್ಪಂದಿಸದೆ, ಈಗ ನಮ್ಮ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಮತ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನಾವು ಪ್ರತೀ ವರ್ಷ 52 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಜೇಬಿಗೆ ಹಾಕುತ್ತಲೇ ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿದ್ದೇವೆ. ಬಿಜೆಪಿಯವರು ಕಳ್ಳೆತ್ತುಗಳು. ಗೇಯುವ ಎತ್ತಿಗೆ ತಾನೇ ಮೇವು ಹಾಕೋದು, ಹಾಗೆಯೇ ಕೆಲಸ ಮಾಡಿದ ನಮಗೆ ಕೂಲಿ ಕೊಡಿ. ಎಚ್.ವೈ.ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿ ಅವರನ್ನು ಗೆಲ್ಲಿಸಲೇಬೇಕು ಎಂದು ಕರೆ ನೀಡಿದರು.
Key words: BJP supporter, beneficiaries, our guarantees, CM Siddaramaiah
The post ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ- ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




