ಮೈಸೂರು ಏಪ್ರಿಲ್ ,10,2026 (www.justkannada.in): ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ನೂರಕ್ಕೆ 100 ರಷ್ಟು ಆಗಬೇಕು. ಈ ಯೋಜನೆಗಳ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಿ ಸೌಲಭ್ಯ ನೀಡಬೇಕು ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಕೇಂದ್ರ ಸಚಿವ ಹೆಚ್.ಡಿಕೆ ಅವರು ಮಾತನಾಡಿದರು. ಮೈಸೂರು ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ನ ಭೂಮಿ ವಶಕ್ಕೆ ಪಡೆಯಲಾಗಿದೆಯೇ ಭೂಮಿ ಪಡೆಯಲು ತಕರಾರು ಇರುವ ಕಡೆ ಬಗೆಹರಿಸಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾಂಕ್ ಗಳು ಗ್ರಾಹಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಮೊದಲ ಬಾರಿ ಲೋನ್ ಪಡೆಯುವವರಿಗೆ ಸಿಬಿಲ್ ಸ್ಕೋರ್ ನೆಪ ಹೇಳಿ ಸತಾಯಿಸಬಾರದು. ರೈತರಿಗೆ ಯಾವುದಾದರೂ ಯೋಜನೆಯಡಿ ಪ್ರೋತ್ಸಾಹಧನ ಬಂದರೆ ಅದನ್ನು ಸಾಲದ ಬಡ್ಡಿಗೆ ವಜಾ ಮಾಡಿಕೊಳ್ಳಬಾರದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಸೂಚನೆ ನೀಡಿದರು.
ಹತ್ತಿ ಬೆಳೆ ಬೆಳೆಯುವ ರೈತರ ಸಂಖ್ಯೆ ಕಡಿಮೆ ಬರುತ್ತಿದೆ. ಮುಸುಕಿನ ಜೋಳದ ಬೆಳೆ ಹೆಚ್ಚು ಬೆಳೆಯುತ್ತಿದ್ದಾರೆ. ಒಂದೇ ಭೂಮಿಯಲ್ಲಿ ಪದೇ ಪದೇ ಹೆಚ್ಚಿನ ಮುಸುಕಿನ ಜೋಳ ಬೆಳೆಯುವುದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ದಿಶಾ ಸಭೆಗಳನ್ನು ನಡೆಸುವುದು ಯೋಜನೆಗಳ ಪ್ರಗತಿ ಆಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುವುದು. ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುರಿತು ಕೆಳ ಹಂತದ ಅಧಿಕಾರಿಗಳು ನೀಡುವ ಮಾಹಿತಿಯನ್ನು ಆಧಾರವಾಗಿ ತರುವ ಬದಲು ಅಧಿಕಾರಿಗಳು ವಾರದಲ್ಲಿ ಕನಿಷ್ಠ ಒಂದು ದಿನ ಫೀಲ್ಡ್ ವರ್ಕ್ ಮಾಡಬೇಕು ಎಂದರು.
ನಮಗೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಆದರೂ ಗ್ರಾಮೀಣ ಭಾಗದಲ್ಲಿ ವಸತಿ ರಹಿತರು ತುಂಬಾ ಜನರು ಇದ್ದಾರೆ. ಸರ್ವೇ ನಡೆಸಿ ನಿವೇಶನ ರಹಿತ ಹಾಗೂ ವಸತಿ ರಹಿತರ ಪಟ್ಟಿ ಮಾಡಿ ಸರ್ಕಾರಕ್ಕೆ ನೀಡಬೇಕು. ನಮ್ಮ ದೇಶವು ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾದದ್ದು ಎಂದು ತಿಳಿಸಿದರು.
ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಮೈಸೂರು ನಗರದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕು. ತಂಬಾಕು ಬೆಳೆಯನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದು, ಇದಕ್ಕೆ ಪರ್ಯಾಯ ಬೆಳೆಯನ್ನು ಗುರುತಿಸಿ ಅರಿವು ಮೂಡಿಸಬೇಕು. ಹಂತ ಹಂತವಾಗಿ ತಂಬಾಕು ಬೆಳೆ ಬೆಳೆಯುವವರ ಪ್ರಮಾಣ ಕಡಿಮೆ ಆಗಬೇಕು. ಬೆಲವತ್ತ ಗ್ರಾಮದಲ್ಲಿ ಕಸ ಸುರಿದು ಹೋಗುತ್ತಾರೆ ಎಂದು ದೂರುಗಳು ಬರುತ್ತಿವೆ. ಅಲ್ಲದೆ ರಿಂಗ್ ರಸ್ತೆ ಸುತ್ತ ಮುತ್ತಾ ಜಾಗದಲ್ಲಿ ಕ್ಯಾಮರಾ ಅಳವಡಿಸಿ ಕಸ ಸುರಿಯುವ ಮೇಲೆ ಕ್ರಮ ವಹಿಸಬೇಕು ಮೈಸೂರು ನಗರದಲ್ಲಿ ಪ್ಲೆಕ್ಸ್ ಬ್ಯಾನರ್ ಜಾಹೀರಾತುಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ ಮೈಸೂರು ಕುಶಾಲನಗರ ರಾಷ್ಟ್ರೀಯ ಹೆದ್ದಾರಿ 275 ಕಾಮಗಾರಿ ಶೇಕಡಾ 60 ರಷ್ಟು ಪೂರ್ಣಗೊಂಡಿದೆ. ರಸ್ತೆ ನಿರ್ಮಾಣಕ್ಕೆ ಬೇಕಾಗಿರುವ ಭೂಮಿಯನ್ನು ಪಡೆಯಲಾಗಿದೆ. ಆದರೂ ಕೆಲವು ಕಡೆ ತಕರಾರು ಇದೆ. ಭೂಮಿಯನ್ನು ವಶಕ್ಕೆ ಪಡೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗಿದೆ. ಪೊಲೀಸ್ ಬಂದೋಬಸ್ತ್ ಪಡೆದು ಕಾಮಗಾರಿ ನಡೆಸಲಾಗುವುದು. ಮೈಸೂರು ವಿಮಾನ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 266 ಡೈವರ್ಶನ್ ಗೆ ಡಿ.ಪಿ.ಆರ್ ಆಗಿದ್ದು, ಅಗತ್ಯ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ. ಮೈಸೂರು ವಿಮಾನ ನಿಲ್ದಾಣದ 4 ಕಿಮೀ ವ್ಯಾಪ್ತಿಯಲ್ಲಿ ರೆಡ್ ಜೋನ್ ಬರುತ್ತದೆ ಎಂದು ಮಾಹಿತಿ ನೀಡಿದರು.
ತಂಬಾಕು ಮಂಡಳಿಯವರು ಈ ಹಿಂದೆ ತಂಬಾಕು ಬೆಳೆಗಾರರಿಗೆ ವಿವಿಧ ರೀತಿಯ ರಸಗೊಬ್ಬರಗಳನ್ನು ನೀಡುತ್ತಿದ್ದರು. ಆದರೆ ಈಗ 3400 ಮೆಟ್ರಿಕ್ ಟನ್ ಡಿಐಪಿ ವಿತರಣೆಗೆ ಕೊರತೆ ಇದೆ ಎಂದು ಪತ್ರ ಬರೆದಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್ ಕುಮಾರ್ ಅವರು ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಮಾರ್ಚ್ 2026 ರ ಅಂತ್ಯದ ವರೆಗೆ 17.5 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿತ್ತು. 17.81 ಲಕ್ಷ ಮಾನವ ದಿನಗಳ ಸೃಜನೆ ಆಗಿದ್ದು ಶೇಕಡಾ 102 ರಷ್ಟು ಗುರಿ ಸಾಧನೆ ಆಗಿದೆ. ಆರ್ಥಿಕ ಪ್ರಗತಿ ಕೂಲಿ 6679.13 ಲಕ್ಷ ಸಾಮಗ್ರಿ ವೆಚ್ಚ 1348.94 ಲಕ್ಷ ಸೇರಿದಂತೆ ಒಟ್ಟು 8028.07 ಲಕ್ಷ ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ ಡಿ ಹರೀಶ್ ಗೌಡ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಎಸ್ ಬಾಲದಂಡಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಕ್ ತನ್ವೀರ್ ಆಸಿಫ್, ಸಮಿತಿಯ ಸದಸ್ಯರಾದ ಕೆ ಅನ್ನದಾನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Mysore, District, Meeting, Union Minister, HDK
The post ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಶೇಕಡಾ 100 ರಷ್ಟು ಆಗಬೇಕು –ಕೇಂದ್ರ ಸಚಿವ ಹೆಚ್ ಡಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




