ಬೆಂಗಳೂರು,ಏಪ್ರಿಲ್,17,2026 (www.justkannada.in): ಕರುನಾಡು ಬರದ ದವಡೆಗೆ ಸಿಲುಕುತ್ತಿರುವ ಈ ಸಂಕಷ್ಟದ ಸಮಯದಲ್ಲಿ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಆಡಳಿತವನ್ನು ಗಾಳಿಗೆ ತೂರಿ ಕುರ್ಚಿಗಾಗಿ ದೆಹಲಿ ಪ್ರವಾಸದಲ್ಲಿ ಮಗ್ನರಾಗಿರುವುದು ಅತ್ಯಂತ ದುರದೃಷ್ಟಕರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, ರಾಜ್ಯದಲ್ಲಿ ಮುಂಗಾರು ಮಳೆ ಅಭಾವದ ಮುನ್ಸೂಚನೆ ಹಾಗೂ ಅಂತರ್ಜಲ ಮಟ್ಟದ ತೀವ್ರ ಕುಸಿತದ ವರದಿಗಳು ಆತಂಕಕಾರಿಯಾಗಿವೆ. ರಾಜ್ಯ ಸರ್ಕಾರ ಕೂಡಲೇ ಬರ ನಿರ್ವಹಣಾ ಸಮಿತಿಯನ್ನು ಸಕ್ರಿಯಗೊಳಿಸಿ ಯುದ್ಧೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಾಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ. ದೆಹಲಿಯಲ್ಲಿ ಕುಳಿತು ಕುರ್ಚಿ ಉಳಿಸಿಕೊಳ್ಳುವ ರಾಜಕೀಯ ಮೇಲಾಟಕ್ಕಿಂತ ರಾಜ್ಯದ ಜನರ ಹಿತ ಕಾಯುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಥಮ ಆದ್ಯತೆಯಾಗಲಿ ಎಂದು ಸಲಹೆ ನೀಡಿದ್ದಾರೆ.
ಮಳೆಯ ಅನಿಶ್ಚಿತತೆಯ ಲಾಭ ಪಡೆದು ರೈತರನ್ನು ಲೂಟಿ ಮಾಡಲು ಕಾಳಸಂತೆಕೋರರು ಹೊಂಚು ಹಾಕುತ್ತಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಜಿಲ್ಲೆಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಕೃತಕ ಅಭಾವ ಸೃಷ್ಟಿಯಾಗದಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಬರದಿಂದ ಜಾನುವಾರುಗಳಿಗೆ ಮೇವಿನ ಸಂಕಷ್ಟ ಎದುರಾಗಲಿದೆ. ತಕ್ಷಣವೇ ತಾಲ್ಲೂಕು ಮಟ್ಟದಲ್ಲಿ ಮೇವು ಬ್ಯಾಂಕ್ ಗಳನ್ನು ಸಕ್ರಿಯಗೊಳಿಸಿ. ರೈತರು ಅನಿವಾರ್ಯವಾಗಿ ತಮ್ಮ ಜಾನುವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಬಾರದು. ಭತ್ತ, ಜೋಳ ಹಾಗೂ ದ್ವಿದಳ ಧಾನ್ಯಗಳ ಇಳುವರಿ ಕುಂಠಿತಗೊಳ್ಳುವ ಭೀತಿಯಿದೆ. ಇದು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿಯಲಿದೆ. ಸರ್ಕಾರ ಈಗಲೇ ಬೆಳೆ ವಿಮೆ ಹಾಗೂ ಬರ ಪರಿಹಾರದ ಕ್ರಿಯಾ ಯೋಜನೆಯನ್ನು ರೂಪಿಸಿ, ಅನ್ನದಾತರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಆರ್.ಅಶೋಕ್ ತಿಳಿಸಿದ್ದಾರೆ.
Key words: Karnataka, drought , CM Siddaramaiah, DCM, DK Shivakumar, R. Ashok
The post ಬರದ ದವಡೆಗೆ ಕರುನಾಡು ಸಿಲುಕುತ್ತಿದ್ದರೆ ಕುರ್ಚಿಗಾಗಿ ಸಿಎಂ , ಡಿಸಿಎಂ ಮಗ್ನರಾಗಿರುವುದು ದುರದೃಷ್ಠಕರ- ಆರ್.ಅಶೋಕ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




