ಬೆಂಗಳೂರು,ಜುಲೈ,5,2025 (www.justkannada.in): ದೇಶದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕೂಲಂಕಷವಾಗಿ ಅರಿತು, ಅವುಗಳಿಗೆ ಪರಿಹಾರ ಒದಗಿಸುವ ದಿಕ್ಕಿನಲ್ಲಿ ಕಾರ್ಯತಂತ್ರ ರೂಪಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿಯೊಂದನ್ನು ರಚಿಸಲಾಗಿದೆ.
ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಮುಂದಿನ ಕಾರ್ಯಯೋಜನೆಗಳು, ಅವುಗಳ ಅನುಷ್ಠಾನ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಈ ಸಲಹಾ ಮಂಡಳಿಯು ಸಲಹೆಗಳನ್ನು ನೀಡಲಿದೆ. ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ 24 ಸದಸ್ಯರಿರುವ ಈ ಸಲಹಾ ಮಂಡಳಿಯನ್ನು ಸಿದ್ದರಾಮಯ್ಯ ಮುನ್ನಡೆಸಲಿದ್ದಾರೆ.
ಸಮಕಾಲೀನ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಈ ಮಂಡಳಿ ರಚಿಸಿದೆ. ದೇಶದಾದ್ಯಂತ ಹಿಂದುಳಿದ ವರ್ಗಗಳ ಸಮಸ್ಯೆ, ಸವಾಲುಗಳನ್ನು ಅರಿತು ಸಲಹೆ ನೀಡುವುದರ ಜೊತೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಮಂಡಳಿ ಸಲಹೆಗಳನ್ನು ನೀಡಲಿದೆ.
ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚನೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಅನುಮೋದಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರ ಪೈಕಿ ಸಿದ್ದರಾಮಯ್ಯ, ಹರಿಪ್ರಸಾದ್ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಕೂಡ ಮಂಡಳಿಯಲ್ಲಿದ್ದಾರೆ.
ಜುಲೈ 15ಕ್ಕೆ ಮೊದಲ ಸಭೆ:
ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ಮುಂದಾಗಿದೆ. ಜುಲೈ 15ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಆವರಣದಲ್ಲಿನ ಭಾರತ್ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ. ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಆಹ್ವಾನ ನೀಡಲಾಗಿದೆ. ಐವರು ಮಾಜಿ ಮುಖ್ಯಮಂತ್ರಿಗಳು, ಹತ್ತು ಮಂದಿ ಕೇಂದ್ರದ ಮಾಜಿ ಸಚಿವರು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಮಾಲೋಚಿಸಿದ ಬಳಿಕ ಮಂಡಳಿಯ ಸದಸ್ಯರು ಸಭೆಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಸಲಹಾ ಮಂಡಳಿಯ ಸದಸ್ಯರಾಗಿರುವ ವಿಧಾನ ಪರಿಷತ್ ಸದಸ್ಯ, ಹರ್ಯಾಣ ಕಾಂಗ್ರೆಸ್ ನ ಎಐಸಿಸಿ ಉಸ್ತುವಾರಿಯಾಗಿರುವ ಬಿ.ಕೆ. ಹರಿಪ್ರಸಾದ್ ಅವರು ಸಭೆಗೆ ಆಗಬೇಕಿರುವ ಪೂರಕ ಸಿದ್ಧತೆ ಕುರಿತು ಚರ್ಚಿಸಿದ್ದಾರೆ. ಈ ಸಭೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಿಸೆಯಲ್ಲಿ ಐತಿಹಾಸಿಕ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಎಐಸಿಸಿ ರಚಿಸಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ
1 ಸಿದ್ದರಾಮಯ್ಯ
2 ಬಿ.ಕೆ. ಹರಿಪ್ರಸಾದ್
3 ಅಶೋಕ್ ಗೆಹಲೋಟ್
4 ಭೂಪೇಶ್ ಬಘೇಲ್
5 ವಿ. ನಾರಾಯಣಸ್ವಾಮಿ
6 ಸಚಿನ್ ಪೈಲಟ್
7 ಗುರುದೀಪ್ ಸಿಂಗ್ ಸಪ್ಪಲ್
8 ಅರುಣ್ ಯಾದವ್
9 ವಿಜಯ್ ನಾಮ್ ದೇವ್ ರಾವ್ ವಡೆಟ್ಟಿವಾರ್
10 ವಿ. ಹನುಮಂತರಾವ್
11 ಅಮಿತ್ ಚಾವ್ಡಾ
12 ಬಿ. ಮಹೇಶ್ ಕುಮಾರ್ ಗೌಡ್
13 ಪೊನ್ನಮ್ ಪ್ರಭಾಕರ್
14 ಡಾ. ವೀರಪ್ಪ ಮೊಯಿಲಿ
15 ಎಸ್. ಜೋತಿಮಣಿ (ಸಂಸದೆ)
16 ಶ್ರೀಕಾಂತ್ ಜೇನಾ
17 ಕಮಲೇಶ್ವರ್ ಪಟೇಲ್
18 ಅಜಯ್ ಕುಮಾರ್ ಲಲ್ಲು
19 ಸುಭಾಷಿಣಿ ಯಾದವ್
20 ಅಡೂರು ಪ್ರಕಾಶ್ (ಸಂಸದ)
21 ಧನೇಂದ್ರ ಸಾಹು
22 ಹೀನಾ ಕಾವ್ರೆ
23 ಡಾ. ಅನಿಲ್ ಜೈಹಿಂದ್- ಸಲಹಾ ಮಂಡಳಿಯ ಸಂಚಾಲಕರು
24 ಜಿತೇಂದರ್ ಬಘೇಲ್- ಸಲಹಾ ಮಂಡಳಿಯ ಕಾರ್ಯದರ್ಶಿ
Key words: AICC, Backward Classes, National Advisory, Council, CM, Siddaramaiah
The post AICC ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಸ್ತಿತ್ವಕ್ಕೆ: ಜು.15ಕ್ಕೆ ಮೊದಲ ಸಭೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.