ಬೆಂಗಳೂರು,ಜುಲೈ,29,2025 (www.justkannada.in): ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳ ಅಮಾನತು ರದ್ದುಪಡಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಬಿವೈ ವಿಜಯೇಂದ್ರ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಹದಗೆಟ್ಟ ಕಾನೂನು ಸುವ್ಯವಸ್ಥೆಯ ನಿರಂತರ ವೈಫಲ್ಯ, ಇವೆಲ್ಲವನ್ನೂ ಮುಚ್ಚಿಕೊಳ್ಳಲು ಆಯೋಗಗಳನ್ನು ರಚಿಸುವುದು, ಪ್ರಾಮಾಣಿಕ ಅಧಿಕಾರಿಗಳ ಬಲಿ ತೆಗೆದುಕೊಳ್ಳುವುದು ಕಾಂಗ್ರೆಸ್ ಸರ್ಕಾರದ ಜನರ ದಿಕ್ಕು ತಪ್ಪಿಸುವ ಕುತಂತ್ರ ನಡವಳಿಕೆಯಾಗಿದೆ.
ಬೆಂಗಳೂರಿನ RCB ವಿಜಯೋತ್ಸವದ ಸಂಭ್ರಮಾಚರಣೆಯನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟು ದೂರದೃಷ್ಟಿ ಹಾಗೂ ಜನಕಾಳಜಿ ಇಲ್ಲದ ಅವಿವೇಕಿ ನಿರ್ಧಾರ ತೆಗೆದುಕೊಂಡ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಅವರು ತಲೆದಂಡ ತಪ್ಪಿಸಿಕೊಳ್ಳಲು ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದ್ದ ಈ ಸರ್ಕಾರ ಇದೀಗ ಅವರ ಅಮಾನತ್ತನ್ನು ರದ್ದುಗೊಳಿಸಿ ಮುಖ ಮುಚ್ಚಿಕೊಳ್ಳಲು ಹೊರಟಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಸರ್ಕಾರದ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ‘ತುಘಲಕ್’ ನಿರ್ಧಾರದಿಂದ ಇಂಥಾ ಘೋರ ದುರಂತ ಸಂಭವಿಸಿತು, ಎಂಬ ವಾಸ್ತವ ಸತ್ಯದ ಹಿನ್ನಲೆಯಲ್ಲಿ ಜನಾಕ್ರೋಶ ಎದುರಿಸಲಾಗದೆ ‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು’ ಭಂಡತನದಿಂದ ಅಧಿಕಾರದಲ್ಲಿ ಉಳಿಯಲು ತಪ್ಪೆಸಗದ ಪೊಲೀಸ್ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ವಿಧಿಸಿ ಹೊಣೆಗೇಡಿತನದಿಂದ ಪಾರಾಗಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಪ್ರಯತ್ನಿಸಿದ್ದರು. ಇದೀಗ ಗತ್ಯಂತರವಿಲ್ಲದೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಅಧಿಕಾರಿಗಳ ಅಮಾನತು ರದ್ದುಗೊಳಿಸಲಾಗಿದೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಇತರರು ಅಮಾನತು ರದ್ದುಗೊಂಡ ಅಧಿಕಾರಿಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುವೆ ಎಂದಿದ್ದಾರೆ.
Key words: Cancellation, suspension, IPS officers, BY Vijayendra
The post IPS ಅಧಿಕಾರಿಗಳ ಅಮಾನತು ರದ್ದು: ಸಿಎಂ ಡಿಸಿಎಂ ಕ್ಷಮೆ ಕೇಳಲಿ- ಬಿವೈ ವಿಜಯೇಂದ್ರ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.