ಬೆಂಗಳೂರು,ಜೂನ್,13,2025 (www.justkannada.in): 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು, 87,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು karresults.nic.in ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟವಾಗಿದ್ದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶವು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂರು ಪರೀಕ್ಷಾ ಪದ್ಧತಿಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
“2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರಲ್ಲಿ ಸರ್ಕಾರಿ ಶಾಲೆಗಳ ಉತ್ತೀರ್ಣತಾ ಪ್ರಮಾಣ ಶೇ. 36.65 ಇದ್ದು, ಇದು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಫಲಿತಾಂಶಕ್ಕಿಂತ ಹೆಚ್ಚಾಗಿದೆ. ಇದು ನಮ್ಮ ಸರ್ಕಾರಿ ಶಾಲೆಗಳ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ” ಎಂದು ಹೇಳಿದರು.
ಎಸ್‌ಎಸ್‌ಎಲ್ ಸಿ ಪರೀಕ್ಷೆಯಂತೆ, ಈ ಹಿಂದೆ ನಡೆಸಿದ ಪಿಯುಸಿ ಪರೀಕ್ಷೆ-2 ಕೂಡ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವ್ಯಾಸಂಗವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೇ ಮುಂದುವರಿಸಲು ನೆರವಾಗಿದೆ. ವಿದ್ಯಾರ್ಥಿಗಳಿಗೆ ಎರಡನೇ ಅವಕಾಶ ನೀಡುವುದರಿಂದ ಅವರ ಭವಿಷ್ಯಕ್ಕೆ ಯಾವುದೇ ತಡೆಯಾಗುವುದಿಲ್ಲ ಎಂಬುದು ನಮ್ಮ ಸರ್ಕಾರದ ದೃಢ ನಂಬಿಕೆ” ಎಂದು ಸಚಿವ ಮಧು ಬಂಗಾರಪ್ಪ ಒತ್ತಿ ಹೇಳಿದರು.
“ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸಲು ಮತ್ತು ಅವರಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಲು ನಾವು ಜಾರಿಗೆ ತಂದಿರುವ ಮೂರು ಪರೀಕ್ಷಾ ಪದ್ಧತಿ ಉತ್ತಮ ಫಲಿತಾಂಶ ನೀಡಿದೆ. ಈ ಪದ್ಧತಿಯಿಂದಾಗಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗಿದೆ” ಎಂದು ಮಧು ಬಂಗಾರಪ್ಪ ಅವರು ನುಡಿದರು.
2025ರ ಎಸ್ ಎಸ್ ಎಲ್‌ಸಿ ಪರೀಕ್ಷೆ-2ರಲ್ಲಿ 11,818 ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ನೋಂದಾಯಿಸಿದ್ದು, ಅವರಲ್ಲಿ 6,635 ವಿದ್ಯಾರ್ಥಿಗಳು (ಶೇ. 56.14) ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಂಡಿರುವುದು ಈ ಪದ್ಧತಿಯ ಸಕಾರಾತ್ಮಕ ಪರಿಣಾಮವನ್ನು ತೋರಿಸುತ್ತದೆ. ಅಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರಲ್ಲಿ ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ಶೇ. 100ರಷ್ಟು ಫಲಿತಾಂಶ ಪಡೆದಿರುವುದು ಹೆಮ್ಮೆಯ ಸಂಗತಿ. ಈ ನಾಲ್ಕು ವಿದ್ಯಾರ್ಥಿಗಳಲ್ಲಿ ಒಬ್ಬರು ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. 2025ರ ಪರೀಕ್ಷೆ-2ರ ಅವಕಾಶದಿಂದ ಒಟ್ಟು 87,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅವರಿಗೆ ಪ್ರಸಕ್ತ ವರ್ಷದಲ್ಲಿಯೇ ಮುಂದಿನ ವ್ಯಾಸಂಗ ಮುಂದುವರಿಸಲು ಅನುಕೂಲವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರ ಸತತ ಪ್ರಯತ್ನದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡು ಹಾಜರಾಗಿದ್ದಾರೆ. ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಪರಿಹಾರ ಬೋಧನಾ ತರಗತಿಗಳನ್ನು (Remedial classes) ನಡೆಸಿದ್ದು, ಇದು ಫಲಿತಾಂಶ ಸುಧಾರಣೆಗೆ ಸಹಕಾರಿಯಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯಲು ಸಿಸಿಟಿವಿ ಮೂಲಕ ವೆಬ್ ಕಾಸ್ಟಿಂಗ್ ಪದ್ದತಿಯನ್ನು ಮುಂದುವರಿಸಲಾಗಿದ್ದು, ಇದು ಪರೀಕ್ಷಾ ವ್ಯವಸ್ಥೆಯ ಸಮಗ್ರತೆಯನ್ನು ಪುನರ್‌ಸ್ಥಾಪಿಸಲು ಸಹಾಯ ಮಾಡಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಅಜೀಂ ಪ್ರೇಮ್ ಜಿ ಸಂಸ್ಥೆಯ ಸಿ.ಇ.ಒ. ಅನುರಾಗ್ ಬೆಹರ್ ಅವರು “ಕರ್ನಾಟಕದಲ್ಲಿ ಜಾರಿಗೆ ತಂದಿರುವ ಮೂರು ಪರೀಕ್ಷಾ ಪದ್ಧತಿ, ವೆಬ್ ಕಾಸ್ಟಿಂಗ್ ದೇಶಕ್ಕೆ ಮಾದರಿ, ಪ್ರತಿಭಾವಂತರನ್ನು ರೂಪಿಸಲು ಪರೀಕ್ಷಾ ಭಯ ಹೋಗಲಾಡಿಸಲು ಸಹಕಾರಿಯಾಗಿವೆ’ ಎಂದು ನೀಡಿರುವ ಹೇಳಿಕೆಯು ನಮ್ಮ ಸರ್ಕಾರದ ಶೈಕ್ಷಣಿಕ ಸುಧಾರಣೆಗಳಿಗೆ ಸಿಕ್ಕ ಮನ್ನಣೆಯಾಗಿದೆ ಎಂದು ಮಧು ಬಂಗಾರಪ್ಪ ಅವರು ಹೇಳಿದರು.
ಜುಲೈ 5ರಿಂದ 12ರವರೆಗೆ ಪರೀಕ್ಷೆ-3
ಪರೀಕ್ಷೆ-1 ಮತ್ತು ಪರೀಕ್ಷೆ-2ರಲ್ಲಿ ಫಲಿತಾಂಶ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ, ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಮತ್ತು ಪುನರಾವರ್ತಿತ ಅಭ್ಯರ್ಥಿಗಳಿಗೆ ಪರೀಕ್ಷೆ-3ನ್ನು ದಿನಾಂಕ 05-07-2025 ರಿಂದ 12-07-2025 ವರೆಗೆ ನಡೆಸಲಾಗುವುದು” ಎಂದು ಸಚಿವ ಮಧು ಬಂಗಾರಪ್ಪ ಪ್ರಕಟಿಸಿದರು.
ಅಲ್ಲದೆ, 2024-25ರ ಪರೀಕ್ಷೆ -2 ರಲ್ಲಿ (Not completed) ಫಲಿತಾಂಶ ಪಡೆದಿರುವ ಶಾಲಾ ಅಭ್ಯರ್ಥಿಗಳಿಗೆ ಪರೀಕ್ಷೆ-3ಕ್ಕೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಆದರೆ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. 3ನೇ ಪರೀಕ್ಷೆಗೂ ಸಹ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲಾಗುವುದು.
ಶಾಲೆಗಳ ಕ್ರೋಢೀಕೃತ ಫಲಿತಾಂಶ ಪಟ್ಟಿ ಹಾಗೂ ತಾತ್ಕಾಲಿಕ ಅಂಕಪಟ್ಟಿಯನ್ನು ಮಂಡಲಿಯ https://kseab.karnataka.gov.in 13-06-2025 1 ಗಂಟೆಯ ನಂತರ ನೀಡಲಾಗುವುದು. ಶಾಲಾ ಹಂತದಲ್ಲಿ ಅಂದೇ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಫಲಿತಾಂಶವನ್ನು ಪ್ರೌಢಶಾಲೆಗಳಲ್ಲಿ ಆ ದಿನವೇ ಪ್ರಕಟಿಸಲಾಗುವುದು. ಸರ್ಕಾರವು ವಿದ್ಯಾರ್ಥಿ ಕೇಂದ್ರಿತ ಶೈಕ್ಷಣಿಕ ಸುಧಾರಣೆಗಳನ್ನು ಮುಂದುವರಿಸಲು ಬದ್ಧವಾಗಿದೆ ಎಂದು ಮಧು ಬಂಗಾರಪ್ಪ ಅವರು ಪುನರುಚ್ಚರಿಸಿದರು.
Key words: SSLC Exam-2, Results, Minister, Madhu Bangarappa
The post SSLC ಪರೀಕ್ಷೆ-2 ಫಲಿತಾಂಶ ಪ್ರಕಟ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಸಚಿವ ಮಧು ಬಂಗಾರಪ್ಪ ಸಂತಸ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.