ಮೈಸೂರು, ಮಾರ್ಚ್, 25,2026 (www.justkannada.in): ಗ್ರಾಹಕರು ಆಹಾರ, ಚಿನ್ನ ವಸ್ತುವನ್ನು ಖರೀದಿಸುವಾಗ ವಸ್ತುವಿನ ಮೇಲೆ ಐಎಸ್ ಐ ಹಾಲ್ ಮಾರ್ಕ್ ನಂತಹ ಚಿಹ್ನೆಗಳನ್ನು ನೋಡಬೇಕು ಇಂತಹ ಚಿಹ್ನೆಗಳಿದ್ದಲ್ಲಿ ಆ ವಸ್ತುಗಳು ಉತ್ತಮವಾದ ಗುಣಮಟ್ಟದಿಂದ ಕೂಡಿದ್ದು ಸರ್ಕಾರದಿಂದ ದೃಢೀಕರಿಸಿ ಮಾರುಕಟ್ಟೆಗೆ ಬಂದಿರುತ್ತದೆ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎ. ಕೆ ನವೀನ ಕುಮಾರಿ ಅವರು ಹೇಳಿದರು.
ಇಂದು ಜಿಲ್ಲಾಡಳಿತ, ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಶಾರದ ವಿಲಾಸ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಎ. ಕೆ ನವೀನ ಕುಮಾರಿ ಅವರು ಮಾತನಾಡಿದರು. ವಸ್ತುಗಳನ್ನು ಖರೀದಿಸುವಾಗ ಬಹು ಮುಖ್ಯವಾಗಿ ವಸ್ತುವನ್ನು ಉಪಯೋಗಿಸುವ ಅವಧಿಯು ಮುಗಿದಿದೆಯೇ ಎಂದು ಪರಿಶೀಲಿಸಿ ಖರೀದಿಸಬೇಕು ಎಂದು ಹೇಳಿದರು.
ವಿಶ್ವ ಗ್ರಾಹಕರ ದಿನಾಚರಣೆಯನ್ನು ಭಾರತದಲ್ಲಿ 1986ರಲ್ಲಿ ಜಾನ್ ಕೆನಡಿಯನ್ ಎಂಬ ವ್ಯಕ್ತಿ ಜಾರಿಗೆ ತಂದರು. ಈ ಗ್ರಾಹಕ ಸಂರಕ್ಷಣಾ ಕಾಯ್ದೆಯು 2000ರಲ್ಲಿ ಪ್ರಗತಿ ಕಾಣಲು ಆರಂಭವಾಯಿತು. ಗ್ರಾಹಕ ಸಂರಕ್ಷಣ ಕಾಯ್ದೆ 2019ರಲ್ಲಿ ಹಲವಾರು ರೀತಿಯ ತಿದ್ದುಪಡಿಗಳನ್ನು ಮಾಡಲಾಯಿತು ಮತ್ತು ಗ್ರಾಹಕರಿಗೆ ಹಲವಾರು ಸೇವೆಗಳನ್ನು ಸೇರಿಸಲಾಗಿತು ಎಂದು ಹೇಳಿದರು.
ಗ್ರಾಹಕರು ಒಂದು ರೂಪಾಯಿ ಮೋಸ ಹೋದರೂ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ದೂರು ದಾಖಲಿಸುವ ವ್ಯವಸ್ಥೆಯನ್ನು ಕಾಯ್ದೆ ಕಲ್ಪಿಸಿಕೊಟ್ಟಿದೆ. ಗ್ರಾಹಕರು ಆಯೋಗಕ್ಕೆ ಹೋಗದೆ ಆನ್ಲೈನ್ ಮೂಲಕ ಫಿರ್ಯಾದುದಾರರು ದೂರನ್ನು ದಾಖಲಿಸುವ ವ್ಯವಸ್ಥೆಯನ್ನು ಮಾಡಿಕೊಡಲಾಗಿದ ಎಂದು ಹೇಳಿದರು.
ವಸ್ತುವನ್ನು ಖರೀದಿಸಿದಾಗ ಗ್ರಾಹಕರಿಗೆ ವಸ್ತುವಿನ ಗುಣಮಟ್ಟ ಕಳಪೆ ಮಟ್ಟದಿಂದ ಕೂಡಿರುವುದು ಕಂಡುಬಂದಲ್ಲಿ ಮಾದರಿಯೊಂದಿಗೆ ದೂರು ಸಲ್ಲಿಸಿ. ಬ್ಯಾಂಕಿನವರು ನಿಗದಿತ ಬಡ್ಡಿಗಿಂತ ಹೆಚ್ಚಿನ ಬಡ್ಡಿಯನ್ನು ಗ್ರಾಹಕರ ಮೇಲೆ ಹಾಕಿದರೆ ಜಾಹೀರಾತುಗಳನ್ನು ನಂಬಿ ಮೋಸ ಹೋದರು ಸಹ ದೂರನ್ನು ದಾಖಲಿಸಬಹುದು ಎಂದು ಹೇಳಿದರು.
ವಿಮಾ ಕಂಪನಿಗಳು ಮೋಸ ಮಾಡಿದಾಗ, ವೈದ್ಯಕೀಯ ವಸ್ತು ಹಾಗೂ ಔಷಧಿಗಳ ಖರೀದಿಯಲ್ಲಿ ಮೋಸ ಮಾಡಿದಾಗ ಮೆಡಿಕಲ್ ನಿರ್ಲಕ್ಷತನದಿಂದ ತಪ್ಪಾದಾಗ ಗ್ರಾಹಕರ ಕಾಯ್ದೆ ಅಡಿ ಪರಿಹಾರವನ್ನು ಪಡೆದುಕೊಳ್ಳುವಂತಹ ಹಕ್ಕನ್ನು ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಎಂ. ಕೆ ಲಲಿತಾ ಅವರು ಮಾತನಾಡಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಮಾರ್ಚ್ 15 ರಂದು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ .ಇಂದಿನ ದಿನಮಾನಗಳಲ್ಲಿ ಗ್ರಾಹಕರು ಅತಿಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆ. ವಸ್ತುಗಳನ್ನು ಖರೀದಿಸುವಾಗ ಹಾಗೂ ಮೋಸ ಹೋದಾಗ ಯಾವ ರೀತಿ ದೂರು ಸಲ್ಲಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು ಎಂದು ಹೇಳಿದರು.
2019ರ ಕಾಯ್ದೆಯ ಪ್ರಕಾರ ಸಮಾಜದಲ್ಲಿ 18 ವರ್ಷ ತುಂಬಿದ ಯಾವುದೇ ವ್ಯಕ್ತಿಯು ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ದೂರನ್ನು ದಾಖಲಿಸಬಹುದು ಎಂದು ಹೇಳಿದರು.
ಪ್ರತಿಯೊಬ್ಬ ಗ್ರಾಹಕನು ಯಾವುದೇ ವಸ್ತುವನ್ನು ಖರೀದಿಸಿದರೂ ಅದರ ರಶೀದಿಯನ್ನು ಪಡೆದುಕೊಳ್ಳಬೇಕು ಏಕೆಂದರೆ ಮುಂದೆ ಯಾವುದೇ ತೊಂದರೆಗಳಾದರೂ ಈ ರಶೀದಿಗಳ ಮುಖಾಂತರ ದೂರಗಳನ್ನು ದಾಖಲಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಮರನಾಥ್ ಕೆ.ಕೆ ಅವರು ಮಾತನಾಡಿ 1986 ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು ಪ್ರಸ್ತುತ ದಿನಗಳಲ್ಲಿ ಗ್ರಾಹಕ ವಂಚನೆಯ ದೂರಗಳನ್ನು ಆನ್ಲೈನ್ ಮುಖಾಂತರ ದಾಖಲಿಸಬಹುದಾಗಿದೆ ಎಂದರು.
ವಸ್ತುಗಳನ್ನು ಖರೀದಿಸಿದಾಗ ಪಡೆಯುವ ರಶೀದಿಯಲ್ಲಿ ಜಿ.ಎಸ್.ಟಿ ಸಂಖ್ಯೆ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಮೋಸ ಹೋದ ಸಂದರ್ಭದಲ್ಲಿ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಂಟೇಸ್ವಾಮಿ, ಶಾರದ ವಿಲಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್ ದಿನೇಶ್, ಪ್ರಾಂಶುಪಾಲೆ ಡಾ. ದೇವಿಕಾ ಎಂ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ್ ಎನ್, ಮತ್ತಿತರರು ಉಪಸ್ಥಿತರಿದ್ದರು.
Key words: marked, ISI, Hallmark, items, Buy, quality, A.K. Naveen Kumari
The post ಗುಣಮಟ್ಟ ನಮೂದಿಸುವ, ಐಎಸ್ ಐ, ಹಾಲ್ ಮಾರ್ಕ್ ಗುರುತಿರುವ ವಸ್ತುಗಳನ್ನು ಖರೀದಿಸಿ-ಎ.ಕೆ ನವೀನ ಕುಮಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




