ಬೆಂಗಳೂರು,ಜುಲೈ,31,2025 (www.justkannada.in) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2024 – 25ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯದ 31 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್ – 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯನ್ನು ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಕೈಗೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆಯಲ್ಲಿ 31 ಜಿಲ್ಲೆಗಳಲ್ಲಿ ಒಟ್ಟು 2697 ನೌಕರರಿಂದ ವರ್ಗಾವಣೆಗಾಗಿ ಅರ್ಜಿಗಳು ಸ್ವೀಕೃತವಾಗಿದ್ದವು. ಇವುಗಳಲ್ಲಿ ನೌಕರರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆ ಹೊಂದಿದ 1300 ನೌಕರರಿಗೆ ಆನ್ ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಡಿಜಿಟಲ್ ಸಹಿ ಮಾಡಿದ ವರ್ಗಾವಣೆ ಆದೇಶಗಳನ್ನು ಹೊರಡಿಸಿ ಸ್ಥಳದಲ್ಲೇ ನೌಕರರಿಗೆ ನೀಡಿರುತ್ತಾರೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
ಮೊದಲ ಸುತ್ತು ಹಾಗೂ ದ್ವಿತೀಯ ಸುತ್ತಿನಲ್ಲಿ ವಿಶೇಷ ಪ್ರಕರಣಗಳಾದ ಗಂಭೀರ ಅನಾರೋಗ್ಯ, (Serious Ailments), ವಿಶೇಷ ಚೇತನರು ಹಾಗೂ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆ ಕೌನ್ಸೆಲಿಂಗ್ನ್ನು ಜುಲೈ 25ರಂದು ನಡೆಸಿ 161 ನೌಕರರಿಗೆ ಹಾಗೂ ಎರಡನೆಯ ಹಂತದಲ್ಲಿ ಸಾಮಾನ್ಯ ಕೋರಿಕೆ ಪ್ರಕರಣಗಳ 619 ನೌಕರರಿಗೆ ಜುಲೈ 28ರಂದು ಹಾಗೂ ಕೊನೆಯ ಹಂತದಲ್ಲಿ ಕಡ್ಡಾಯ ವರ್ಗಾವಣೆ ಕೌನ್ಸೆಲಿಂಗ್ನ್ನು ಜುಲೈ 29 ಮತ್ತು 30ರಂದು ಕೈಗೊಂಡು 520 ನೌಕರರಿಗೆ ಡಿಜಿಟಲ್ ಸಹಿ ಮಾಡಿದ ವರ್ಗಾವಣೆ ಆದೇಶಗಳನ್ನು ನೀಡಲಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮೊದಲ ಬಾರಿಗೆ ವರ್ಗಾವಣೆ ಪ್ರಕ್ರಿಯೆಯನ್ನು ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಯಶಸ್ವಿಯಾಗಿ ನಡೆಸಿ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಜೊತೆಗೆ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತು ಪಂಚಾಯತ್ ರಾಜ್ ಸಚಿವರು ತಿಳಿಸಿದ್ದಾರೆ.
ಅಂತರಜಿಲ್ಲೆ ವರ್ಗಾವಣೆಗೆ ಅರ್ಹರಿದ್ದ 7 ನೌಕರರ ಪೈಕಿ ಐವರು ನೌಕರರಿಗೆ ವರ್ಗಾವಣೆ ಆದೇಶ ನೀಡುವ ಮೂಲಕ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಜುಲೈ 22ರಂದು ಆನ್ ಲೈನ್ ಕೌನ್ಸಿಲಿಂಗ್ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು.
key words: Transfer , Minister, Priyank Kharge
The post ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೌನ್ಸಿಲಿಂಗ್ ಮೂಲಕ 1300 ನೌಕರರ ವರ್ಗಾವಣೆ: ಸಚಿವ ಪ್ರಿಯಾಂಕ್ ಖರ್ಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.