ಬೆಂಗಳೂರು,ಜುಲೈ,8,2025 (www.justkannada.in): ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹೋರಾಟದ ಹಕ್ಕಿದೆ. ನಾನೂ ಹೋರಾಟ ಮಾಡಿಕೊಂಡೇ ಬಂದಿರುವವನು. ಈ ವಿಷಯ ಬಹುಭಾಷಾ ನಟ ಪ್ರಕಾಶ್ ರೈಗೆ ಗೊತ್ತಿಲ್ಲ. ಬರಪೀಡಿತ ವಿಜಯಪುರ ಜಿಲ್ಲೆಯನ್ನು ನಾನು ಹೋರಾಡಿಯೇ ನೀರಾವರಿ ಭೂಮಿಯನ್ನಾಗಿ ಮಾಡಿದ್ದೇನೆ. ಪ್ರಕಾಶ್ ರೈ ಅವರು ನಮಗಿಂತ ಆಂಧ್ರದಲ್ಲಿ ಹೆಚ್ಚು ಪ್ರಭಾವಿಗಳು ಮತ್ತು ಜನಪ್ರಿಯರು. ಆದ್ದರಿಂದ ಅವರು ಬೇರೆ ಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, `ನಮ್ಮಲ್ಲಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗಾಗಿ ಕೇವಲ 1,282 ಎಕರೆ ಮಾತ್ರ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಪಕ್ಕದ ಆಂಧ್ರ ಪ್ರದೇಶದಲ್ಲಿ ಇದೇ ಉದ್ದೇಶಕ್ಕಾಗಿ ನಮ್ಮ ಗಡಿಗೇ ಅಂಟಿಕೊಂಡಿರುವ ಮಡಕಶಿರಾದಿಂದ ಪೆನುಗೊಂಡದವರೆಗೆ 10 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡು, ಉಚಿತವಾಗಿ ಕೊಡುವುದಾಗಿ ಹೇಳಲಾಗುತ್ತಿದೆ. ಅಲ್ಲದೆ, ಆಂಧ್ರದಲ್ಲಿ ಬೇರೆ ಬೇರೆ ಕೈಗಾರಿಕಾ ಉದ್ದೇಶಗಳಿಗೆ 45 ಸಾವಿರ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ಫೋಸಿಸ್, ಕಾಗ್ನಿಜೆಂಟ್, ಟಿಸಿಎಸ್ ಮುಂತಾದ 100 ಕಂಪನಿಗಳಿಗೆ ವಿಶಾಖಪಟ್ಟಣದಲ್ಲಿ ಎಕರೆಗೆ ಬರೀ 99 ಪೈಸೆಯಂತೆ ಭೂಮಿ ಕೊಡಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಪ್ರಕಾಶ್ ರೈಗೆ ಇವೆಲ್ಲ ಕಾಣಿಸುತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.
ಇತ್ತ ತಮಿಳುನಾಡಿನ ಹೊಸೂರು ನಮ್ಮಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. ಅಲ್ಲಿನ ಸರಕಾರ ಈಗ ಆ ಪ್ರದೇಶವನ್ನು ಕೇಂದ್ರೀಕರಿಸಿ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ನಿರ್ಮಿಸಲು ಮುಂದಾಗಿದೆ. ಇದಕ್ಕೆಲ್ಲ ಅದೂ ಸಹ ಅಗ್ಗದ ದರದಲ್ಲಿ ಭೂಮಿ ಕೊಡುತ್ತಿದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ ಉದ್ಯಮ ನಡೆಸುತ್ತಿರುವವರಿಗೆ ಬೆಂಗಳೂರು ಬರೀ ಆಶ್ರಯತಾಣವಾಗಿ ಕಾಣುತ್ತಿದೆ. ಆಂಧ್ರದ ಯೋಜನೆ ಗೆದ್ದರೆ, ನಮ್ಮ ರಕ್ಷಣಾ ಮತ್ತು ಏರೋಸ್ಪೇಸ್ ಕಂಪನಿಗಳು ಅಲ್ಲಿಗೆ ಹೋಗಬಹುದು. ಇದರಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ಅಂದಾಜು ಮಾಡಲೂ ಸಾಧ್ಯವಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕವು ದೇಶದ ರಕ್ಷಣೆ ಮತ್ತು ವೈಮಾಂತರಿಕ್ಷ ವಹಿವಾಟಿನಲ್ಲಿ ಶೇಕಡ 65ರಷ್ಟು ಪಾಲು ಹೊಂದಿದ್ದು, ಈ ವಲಯದಲ್ಲಿನ ನಮ್ಮ ಕಾರ್ಯ ಪರಿಸರವು ಜಾಗತಿಕವಾಗಿ ತೃತೀಯ ಸ್ಥಾನದಲ್ಲಿದೆ. ನಮ್ಮಲ್ಲಿ ಈ ವಲಯದ ಎಚ್ಎಎಲ್, ಸ್ಯಾಫ್ರಾನ್, ಬೋಯಿಂಗ್, ಏರ್ ಬಸ್, ಕಾಲಿನ್ಸ್, ಲಾಕ್ ಹೀಡ್ ಮಾರ್ಟಿನ್ ಮುಂತಾದ ದೈತ್ಯ ಕಂಪನಿಗಳಿವೆ. ದೇವನಹಳ್ಳಿಯಲ್ಲಿರುವ ವಿಮಾನ ನಿಲ್ದಾಣದ ಪಕ್ಕದಲ್ಲೇ ಏರೋಸ್ಪೇಸ್ ಪಾರ್ಕ್ ಇದೆ. ಇದಕ್ಕೆ ಮತ್ತಷ್ಟು ಬಲ ತುಂಬಲೆಂದೇ ಈಗ ಅದರ ಸನಿಹದಲ್ಲೇ ಉದ್ದೇಶಿತ ಪಾರ್ಕ್ ಸ್ಥಾಪಿಸುವ ಚಿಂತನೆ ಇದೆ. ಸಂತ್ರಸ್ತ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರವೇ ನ್ಯಾಯಯುತ ಪರಿಹಾರ ಕೊಡಲಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಅವರು ಹೇಳಿದ್ದಾರೆ.
ಪ್ರಕಾಶ್ ರೈ ಬಗ್ಗೆ ವೈಯಕ್ತಿಕವಾಗಿ ಯಾವ ಸಿಟ್ಟೂ ಇಲ್ಲ. ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗಲೂ ಒಳ್ಳೆಯ ಕೆಲಸಗಳನ್ನೇ ಮಾಡಿದ್ದೇನೆ. ರೈತ ಮುಖಂಡ ಬಯ್ಯಾರೆಡ್ಡಿ ಅವರೇ ಇದನ್ನು ಮೆಚ್ಚಿಕೊಂಡು ಮಾತನಾಡಿದ್ದರು. ದುರದೃಷ್ಟವಶಾತ್ ಇವತ್ತು ಅವರು ನಮ್ಮೊಂದಿಗಿಲ್ಲ. ಅವರು ನಿಜವಾದ ರೈತ ನಾಯಕರಾಗಿದ್ದರು. ಈಗ ನಮ್ಮ ವಿರುದ್ಧ ಮಾತನಾಡುತ್ತಿರುವವರು ಇದನ್ನೆಲ್ಲ ಅರಿಯಬೇಕು ಎಂದು ನಟ ಪ್ರಕಾಶ್ ರೈಗೆ ಸಚಿವ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟರು.
ಬುಧವಾರ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ
ಹಿಂದೆ ಕೇಂದ್ರ ಸರಕಾರವು ನಮ್ಮನ್ನು ಕಡೆಗಣಿಸಿ ತಮಿಳುನಾಡು ಮತ್ತು ಉತ್ತರಪ್ರದೇಶಕ್ಕೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಿದೆ. ಈ ಲೋಪವನ್ನು ನಾನು ಹಿಂದೆಯೇ ಕೇಂದ್ರ ಸರಕಾರದ ಗಮನಕ್ಕೆ ತಂದಿದ್ದೇನೆ. ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ-ಬೆಳಗಾವಿ ನಡುವೆ ನಮಗೆ ಎರಡು ಡಿಫೆನ್ಸ್ ಕಾರಿಡಾರ್ ಕೊಡಬೇಕು. ಇದನ್ನು ಮನದಟ್ಟು ಮಾಡಿಕೊಡಲೆಂದೇ ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇರಲಿದ್ದಾರೆ ಎಂದು ಎಂ.ಬಿ ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ರಕ್ಷಣೆ ಮತ್ತು ವೈಮಾಂತರಿಕ್ಷ ವಲಯದಲ್ಲಿ ನಾವು ದೇಶಕ್ಕೇ ಅಗ್ರಸ್ಥಾನದಲ್ಲಿದ್ದೇವೆ. ಹೀಗಾಗಿ ನಮಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಒಂದೊಂದು ಡಿಫೆನ್ಸ್ ಕಾರಿಡಾರ್ ಅಗತ್ಯವಾಗಿ ಬೇಕಾಗಿದೆ. ಬೆಳಗಾವಿಯಲ್ಲಿ ಈಗ ಏಕಸ್ ತರಹದ ದೈತ್ಯ ಕಂಪನಿಗಳಿವೆ. ಬೇರೆ ರಾಜ್ಯದವರಿಗೆ ಡಿಫೆನ್ಸ್ ಕಾರಿಡಾರ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ, ನಮಗೆ ಸಲ್ಲಬೇಕಾದ್ದು ಸಲ್ಲಲೇಬೇಕು. ಹಿಂದೆ ಮಾಡಿದ ತಪ್ಪು ಕೇಂದ್ರ ಸರಕಾರಕ್ಕೂ ಅರಿವಾಗಿದೆ. ನಮ್ಮ ಹಿಂದಿನ ಭೇಟಿಗಳಲ್ಲಿ ರಾಜನಾಥ್ ಸಿಂಗ್ ಅವರೇ ಇದನ್ನು ಒಪ್ಪಿಕೊಂಡಿದ್ದರು. ಫೆಬ್ರವರಿಯಲ್ಲಿ ಅವರು ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಬಂದಿದ್ದಾಗಲೂ ಈ ಸಂಗತಿಯನ್ನು ಪ್ರಸ್ತಾಪಿಸಲಾಗಿತ್ತು ಎಂದು ಅವರು ನುಡಿದಿದ್ದಾರೆ.
Key words: actor Prakash Rai, Andhra Pradesh, Tamil Nadu, Minister, M.B. Patil.
The post ನಟ ಪ್ರಕಾಶ್ ರೈ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಟ ಮಾಡುತ್ತಿಲ್ಲ – ಸಚಿವ ಎಂ.ಬಿ ಪಾಟೀಲ್. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.