ಬೆಂಗಳೂರು,ಮಾರ್ಚ್,17,2025 (www.justkannada.in): ನಾವು ಸಮಾಜದ 90% ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದ್ದೇವೆ. ನೀವು ಸಮಾಜದ 10% ಜನರಿಗೆ ಶಕ್ತಿ ತುಂಬುತ್ತಿದ್ದೀರಿ. ನಾವು ಬಿಜೆಪಿಯವರಂತೆ ಕೇವಲ 10% ಜನರ ಕೈಹಿಡಿದು ಶೇ90% ರಷ್ಟು ಜನರನ್ನು ಕೈ ಬಿಟ್ಟಿಲ್ಲ ಎಂದು ಸಿ.ಎಂ ಸಿದ್ದರಾಮಯ್ಯ ಟೀಕಿಸಿದರು.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, 2024-25ಕ್ಕೆ 52,0009 ಕೋಟಿ ಇಟ್ಟು, 41509 ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಖಜಾನೆ ಖಾಲಿಯಾಗಿದೆ ಎಂಬ ಮಾತು ಸತ್ಯಕ್ಕೆ ದೂರ ತಾನೇ ಎಂದು ಅಂಕಿ ಅಂಶಗಳನ್ನು ಮುಂದಿಟ್ಟು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
1.26 ಕೋಟಿ ಕುಟುಂಬಗಳಿಗೆ ಯೋಜನೆಗಳು ತಲುಪುತ್ತಿದ್ದು, ಕೊಟ್ಟ ಮಾತಿನಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವುದಿಲ್ಲ. ಸಾಲಮನ್ನಾ ಮಾಡಿ ಅಂದರೆ ಹಣ ಎಲ್ಲಿಂದ ತರುವುದು ಎಂದು ಹೇಳಿದ ಬಿಜೆಪಿ, ಅದಾನಿಯವರಿಗೆ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.
ರಾಜಕೀಯ ದುರುದ್ದೇಶ ಬಿಟ್ಟು ಮಾತನಾಡಬೇಕೆಂದು ವಿರೋಧ ಪಕ್ಷದವರಿಗೆ ಮನವಿ ಮಾಡಿದ ಸಿಎಂ,
ದೇಶದ 100 ಕೋಟಿ ಜನರಿಗೆ ಕೊಳ್ಳುವ ಆಯ್ಕೆಗಳೇ ಇಲ್ಲ ಎಂದು ವರದಿ ಬಂದಿತ್ತು. 20.5 ಕೋಟಿ ಕುಟುಂಬಗಳು ಅಂದರೆ ನೂರು ಕೋಟಿ ಜನರ ವಾರ್ಷಿಕ ಆದಾಯ 87000 ರೂಪಾಯಿಗಿಂತ ಕಡಿಮೆ ಇದೆ ಎನ್ನುವ ವರದಿ ಬಂದಿದೆ. ಅಸಮಾನತೆ ಅಷ್ಟರ ಮಟ್ಟಿಗೆ ಇದೆ. ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇರುವವರೆಗೆ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ . ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡುವ ಸಾರ್ವತ್ರಿಕ ಮೂಲ ಆದಾಯ ತತ್ವ ಅಗತ್ಯ. ಆರ್ಥಿಕ, ಸಾಮಾಜಿಕ ಶಕ್ತಿಯನ್ನು ಜನರಲ್ಲಿ ತುಂಬಿದರೆ ಜನರ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯ. ನಾವು ಸಮಾಜದ 90% ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದ್ದೇವೆ. ನೀವು ಸಮಾಜದ 10% ಜನರಿಗೆ ಶಕ್ತಿ ತುಂಬುತ್ತಿದ್ದೀರಿ. 94 ರಲ್ಲಿ 34% ಇದ್ದ ಶ್ರೀಮಂತರ ಸಂಖ್ಯೆ ಈಗ 57% ಗೆ ಹೆಚ್ಚಾಗಿದೆ. 50% ಜನರಿಗೆ ಇರುವ ಆರ್ಥಿಕ ಶಕ್ತಿ 15% ಗೆ ಕುಸಿದಿದೆ. ಇದು ಆತಂಕಕಾರಿ ಸಂಗತಿ ಅಲ್ಲವೇ? ಶ್ರೀಮಂತರು ಶ್ರೀಮಂತರಾದರೆ, ಬಡವರು ಬಡವರಾಗುತ್ತಿದ್ದಾರೆ. ಈ ಅಸಮಾನತೆಯನ್ನು ತೊಡೆದು ಹಾಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳಿಂದ ಬಡವರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು ಮಾತ್ರವಲ್ಲ, ಸ್ವಾಭಿಮಾನ ಹೆಚ್ಚುತ್ತಿದೆ. ಜನರು ಸಾಮಾಜಿಕವಾಗಿ ಆರ್ಥಿಕವಾಗಿ ನಿರ್ಭಯವಾಗಿ, ಅವರ ಬದುಕು ಸುಧಾರಣೆಯಾಗಿದೆ. ಸಮಾನತೆಯ ಭಾವ ಉಂಟಾಗುತ್ತಿದೆ ಎಂದರು.
ವೈರುಧ್ಯತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದು, ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು, ನಮಗೆ ಆರ್ಥಿಕ ಸಾಮಾಜಿಕ ಸ್ವಾತಂತ್ಯ ಸಿಕ್ಕಿಲ್ಲ. ಅದು ಸಿಗಬೇಕಾದರೆ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವ ಕೆಲಸವಾಗಬೇಕು ಎಂದು ಅಂಬೇಡ್ಕರ್ ಹೇಳಿದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬಿಜೆಪಿಯವರಂತೆ ನಾವು ಕೇವಲ 10% ಜನರ ಕೈಹಿಡಿದು ಶೇ90% ರಷ್ಟು ಜನರ ಕೈ ಬಿಟ್ಟಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನ ಆರ್ಥಿಕ ನೀತಿ, ನಿಲುವುಗಳು ಯಾರ ಪರವಾಗಿವೆ ಎನ್ನುವ ವ್ಯತ್ಯಾಸವನ್ನು ವಿವರಿಸಿದರು.
ಮೋದಿ ಅಧಿಕಾರಕ್ಕೇರಿ 11ವರ್ಷವಾದ್ರೂ ವಿಧವಾ ವೇತನ, ಅಂತ್ಯೋದಯ ಯೋಜನೆ, ವೃದ್ಧಾಪ್ಯ ವೇತನ ಹೆಚ್ಚಿಸಿಲ್ಲ
ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 11 ವರ್ಷಗಳಾದರೂ ಕೇಂದ್ರ ಸರ್ಕಾರ ವಿಧವಾ ವೇತನ, ಅಂತ್ಯೋದಯ ಯೋಜನೆ, ವೃದ್ಧಾಪ್ಯ ವೇತನವನ್ನು ಒಂದು ರೂಪಾಯಿ ಹೆಚ್ಚಿಸಿಲ್ಲ. ವಸತಿ ಯೋಜನೆಗಳಿಗೆ ಹೆಚ್ಚಳ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಕೇಂದ್ರ ಸರ್ಕಾರ 72 ಸಾವಿರ ಕೊಟ್ಟರೆ ರಾಜ್ಯ ಸರ್ಕಾರ 42 ಸಾವಿರ ಕೊಡುತ್ತದೆ. ಕರ್ನಾಟಕ 2025-26 ನೇ ಸಾಲಿಗೆ 5 ಲಕ್ಷ ಕೋಟಿ ರೂಪಾಯಿ ತೆರಿಗೆ ಕೊಡುತ್ತಿದ್ದೇವೆ. ನಮಗೆ ಅಂದಾಜು 51 ಸಾವಿರ ಕೋಟಿ ವಾಪಸ್ಸು ಬರಬೇಕಾಗುತ್ತದೆ. ಹಾಗೆಂದು ಕೇಳಿದರೆ ಕೇಂದ್ರ ಸರ್ಕಾರದ್ದು ಮಾತನಾಡಬಾರದೆಂದು ಅಶೋಕ್ ಪ್ರಶ್ನಿಸುತ್ತಾರೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಬಡವರಿಗೆ ಕೊಡುವ ಈ ಯೋಜನೆಗಳಿಗೆ ಒಂದು ರೂಪಾಯಿ ಹೆಚ್ಚಳವಾಗಿಲ್ಲ. ರಾಜ್ಯಕ್ಕೆ 15 ನೇ ಹಣಕಾಸು ಯೋಜನೆಯಡಿ ಅನುದಾನದಲ್ಲಿ ಆಗಿರುವ ಅನ್ಯಾಯವನ್ನು ನಾವು ಪ್ರಶ್ನಿಸಬಾರದಂತೆ. ಅನ್ಯಾಯ ಸರಿ ಮಾಡಿ ಎಂದು ಕೇಳಬಾರದಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಆರ್ಥಿಕವಾಗಿ ಹೆಚ್ಚು ಅನುದಾನ ನೀಡಲು ಸಾಧ್ಯವಾಗದೆ ಇರುವುದು ಬಿಜೆಪಿ ಸರ್ಕಾರದಿಂದ. ಬಿಜೆಪಿ ಅಧಿಕಾರದಲ್ಲಿದ್ದಾಗ ಕ್ಯಾಪಿಟಲ್ ಹೂಡಿಕೆಗಳಿಗೆ 2,70,695 ಕೋಟಿ ಕಾಮಗಾರಿಗಳನ್ನು ಅನುದಾನ ಒದಗಿಸದೇ ತೆಗೆದುಕೊಂಡಿರಿ. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ 1,66,426 ಕೋಟಿ ನೀಡಲಾಗಿದೆ. 36 ಸಾವಿರ ಕೋಟಿ ಬಾಕಿ ಬಿಲ್ಲುಗಳು ನಿಮ್ಮ ಬಳುವಳಿ. ನಿಮ್ಮಿಂದ ನಾವು ಕಷ್ಟ ಪಡುವ ಸಂದರ್ಭ ಒದಗಿದೆ ಎಂದು ಲೆಕ್ಕ , ದಾಖಲೆ ಮಂಡಿಸಿದರು.
ನೀವು ಕೇಂದ್ರದಿಂದಲೂ ಅನುದಾನ ತಂದಿಲ್ಲ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು 15 ನೇ ಹಣಕಾಸು ಆಯೋಗದ ಅಧ್ಯಕ್ಷರು 11495 ಕೋಟಿ ಶಿಫಾರಸ್ಸು ಮಾಡಿದರು. ನೀವು ಈ ಬಗ್ಗೆ ಕೇಳಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Key words: BJP, people, CM Siddaramaiah, criticizes, session
The post ನಾವು ಬಿಜೆಪಿಯವರಂತೆ ಕೇವಲ 10% ಜನರ ಕೈಹಿಡಿದು ಶೇ90% ರಷ್ಟು ಜನರನ್ನು ಕೈ ಬಿಟ್ಟಿಲ್ಲ: ಸಿ.ಎಂ ಸಿದ್ದರಾಮಯ್ಯ ಟೀಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




