ಮಂಗಳೂರು, ಜುಲೈ,1,2026 (www.justkannada.in): ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಮಂಗಳೂರು ನಗರದ ಕಂಕನಾಡಿಯಲ್ಲಿ ನಡೆದಿದೆ.
ಅನಾಮಿಕ ಚೌರಾಸಿಯ(8), ಪರಿ (4), ಮಹಿಳೆ ಶಾಂತ (46) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತಪಟ್ಟವರು ಬಿಹಾರ ಮೂಲದವರು ಎನ್ನಲಾಗಿದೆ. ಭಾರೀ ಮಳೆಗೆ ಹಳೆಯ ಹಂಚಿನ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಇಂದು ಕುಸಿದು ಬಿದ್ದ ಪರಿಣಾಮ, ಮನೆಯೊಳಗೆ ನಿದ್ದೆಯ ಮಂಪರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಒಟ್ಟು ನಾಲ್ಕು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದವು. ಈ ಪೈಕಿ ಒಂದು ಮನೆಯಲ್ಲಿ ಬಿಹಾರ ಮೂಲದ ಕುಟುಂಬ ವಾಸವಿತ್ತು. ಗಂಡ ಲಾಲ್ ಬಾಬು, ಪತ್ನಿ ಇಂದು, ಮಕ್ಕಳಾದ ಅನುಷಾ, ಅಲ್ಕಾ, ಅನಾಮಿಕ ಚೌರಾಸಿಯ, ಪರಿ ಜೊತೆ ವಾಸವಾಗಿದ್ದರು. ಈ ಪೈಕಿ ಅನಾಮಿಕ ಚೌರಾಸಿಯ(8), ಪರಿ (4) ಸಾವನ್ನಪ್ಪಿದ್ದಾರೆ. ಲಾಲ್ ಬಾಬು ಹಾಗೂ ಪತ್ನಿ ಇಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೊಂದು ಮನೆಯಲ್ಲಿ ಬಾಲಕೃಷ್ಣ, ಶಾಂತಾ ದಂಪತಿ ವಾಸವಾಗಿದ್ದರು. ಇದರಲ್ಲಿ ಮಹಿಳೆ ಶಾಂತ (46) ಸಾವಿಗೀಡಾಗಿದ್ದಾರೆ. ಸದ್ಯ ಗಾಯಾಳುಗಳಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Key words: Three dead, after, roof of house, collapses, heavy rain
The post ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಕುಸಿದು ಮೂವರು ಸಾವು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




