ಮೈಸೂರು,ಜನವರಿ,2,2026 (www.justkannada.in): ಮುಂಬರುವ ದಿನಗಳಲ್ಲಿ ಸಂಗೀತ, ನೃತ್ಯ ಕಲೆಗಳು ಉತ್ತುಂಗಕ್ಕೆ ಇರಲಿದ್ದು, ಕಲಾವಿದರಿಗೆ ಉಜ್ವಲವಾದ ಭವಿಷ್ಯ ನಿರ್ಮಾಣವಾಗಲಿದೆ ಎಂದು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ನಾಗೇಶ್ ವಿ ಬೆಟ್ಟಕೋಟೆ ನುಡಿದರು.
ನೃತ್ಯನ್ವೇಷಣ ನೃತ್ಯ ಶಾಲೆಯ ಎರಡನೆಯ ವಾರ್ಷಿಕೋತ್ಸವ “ದ್ವಿತೀಯ ನೃತ್ಯ ರಸಾರ್ಣವ” ಕಾರ್ಯಕ್ರಮವು ನಗರದ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿರುವ ಕೆ. ಎಸ್. ಜಿ. ಹೆಚ್. ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ನಾಗೇಶ್ ವಿ ಬೆಟ್ಟಕೋಟೆ ಅವರು, ಮುಂಬರುವ ದಿನಗಳಲ್ಲಿ ಸಂಗೀತ, ನೃತ್ಯ ಕಲೆಗಳು ಉತ್ತುಂಗಕ್ಕೆ ಇರಲಿದ್ದು, ಕಲಾವಿದರಿಗೆ ಉಜ್ವಲವಾದ ಭವಿಷ್ಯ ನಿರ್ಮಾಣವಾಗಲಿದೆ. AI ಸೇರಿದಂತೆ ಇನ್ನು ಅನೇಕ ತಾಂತ್ರಿಕ ಆಯಾಮಗಳಿಗೆ ಸಿಗುತ್ತಿರುವ ಮನ್ನಣೆ, ಹಾಗೂ ಅವುಗಳ ಭವಿಷ್ಯದ ಕುರಿತು ಆಲೋಚಿಸುತ್ತಿರುವ ಜನರು ಕಲೆಗೆ ಪೋಷಣೆ ನೀಡಿದಲ್ಲಿ ಈ ಒತ್ತಡದ ಜೀವನಶೈಲಿಯಿಂದ ಹೊರಬಂದು ನಮ್ಮ ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಮತ್ತೊರ್ವ ಅತಿಥಿ ವೃತ್ತಿಯಲ್ಲಿ ವೈದ್ಯರು ಹಾಗೂ ಕಲಾ ಪೋಷಕ ಡಾ. ಯೋಗೇಶ್ ಆರ್ ಅವರು ಮಾತನಾಡಿ 80 – 90ರ ದಶಕದ ಮಕ್ಕಳಿಗೆ ಶಾಲೆಗೆ ಹೋಗಿ ವಿದ್ಯೆ ಕಲಿಯುವುದೇ ದೊಡ್ಡ ಸವಾಲಾಗಿತ್ತು. ಆದರೆ ಈಗಿನ ಮಕ್ಕಳಿಗೆ ಅವಕಾಶಗಳು ಹೇರಳವಾಗಿದೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳು ಈಗಲೂ ಕಲೆ, ಸಾಹಿತ್ಯ, ನೃತ್ಯ, ಸಂಗೀತ ಕಲಿಕೆಯಿಂದ ವಂಚಿತರಾಗಿದ್ದಾರೆ. ಪೋಷಕರು ಮುಂದಾಳತ್ವ ತೆಗೆದುಕೊಂಡಲ್ಲಿ ಅಸಾಧ್ಯವಾದುದ್ದು ಯಾವುದು ಇಲ್ಲ ಎಂದು ನುಡಿದರು.
ನಿವೃತ್ತ ಶಾಲಾ ಮುಖ್ಯಸ್ಥ ಜಿ.ಎಸ್ ಪಟ್ಟಭಿರಾಮಚಂದ್ರ ಅವರು, ಕಾಲ ಪ್ರಪಂಚದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಆಗಸದಷ್ಟು ಕನಸು ಹೊತ್ತ ಮಕ್ಕಳನ್ನು ಪ್ರೀತಿಯಿಂದ ಅಭಿನಂದಿಸಿದರು.
ನೃತ್ಯಾನ್ವೆಷಣ ಶಾಲೆಯ ಸ್ಥಾಪಕ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ವಿದೂಷಿ ಲಷ್ಮೀ ಎನ್ ಎಸ್ ಅವರು ಕಲಾ ಪೋಷಣೆಯಲ್ಲಿ ಪಾಲಕರು ವಹಿಸುವ ಪಾತ್ರದ ಕುರಿತು ಅರಿವು ಮೂಡಿಸಿದರು.
ಮಕ್ಕಳು ಪಿಳ್ಳಾರಿ ಗೀತೆಗಳು, ಸೀತಾ ರಾಮರ ಕಲ್ಯಾಣ ವೈಭೋಗ, ಪ್ರಖ್ಯಾತವಾದ ಪ್ರಸ್ತುತಿ ವೇಲವ ವೇಲವ ಎಂಬ ಸುಬ್ರಮಣ್ಯನಿಗೆ ಅರ್ಪಿಸುವ ನೃತ್ಯ ಸೇವೆ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನೃತ್ಯ ಲೋಕಕ್ಕೆ ನೃತ್ಯ ಪಯಣವನ್ನು ಆರಂಭಿಸಲು ಬೆನ್ನೆಲುಬಾಗಿ ನಿಂತ ಪೋಷಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
Key words: Music, dance, arts, peak, Dr. Nagesh V. Bettakote, Mysore
The post ಮುಂದಿನ ದಿನಗಳಲ್ಲಿ ಸಂಗೀತ, ನೃತ್ಯ ಕಲೆಗಳು ಉತ್ತುಂಗಕ್ಕೆ- ಡಾ. ನಾಗೇಶ್ ವಿ ಬೆಟ್ಟಕೋಟೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




