ಮೈಸೂರು,ಸೆಪ್ಟಂಬರ್,30,2026 () ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಸಲೀಂ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.
ಮೈಸೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದಸರಾ ಮಹೋತ್ಸವದ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಡಾ. ಸಲೀಂ ಮಾಹಿತಿ ಪಡೆದುಕೊಂಡರು.
ದಸರಾ ಸಂದರ್ಭದಲ್ಲಿ ಅರಮನೆ, ಜಂಬೂಸವಾರಿ ಮಾರ್ಗ, ಪ್ರಮುಖ ಪ್ರವಾಸಿ ತಾಣಗಳು, ಜನದಟ್ಟಣೆ ಪ್ರದೇಶಗಳು ಹಾಗೂ ವಿವಿಧ ದಸರಾ ಕಾರ್ಯಕ್ರಮಗಳ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ಸಭೆಯ ಬಳಿಕ ಮಾತನಾಡಿದ ಡಾ. ಸಲೀಂ, ದಸರಾ ಬಂದೋಬಸ್ತ್ ಕುರಿತು ಸಭೆ ನಡೆಸಲಾಗಿದ್ದು, ಭದ್ರತಾ ವ್ಯವಸ್ಥೆಯ ಸಂಪೂರ್ಣ ರೂಪುರೇಷೆ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಮೈಸೂರು ದಸರಾ ಮಹೋತ್ಸವದ ಭದ್ರತೆಗಾಗಿ ಸುಮಾರು 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತ್ ಅಗತ್ಯವಿದ್ದು, ಅದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ದಸರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಜನದಟ್ಟಣೆ ನಿರ್ವಹಣೆ, ಸಂಚಾರ ನಿಯಂತ್ರಣ, ಪ್ರಮುಖ ಸ್ಥಳಗಳ ಭದ್ರತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸ್ ವ್ಯವಸ್ಥೆ ರೂಪಿಸಲಾಗುತ್ತಿದೆ.
ಈ ಬಾರಿ ಎಷ್ಟು ಸಿಬ್ಬಂದಿಯನ್ನು ನಿಯೋಜಿಸಬೇಕು, ಯಾವೆಲ್ಲೆಡೆ ಹೆಚ್ಚುವರಿ ಭದ್ರತೆ ಕಲ್ಪಿಸಬೇಕು ಹಾಗೂ ಬಂದೋಬಸ್ತ್ನ ಅಂತಿಮ ರೂಪುರೇಷೆ ಹೇಗಿರಬೇಕು ಎಂಬುದರ ಕುರಿತು ಮುಂದಿನ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಸಲೀಂ ತಿಳಿಸಿದರು.
ದಸರಾ ಮಹೋತ್ಸವದ ಸಿದ್ಧತೆಗಳು ವೇಗ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆಯೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.
Mysuru Dasara, Security, tightened, preparations, 6,000 police , deploy




