ಗದಗ,ಜೂನ್,3,2025 (www.justkannada.in): ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಲಕ್ಕುಂಡಿಯ ಉದ್ದೇಶಿತ ಬಯಲು ವಸ್ತು ಸಂಗ್ರಹಾಲಯ ಪ್ರದೇಶದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಲಕ್ಕುಂಡಿ ಚಾಲುಕ್ಯರ ರಾಜಧಾನಿ ಆಗಿತ್ತು. ಈಗ ಹೆಚ್.ಕೆ.ಪಾಟೀಲ್ ಆಸಕ್ತಿಯಿಂದಾಗಿ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನಮ್ಮ ಸರ್ಕಾರದ ಅವಧಿಯಲ್ಲೇ ರಚನೆಯಾಗಿದೆ. ಚಾಲುಕ್ಯರ ಕಾಲದ ದೇವಸ್ಥಾನ, ಕೋಟೆ ಗಳನ್ನು ನಿರ್ಮಿಸಿದ್ದರು. ಇವುಗಳ ಅವಶೇಷಗಳ ಮೂಲಕ ಆ ಕಾಲದ ಶಿಲಾಶಾಸನಗಳ ಪರಿಚಯ ಮತ್ತು ರಾಜ್ಯಭಾರದ ಮಾಹಿತಿ ದೊರಕಿದೆ ಎಂದರು.
ಇಲ್ಲಿ ದೊರೆತಿರುವ ಅವಶೇಷಗಳ ಪುನರುಜ್ಜೀವನಕ್ಕೆ ಸರ್ಕಾರದಿಂದ ಹಣ ಕೂಡ ಕೊಟ್ಟಿದ್ದೇವೆ. ಇದರಿಂದ ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಲು, ರಕ್ಷಿಸಲು ಸಾಧ್ಯವಾಗಿದೆ ಎಂದರು.
ಪ್ರಾಚ್ಯಾವಶೇಷಗಳು ದೊರೆತ ಸ್ಥಳದ ಜಾಗ ಮತ್ತು ಮನೆಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದವರಿಗೆ ಧನ್ಯವಾದ ಅರ್ಪಿಸಿದರು.
ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ:
ಕಾನೂನು ಉಲ್ಲಂಘಿಸಿ ಧರ್ಮದ ಹೆಸರು ಹೇಳಬಾರದು. ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾರೇ ಆದರೂ, ಎಷ್ಟೇ ಪ್ರಭಾವಿ ಆದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಕಾನೂನು ಉಲ್ಲಂಘಿಸಿ ಕ್ರಿಮಿನಲ್ ಕೆಲಸ ಮಾಡೋದು ಬಳಿಕ ಧರ್ಮದ ಹೆಸರು ಹೇಳುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
Key words: Construction, open-air museum, Lakkundi, CM Siddaramaiah
The post ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ ನಿರ್ಮಾಣ: ಸಿ.ಎಂ.ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.