ಬೆಂಗಳೂರು,ಆಗಸ್ಟ್,1,2025 (www.justkannada.in): ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೂವಿನಕೋಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ಕೃತ್ಯ ಎಸಗಿರುವ ದುರುಳರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೂವಿನಕೋಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹತ್ತಾರು ಎಳೆಯ ಮಕ್ಕಳ ಮಾರಣ ಹೋಮ ನಡೆಸುವ ದುರುದ್ದೇಶ ಹೊಂದಿದ್ದ ಇದು ಯಾವ ಭಯೋತ್ಪಾದಕ ಕೃತ್ಯಗಳಿಗೂ ಕಡಿಮೆಯಿಲ್ಲ ಎನ್ನುವುದು ನನ್ನ ಭಾವನೆ.
ಅಡುಗೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಘಟಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದು ತಪ್ಪಿದೆ. ಶಾಲೆಯ ಅಡುಗೆ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಕೃತ್ಯ ಎಸಗಿರುವ ದುರುಳರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿಗೆ ವಿಷ ಬೆರೆಸುವ ಮನಸ್ಥಿತಿ ನಮ್ಮ ನಡುವೆ ಮಾನವೀಯತೆಯ ಅಧಃಪತನವನ್ನು ತೋರಿಸುತ್ತದೆ. ಈ ಬಗ್ಗೆ ಎಲ್ಲರೂ ಆತ್ಮವಿಮರ್ಷೆ ಮಾಡಿಕೊಳ್ಳಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
Key words: Poison, school, drinking water, CM Siddaramaiah, investigation
The post ಶಾಲೆಯ ಕುಡಿಯುವ ನೀರಿಗೆ ವಿಷ: ಸಿಎಂ ಸಿದ್ದರಾಮಯ್ಯ ಕಳವಳ : ಸೂಕ್ತ ತನಿಖೆಗೆ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.