ಬೆಂಗಳೂರು,ಫೆಬ್ರವರಿ,27, 2025 (www.justkannada.in): ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಸದ್ಗುರು ಅವರು ಪ್ರತಿ ಶಿವರಾತ್ರಿಯಂದು ನಡೆಸಿಕೊಡುವ ಈ ಕಾರ್ಯಕ್ರಮದ ಬಗ್ಗೆ ಕೇಳಿದ್ದೆ, ಕಣ್ಣಾರೆ ನೋಡಿ ಇದು ಶಿವಭಕ್ತಿಯ ಶಿಖರ ಅನಿಸಿತು. ನನ್ನ ಹೆಸರಲ್ಲೇ ಶಿವನಿದ್ದಾನೆ. ಅದರ ಹಿಂದೆ ಸ್ವಾರಸ್ಯಕರ ಸಂಗತಿ ಇದೆ. ದೊಡ್ಡ ಆಲಹಳ್ಳಿಯಲ್ಲಿ ಶಿವಾಲ್ದಪ್ಪನ ಬೆಟ್ಟ ಇದೆ. ನಮ್ಮ ಮನೆಯಲ್ಲಿ ಯಾರೇ ಹುಟ್ಟಿದರೂ ಮೊದಲು ಹೆಣ್ಮಕ್ಕಳಿಗೆ ಕೆಂಪಮ್ಮ ಅಂತ ಹೆಸರಿಡುತ್ತಾರೆ. ಗಂಡು ಮಕ್ಕಳಿಗೆ ಕೆಂಪೇಗೌಡ ಅಂತ ಹೆಸರಿಡುತ್ತಾರೆ. ಅದು ಪದ್ದತಿ. ಶಿವಾಲ್ದಪ್ಪನಿಗೆ ನನ್ನ ತಾಯಿ ಹರಕೆ ಮಾಡಿಕೊಂಡಿದ್ದರು. ನಾನು ಹುಟ್ಟಿದ್ದಕ್ಕೆ ನನಗೆ ಮೊದಲು ಕೆಂಪರಾಜ್ ಅಂತ ಹೆಸರಿಟ್ಟು, ಆನಂತರ ಶಿವಾಲ್ದಪ್ಪನಿಗಾಗಿ ಶಿವಕುಮಾರ್ ಅಂತ ಹೆಸರಿಟ್ಟರು ಎಂದು ವಿವರಿಸಿದ್ದಾರೆ.
ಹಾಗೆಯೇ ಸದ್ಗುರು ಅವರ ಮಾತುಗಳಲ್ಲಿ ಆಳವಾದ ತತ್ವಗಳ ಜೊತೆ ಸೌಮ್ಯವಾದ ಹಾಸ್ಯದ ಸಂಯೋಜನೆ ಇರುತ್ತದೆ. ಬದುಕಿನ ಒಳಹುಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದೆವು. ಗಂಭೀರ ವಿಚಾರಗಳ ಮಧ್ಯೆ, ಹಾಸ್ಯದ ಝಲಕ್ ಗಳು ಮನಸ್ಸಿಗೆ ಹಿತ ನೀಡಿದವು.
ಜೀವನವೆಂದರೆ ಅನಂತ ಯಾತ್ರೆ. ಪ್ರತಿ ಕ್ಷಣವೂ ಒಂದು ಅಧ್ಯಾಯ, ಪ್ರತಿ ನಗುವೂ ಮತ್ತು ಆಲೋಚನೆಯೂ ನಮ್ಮ ಆಂತರಿಕ ಬೆಳಕಿಗೆ ಪೂರಕ. ನಿಜವಾದ ಸಂಪತ್ತು ಅಂದರೆ, ಆಂತರಿಕ ಶಾಂತಿ, ಆತ್ಮ-ಸಾಕ್ಷಾತ್ಕಾರ ಮತ್ತು ಆ ಭಾವನೆ, ಬದುಕಿನ ಪ್ರತಿಯೊಂದು ಕ್ಷಣದಲ್ಲಿ ಜೀವಂತವಾಗಿರುವ ಸತ್ಯ ಎಂದು ಡಿಕೆಶಿ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Key words: Sadhguru, words, profound, principles, DCM, DK Shivakumar
The post ಸದ್ಗುರು ಮಾತಿನಲ್ಲಿ ಆಳವಾದ ತತ್ವಗಳ ಜೊತೆ ಸೌಮ್ಯವಾದ ಹಾಸ್ಯ ಸಂಯೋಜನೆ ಇರುತ್ತದೆ- ಡಿಸಿಎಂ ಡಿಕೆ ಶಿವಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.




