ಬೆಂಗಳೂರು,ಜುಲೈ,23,2025 (www.justkannada.in): ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಜುಲೈ 25 ರಂದು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಕರೆ ನೀಡಲಾಗಿದ್ದ ಬಂದ್ ಅನ್ನು ವರ್ತಕರು ವಾಪಸ್ ಪಡೆದಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ವರ್ತಕರ ಸಂಘ, ಎಫ್ ಕೆ ಸಿಸಿಐ ಜೊತೆ ನಡೆಸಿದ ಸಭೆ ಯಶಸ್ವಿಯಾಗಿದೆ. ಸಭೆ ಬಳಿಕ ಸಣ್ಣ ವರ್ತಕರು ಬಂದ್ ನಿರ್ಧಾರ ಕೈಬಿಡಲು ಒಪ್ಪಿದ್ದಾರೆ ಎನ್ನಲಾಗಿದೆ
ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಿಎಸ್ ಟಿ ನೋಟಿಸ್ ವಿಚಾರವಾಗಿ ಸಣ್ಣ ವರ್ತಕರು ಜುಲೈ 25ರಂದು ಕರೆ ನೀಡಿದ್ದ ಬಂದ್ ಹಿಂಪಡೆಯಲು ಒಪ್ಪಿದ್ದಾರೆ. 40 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರಿಗೆ ತೆರಿಗೆ ನೋಟಿಸ್ ನೀಡಲಾಗಿತ್ತು. ಮೂರು ವರ್ಷಗಳ ಅರಿಯರ್ಸ್, ತೆರಿಗೆ ಪಾವತಿ ಸೇರಿದಂತೆ ಕೆಲ ಸಮಸ್ಯೆಗಳನ್ನು ಹೇಳಿದ್ದು, ಈ ಬಗ್ಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಲಾಗಿದೆ ಎಂದರು.
ವ್ಯಾಪಾರಿಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ. ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್ಟಿ ನೊಟೀಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆ. ಜಿಎಸ್ಟಿ ನೊಟೀಸ್ ನೀಡುವುದು ತಪ್ಪಲ್ಲ. ಆದರೆ ವ್ಯಾಪಾರಿಗಳಿಗೆ ಪರಿಹಾರ ತೆರಿಗೆ ಪಾವತಿಸಲು ಅವಕಾಶ ನೀಡಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ವ್ಯಾಪಾರಿಗಳು ನೇರವಾಗಿ ಇಲಾಖೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕುʼ ಎಂದು ಕೆಲವು ಪ್ರತಿನಿಧಿಗಳು ಮನವಿ ಮಾಡಿದ್ದಾರೆ.
ʻಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕುʼ.ಜಿಎಸ್ಟಿ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಯುಪಿಐ ಅಡಿ ರೂ. 40ಲಕ್ಷಕ್ಕೂ ಅಧಿಕ ವಹಿವಾಟು ಮಾಡಿರುವವರಿಗೆ ಮಾತ್ರ ಜಿಎಸ್ಟಿ ನೊಟೀಸ್ ನೀಡಲಾಗಿದೆ. ಆರಂಭದಲ್ಲಿ ಜಿಎಸ್ಟಿ ನೊಂದಣಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು ಎಂದರು.
ನೊಟೀಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಅದನ್ನು ಸರ್ಕಾರ ವಸೂಲು ಮಾಡುವುದಿಲ್ಲ. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಯುಪಿಐ ವಹಿವಾಟು ಕೈಬಿಟ್ಟರೆ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಕೇವಲ 9ಸಾವಿರ ವ್ಯಾಪಾರಿಗಳಿಗೆ ಕಳೆದ 2-3 ವರ್ಷಗಳ ಅವಧಿಗೆ ಸಂಬಂಧಿಸಿದಂತೆ 18ಸಾವಿರ ನೊಟೀಸ್ ಜಾರಿಗೊಳಿಸಲಾಗಿದೆ. ವ್ಯಾಪಾರ ವಹಿವಾಟುಗಳನ್ನು ಕಾನೂನು ಬದ್ಧವಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ. ತೆರಿಗೆ ಸರಿಯಾಗಿ ಪಾವತಿಸಲು ಸಹಕಾರ ನೀಡಲಿದೆ. ವ್ಯಾಪಾರಿಗಳಿಗೆ ತೊಂದರೆ ನೀಡಬೇಕೆಂಬುವುದು ಸರ್ಕಾರದ ಉದ್ದೇಶವಲ್ಲ. ಸರ್ಕಾರ ಸಣ್ಣ ವ್ಯಾಪಾರಿಗಳ ಪರವಾಗಿದೆ. ಜಿಎಸ್ಟಿ ತೆರಿಗೆಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಈ ತೆರಿಗೆ ಸಂಗ್ರಹದಲ್ಲಿ ಶೇ.50ರಷ್ಟನ್ನು ರಾಜ್ಯಕ್ಕೆ ನೀಡಲಾಗುತ್ತದೆ. ದೇಶದಲ್ಲೇ ಕರ್ನಾಟಕ ಜಿಎಸ್ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸರ್ಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದ್ದು, ಯಾರಿಗೂ ತೊಂದರೆಯಾಗದಂತೆ ಖಾತ್ರಿಪಡಿಸಲಾಗುವುದು. ವ್ಯಾಪಾರಿಗಳಿಗೆ ನೆರವು ನೀಡಲು ಈಗಲೇ ಸಹಾಯವಾಣಿ ಇದ್ದು, ಇದನ್ನು ಪರಿಣಾಮಕಾರಿಯಾಗಿಸಬೇಕು. ವ್ಯಾಪಾರ ವಹಿವಾಟು ಬಂದ್ ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ ಎಂದು ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತಾಗಿ ನಡೆಸಲು ನಿರ್ಧರಿಸಿದ್ದ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಕೈಬಿಡಲಾಗುವುದು ಎಂದು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: CM Siddaramaiah, Meeting, Small traders, notice, Bandh July 25
The post ಸಿಎಂ ಸಿದ್ದರಾಮಯ್ಯ ಸಭೆ ಯಶಸ್ವಿ: ಜುಲೈ 25ರಂದು ವರ್ತಕರು ಕರೆ ನೀಡಿದ್ದ ಬಂದ್ ವಾಪಾಸ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.