ಚಾಮರಾಜನಗರ ಏಪ್ರಿಲ್, 25,2025 (www.justkannada.in): ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಬಡವರಿಗೆ ನೆರವಾಗುವ ರೀತಿಯಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ. ಇದರಿಂದ ಅಂಬೇಡ್ಕರ್ ಅವರ ಸಮಾನತೆಯ ಅವಕಾಶ ಈಡೇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕನಕ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಈಗಾಗಲೇ 2 ಕೋಟಿ ರೂಪಾಯಿಯಲ್ಲಿ 50 ಲಕ್ಷ ರೂಪಾಯಿ ಬಿಡುಗಡೆ ಆಗಿದೆ. ಹಲವರು ದೇಣಿಗೆ ಕೂಡ ಕೊಟ್ಟಿದ್ದಾರೆ. ಇವರೆಲ್ಲರಿಗೂ ಒಳ್ಳೆಯದಾಗಲಿ ಎಂದರು.
ಸಮುದಾಯ ಭವನ ಕಟ್ಟಿ. ಆದರೆ, ಇದಕ್ಕಿಂತ ಹೆಚ್ಚಾಗಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆ ನಿರ್ಮಿಸಿ, ಜಿಲ್ಲೆಯ ಎಲ್ಲಾ ಹಿಂದುಳಿದ ಸಮುದಾಯಗಳ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ದೊರಕುವಂತೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.
ಚಾಮರಾಜನಗರ ಜಿಲ್ಲೆ ಅತ್ಯಂತ ಹಿಂದುಳಿದಿರುವ ಜಿಲ್ಲೆ. ಇಲ್ಲಿ ಶಿಕ್ಷಣ ಹೆಚ್ಚೆಚ್ಚು ಸಿಗಬೇಕಿದೆ. ಶಿಕ್ಷಣ ಕಲಿಯಬೇಕಿದ್ದರೆ ಹಾಸ್ಟೆಲ್ ಗಳ ಅಗತ್ಯವೂ ಇದೆ. ನಮ್ಮ ಸರ್ಕಾರ ಎಲ್ಲಾ ಜಾತಿಯ ಬಡವರಿಗೂ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆ ಸೇರಿ ನಮ್ಮ ಐದೂ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡ ಮಹಿಳೆಯರಿಗೂ ಅನುಕೂಲ ಆಗುತ್ತಿದೆ. ಕೆಲಸಕ್ಕೆ ಹೋಗುವ ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಇದರಿಂದ ಹೆಚ್ಚು ಸಮಾಧಾನ ಆಗಿದೆ. ವಿದ್ಯಾರ್ಥಿನಿಯರಿಗೂ ಸಮಾಧಾನ ಆಗಿದೆ. ಹೀಗೆ ಎಲ್ಲಾ ಜಾತಿಯ ಬಡವರು, ಮಧ್ಯಮ ವರ್ಗದವರಿಗೆ ನೆರವಾಗುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಸಾಮಾಜಿಕ ಸಮೀಕ್ಷೆ:
ಸಂವಿಧಾನ ಬಂದು 75 ವರ್ಷ ಆದರೂ ಸಾಮಾಜಿಕ ನ್ಯಾಯ ಈಡೇರಿಲ್ಲ. ಅವಕಾಶ ವಂಚಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ಅರಿಯಲು ಸಮೀಕ್ಷೆ ನಡೆಸಿದ್ದೇವೆ. 2015 ರಲ್ಲಿ ನಡೆಸಿದ ಸಮೀಕ್ಷೆ ಬಳಿಕ ಬಂದ ಸಿಎಂಗಳು ಸ್ವೀಕರಿಸಿಲ್ಲ. ನಾನು ಸ್ವೀಕರಿಸಿ ಕ್ಯಾಬಿನೆಟ್ ಮುಂದೆ ಇಟ್ಟಿದ್ದೀನಿ. ಇದು ಯಾರ ವಿರುದ್ಧವೂ ಇರುವ ಸಮೀಕ್ಷೆ ಅಲ್ಲ. ಎಲ್ಲರ ಸ್ಥಿತಿ ಗತಿ ತಿಳಿಯುವ ಸಮೀಕ್ಷೆ ಮಾತ್ರ ಆಗಿದೆ ಎಂದರು.
ಬಿಜೆಪಿಯ ರಾಮಾ ಜೋಯಿಸ್ ಅವರು ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದರು. ನಿಮಗೆ ಸೈದ್ಧಾಂತಿಕವಾಗಿ ಸ್ಪಷ್ಟ ತಿಳಿವಳಿಕೆ ಇರಬೇಕು. ನೀವು ನನಗೂ ಚಪ್ಪಾಳೆ ತಟ್ಟೋದು, ಸಾಮಾಜಿಕ ನ್ಯಾಯದ ವಿರೋಧಿ ಆಗಿರುವ ಬಿಜೆಪಿಯವರ ಮಾತಿಗೂ ಚಪ್ಪಾಳೆ ತಟ್ಟೋದನ್ನು ನಿಲ್ಲಿಸಿ. ನಮ್ಮ ಪರವಾಗಿ ಇರುವವರು ಯಾರು ಎಂದು ತಿಳಿದು ಆಶೀರ್ವಾದ ಮಾಡಿ ಎಂದರು.
ಚಾಮರಾಜನಗರ ಇಷ್ಟವಾದ ಜಿಲ್ಲೆ
ನನಗೆ ಚಾಮರಾಜನಗರ ಅತ್ಯಂತ ಇಷ್ಟವಾದ ಜಿಲ್ಲೆ. ಚಾಮರಾಜನಗರಕ್ಕೆ 20 ಸಾರಿ ಬಂದು-ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದರು.
Key words: Build, hostels, educational institutions, poor, CM Siddaramaiah
The post ಎಲ್ಲಾ ಜಾತಿ, ಧರ್ಮದ ಬಡವರಿಗಾಗಿ ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ- ಸಿ.ಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.