ಚಾಮರಾಜನಗರ,ಜೂನ್,27,2025 (www.justkannada.in): ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ ಐದು ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರು ದನಗಾಹಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಹನೂರು ತಾಲೂಕಿನ ಗಾಜನೂರಿನ ನಾಲ್ವರನ್ನ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಹುಲಿಗಳ ಕಳೇಬರ ಸಿಕ್ಕ ಸ್ಥಳದಲ್ಲಿ ಹಸುವಿನ ದೇಹ ಪತ್ತೆಯಾಗಿದ್ದು, ಬೇಟೆಯಾಡಿದ್ದ ಹಸುವಿಗೆ ಕೀಟನಾಶಕ ಸಿಂಪಡಣೆ ಮಾಡಿರುವ ಶಂಕೆ ಹಿನ್ನೆಲೆ ದನಗಾಹಿಗಳನ್ನ ವಶಕ್ಕೆ ಪಡೆಯಲಾಗಿದೆ.
ಮೃತಪಟ್ಟಿರುವ ಹಸು ಯಾರದ್ದು ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದು, ಹಸು ಕೊಂದ ಕೋಪಕ್ಕೆ ದನಗಾಹಿಗಳು ವಿಷ ಇಟ್ಟರಾ ಇಲ್ಲವೇ ಇದು ಬೇಟೆಗಾರರ ಕೃತ್ಯವೇ ಎಂಬುದರ ಬಗ್ಗೆ ತನಿಖೆ ನಡೆಯಲಿದೆ. ಮೃತಪಟ್ಟ ಹುಲಿಗಳಲ್ಲಿ ನಾಲ್ಕು ಹೆಣ್ಣು ಹುಲಿ, ಒಂದು ಗಂಡು ಹುಲಿಗಳಾಗಿದ್ದು ಕೆಲವೇ ತಿಂಗಳುಗಳಲ್ಲಿ ಟೆರಿಟರಿ ಮಾಡಿಕೊಳ್ಳುವ ಹಂತದಲ್ಲಿದ್ದವು.
ಇನ್ನು ಪ್ರಕರಣ ಕುರಿತು ತನಿಖೆ ನಡೆಸಲು ಪಿಸಿಸಿಎಫ್ ಬಿ.ಪಿ.ರವಿ ನೇತೃತ್ವದಲ್ಲಿ 6 ಮಂದಿ ತನಿಖಾ ತಂಡ ನೇಮಿಸಲಾಗಿದ್ದು ತಂಡ ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. 14 ದಿನದಲ್ಲಿ ಹುಲಿ ಸಾವಿನ ಸಮಗ್ರ ವರದಿ ಕೊಡಲು ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದೆ. ಇಂದು 4 ಮರಿಗಳ ಮರಣೋತ್ತರ ಪರೀಕ್ಷೆ ಬಳಿಕ ಎನ್ ಟಿಸಿಎ ಮಾರ್ಗಸೂಚಿ ಅನ್ವಯ 5 ಹುಲಿಗಳ ಕಳೇಬರ ಅಂತ್ಯಕ್ರಿಯೆ ನಡೆಯಲಿದೆ.
Key words: Five ,tiger, deaths, Four Member, custody
The post ಐದು ಹುಲಿ ಸಾವು ಪ್ರಕರಣ: ನಾಲ್ವರು ದನಗಾಹಿಗಳು ಅರಣ್ಯ ಇಲಾಖೆ ವಶಕ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.