ಬೆಂಗಳೂರು,ಜೂನ್,2,2025 (www.justkannada.in): ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಮಾಹಿತಿ ನೀಡುವ ದೃಷ್ಟಿಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಹೊರತಂದಿರುವ ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆ ಕಾರ್ಯನಿರ್ವಹಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವಡಾ. ಎಂ ಸಿ ಸುಧಾಕರ್ ಹೇಳಿದ್ದಾರೆ.
ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆಯನ್ನು ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಮುಂಬರುವ ದಿನಗಳಲ್ಲಿ ಈ ಪತ್ರಿಕೆ ಮೂಲಕ ಉನ್ನತ ಶಿಕ್ಷಣ ಇಲಾಖೆಯ ಆದೇಶಗಳು, ಸೂಚನೆಗಳು, ನಿಯಮಾವಳಿಗಳನ್ನು ಕಾಲಕಾಲಕ್ಕೆ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳು ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪ್ರಗತಿ, ತಂತ್ರಜ್ಞಾನ ಬಳಕೆ ಸೇರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿನ ಜಾಗತಿಕ ನಡೆಯನ್ನು ಈ ಪತ್ರಿಕೆಯಲ್ಲಿ ದಾಖಲಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಮಾಹಿತಿ ನೀಡಲಾಗುವುದು. ಖ್ಯಾತ ಶಿಕ್ಷಣ ತಜ್ಞರು, ಸಂಶೋಧಕರು ಪತ್ರಿಕೆಗೆ ಬರೆಯಲಿದ್ದಾರೆ ಎಂದರು.
ಎಡಿಬಿ ಬ್ಯಾಂಕ್ ಸಾಲ
ನಮ್ಮ ತಾಂತ್ರಿಕ ಶಿಕ್ಷಣವನ್ನು ಬಲಗೊಳಿಸಲು ಏಷ್ಯಾ ಡೆವಲಪ್ಮೆಂಟ್ ಬ್ಯಾಂಕ್ ನಿಂದ 2600 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ನಿರ್ವಹಣೆಯ ಇಲಾಖೆ ಕೂಡ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಎಡಿಬಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ತಿಳಿಸಿದರು.
ಈಗಾಗಲೇ ಎಡಿಬಿ ಬ್ಯಾಂಕ್ ಅಧಿಕಾರಿಗಳು ನಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ಸದ್ಯದಲ್ಲೇ ಸಾಲ ಬಿಡುಗಡೆಯಾಗಲಿದೆ ಈ ಹಣದಿಂದ ನಮ್ಮ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ಉತ್ತಮವಾಗಿ ಸುಧಾರಣೆ ಮಾಡಿ ವಿದ್ಯಾರ್ಥಿಗಳಿಗೆ ಕೌಶಲ್ಯಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ನೂತನ ಶಿಕ್ಷಣ ನೀತಿ ವರದಿ
ರಾಜ್ಯ ನೂತನ ಶಿಕ್ಷಣ ನೀತಿ ಆಯೋಗವು ತನ್ನ ಕಾರ್ಯವನ್ನು ಮುಗಿಸಿದ್ದು ಜೂನ್ ಎರಡನೇ ವಾರದಲ್ಲಿ ವರದಿ ಸಲ್ಲಿಸಲಿದೆ. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳ ಭೇಟಿ ದಿನಾಂಕವನ್ನು ಕೋರಲಾಗಿದೆ ಎಂದು ಸುಧಾಕರ್ ತಿಳಿಸಿದರು. 2025 ಮೇ 31ರವರೆಗೆ ಸುಖದೇವ್ ತೋರಟ್ ಅವರ ರಾಜ್ಯ ನೂತನ ಶಿಕ್ಷಣ ನೀತಿ ಆಯೋಗಕ್ಕೆ ಅವಕಾಶ ನೀಡಲಾಗಿತ್ತು ಎಂದರು.
ಉದ್ಯೋಗ ಖಾತ್ರಿ ಶಿಕ್ಷಣ
ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿ ಶಿಕ್ಷಣವನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕಲಿಕೆಯ ಸಮಯದಲ್ಲೇ ಕೈಗಾರಿಕಾ ಪೂರಕ ಹಾಗೂ ಉದ್ಯೋಗ ದೊರಕುವಂತಹ ಕೌಶಲ್ಯಾಧಾರಿತ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಿಲುವು ಮತ್ತು ಉದ್ದೇಶಗಳ ಮಾಹಿತಿ ನೀಡಲು ಪತ್ರಿಕೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಇಲಾಖೆ ಕಾರ್ಯದರ್ಶಿ ಕೆ.ಜಿ .ಜಗದೀಶ್, ಕೆಇಎ ಕಾರ್ಯಕಾರಿ ನಿರ್ವಾಹಕರಾದ ಹೆಚ್ ಪ್ರಸನ್ನ, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಎಸ್. ಆರ್ ನಿರಂಜನ್, ಕಾರ್ಯಕಾರಿ ನಿರ್ವಾಹಕ ಕೆ.ಜಿ ಚಂದ್ರಶೇಖರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
Key words: CM Siddaramaiah, Karnataka Higher Education, Quarterly, Paper
The post ಕರ್ನಾಟಕ ಉನ್ನತ ಶಿಕ್ಷಣ ತ್ರೈಮಾಸಿಕ ಪತ್ರಿಕೆ ಬಿಡುಗಡೆಗೊಳಿಸಿದ ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.