ಮೈಸೂರು,ಜೂನ್,4, 2025 (www.justkannada.in): 66/11 ಕೆ.ವಿ. ಮತ್ತು 220 ಕೆ. ವಿ. ಸಾಮರ್ಥ್ಯದ ವಿದ್ಯುತ್ ಪ್ರಸರಣ ನಿಗಮದ ತಂತಿ ರೈತರುಗಳ ಜಮೀನಿನ ಮೇಲೆ ಹಾದು ಹೋಗಿದ್ದು, ಇದರಿಂದ ಕೃಷಿ ಭೂಮಿ ಕಳೆದು ಕೊಳ್ಳುತ್ತಿರುವ ರೈತರುಗಳಿಗೆ ನ್ಯಾಯ ಸಮ್ಮತ ಭೂ ಪರಿಹಾರ ಕೊಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಂಧನ ಸಚಿವ ಕೆ.ಜೆ ಜಾರ್ಜ್ ಅವರಿಗೆ ಒತ್ತಾಯಿಸಲಾಯಿತು.
ಇಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ರೈತಮುಖಂಡರ ನಿಯೋಗ ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು.
ಹುಣಸೂರು ಉಪ ವಿಭಾಗದ ಗೆಜ್ಜೆಯನವಡ್ಡರಗುಡಿ ಗ್ರಾಮದ ಮಿನಿ ಸ್ಟೇಷನ್ ನಿಂದ ಗೆಜ್ಜೆಯನ ವಡ್ಡರಗುಡಿ, ಧರ್ಮಾಪುರ, ಕರಿಮುದ್ದನಹಳ್ಳಿ, ಆಸ್ಪತ್ರೆ ಕಾವಲ್, ಬಸ್ತಿ ಮಾರನಹಳ್ಳೀ, ಹಳ್ಳದ ಕೊಪ್ಪಲು, ಉದ್ದೂರು ಕಾವಲ್, ತರಿಕಲ್, ತರಿಕಲ್ ಕಾವಲ್ ಮುಂತಾದ ಗ್ರಾಮಗಳ ರೈತರ ಜಮೀನುಗಳ ಮೇಲೆ ವಿದ್ಯುತ್ ಲೈನ್ ಹಾದು ಹೋಗಿರುವ ಮತ್ತು ಟವರ್ ನಿರ್ಮಾಣ ಮಾಡಿರುವ ಜಾಗಕ್ಕೆ ಭೂಮಿ ಪರಿಹಾರ ನೀಡುವ ಬಗ್ಗೆ ಯಾವುದೇ ಸ್ಪಷ್ಟವಾದ ಕ್ರಮ ಜಾರಿಯಾಗಿಲ್ಲ. ಅಧಿಕಾರಿಗಳು ಈ ಸಂಬಂಧ ಕಾರ್ಯ ನಿರ್ವಹಿಸಲು ಸಭೆ ನಡೆಸಿದ್ದು, ಜಮೀನಿನ ರೈತರ ಗಮನಕ್ಕೂ ತರದೆ ಹಾಗೂ ಅನುಮತಿ ಪಡೆಯದೆ ಸುಳ್ಳು ವರದಿ ಸೃಷ್ಟಿಸಿ, ರೈತರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನ ಆದೇಶದ ಪ್ರತಿಯಂತೆ ರೈತರು ಮತ್ತು ಭೂ ಮಾಲೀಕರನ್ನು ಕರೆದು ದರ ನಿರ್ಧಾರ ಮಾಡಿದ್ದೇವೆಂದು ದಿನಾಂಕ 05-03-2024 ರಂದು ಉಪವಿಭಾಗಾಧಿಕಾರಿಗಳು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.
ಪುನಃ ಮಾಹಿತಿ ಹಕ್ಕಿನಡಿಯಲ್ಲಿ ಯಾವ ರೈತರು, ಜಮೀನುಗಳ ಮಾಲೀಕರು ಸಭೆಯಲ್ಲಿ ಹಾಜರಿದ್ದರು ಎಂದು ಮಾಹಿತಿ ಹಕ್ಕಿನಡಿಯಲ್ಲಿ ಕೋರಿದಾಗ, ಯಾರು ಸಭೆಯಲ್ಲಿ ಹಾಜರಾತಿಗೆ ಸಮ್ಮತಿಸದೇ ನಿರಾಕರಿಸಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಇದು ರೈತರು ಸಭೆಗೆ ಗೈರು ಆಗಿರುವ ಬಗ್ಗೆ ಸ್ಪಷ್ಟ ಸಂದೇಶ ನೀಡುತ್ತದೆ. ಮತ್ತೆ ರೈತರ ಜಮೀನಿಗೆ ನ್ಯಾಯ ಸಮ್ಮತ ದರ ನಿರ್ಧಾರವಾಗಿರುವುದು ಕಂಡು ಬಂದಿಲ್ಲ. ಈ ಭಾಗದ ರೈತರುಗಳ ಜಮೀನುಗಳ ಬೆಲೆ 1 ಕುಂಟೆಗೆ 2 ಲಕ್ಷ ರೂಪಾಯಿ ಮಾರಾಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರು ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದು ನ್ಯಾಯಸಮ್ಮತ ಬೆಲೆ ನಿಗಧಿ ಮಾಡಿ ನಾಲ್ಕು ಪಟ್ಟು ಕೊಡಿಸಬೇಕು ಎಂದು ರೈತಮುಖಂಡರು ಮನವಿ ಮಾಡಿದ್ದಾರೆ.
ಹಾಗೆಯೇ ಈಗಾಗಲೇ ವಿದ್ಯುತ್ ನಿಗಮದ ಅಧಿಕಾರಿಗಳು ರೈತರ ಅನುಮತಿ ಪಡೆಯದೇ, ಲೈನ್ ಅನ್ನು ಚಾರ್ಜ್ ಮಾಡಿದ್ದಾರೆ. ಅದೇ ರೀತಿ ಮೈಸೂರು ತಾಲೂಕು ಕಡಕೋಳ ದಿಂದ ವಾಜಮಂಗಲಕ್ಕೆ ಹೋಗುವ 220 ಕೆ ವಿ ಈ ಯೋಜನೆಗೆ ಸಂಬಂಧಪಟ್ಟಂತೆ ಕೂಡನಹಳ್ಳಿ ದೇವಲಾಪುರ ಮಾರಶೆಟ್ಟಳ್ಳಿ ಜೋರನಹಳ್ಳಿ ವರುಣ ವಾಜಮಂಗಲ ಹಳ್ಳಿಗಳ ರೈತರಿಗೂ ಸರಿಯಾದ ಪರಿಹಾರ ನೀಡದೆ ದಬ್ಬಾಳಿಕೆಯಿಂದ ಕೆಲಸ ಮಾಡಲು ಹೋಗಿದ್ದಾರೆ. ಹಳ್ಳಿಗಳಲ್ಲಿರುವ ರೈತರ ಜಮೀನುಗಳ ಅಕ್ಕ ಪಕ್ಕದಲ್ಲಿ ಲೇಔಟ್ ಗಳು ಇದ್ದು ಒಂದು ಗುಂಟೆಗೆ 6 ಲಕ್ಷದಿಂದ 10 ಲಕ್ಷಗಳವರೆಗೆ ಬೆಲೆ ಆಗುತ್ತಿದೆ. ಆದರೆ ಇಂಧನ ಇಲಾಖೆಯವರು ಕೇವಲ 50,000 60,000 ಹೇಳುತ್ತಿದ್ದಾರೆ. ಆದ್ದರಿಂದ ಒಂದು ಗುಂಟೆಗೆ ಕನಿಷ್ಠ 6 ಲಕ್ಷ ನಿಗದಿ ಮಾಡಬೇಕೆಂದು ಮನವಿ ಮಾಡುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಜೊತೆಗೆ ಕೃಷಿ ಪಂಪ್ ಸೆಟ್ ಬಳಕೆ ರೈತರಿಗೆ ಆಧಾರ್ ನೋಂದಣಿ ಮಾಡಿ ಮೀಟರ್ ಅಳವಡಿಕೆ ಕೈ ಬಿಡಬೇಕು. ಅಕ್ರಮ ಸಕ್ರಮ ಯೋಜನೆ ಮುಂದುವರಿಸಿ ಕೃಷಿ ಪಂಪ್ ಸೆಟ್ ವಿದ್ಯುತ್ ಬಳಕೆ ರೈತರಿಗೆ 5000/- ಹಣ ಕಟ್ಟಿಸಿಕೊಂಡು ಸಂಪರ್ಕ ಕಲ್ಪಿಸಿ ಕೊಡಬೇಕು. ಐ ಪವರ್ ವಿದ್ಯುತ್ ತಂತಿ ಹಾದು ಹೋಗಿರುವ ಜಮೀನುಗಳ ರೈತರಿಗೆ ಕೃಷಿ ಪಂಪ್ ಸೆಟ್ ವಿದ್ಯುತ್ ಬಳಕೆ ಗೆ ಸರ್ಕಾರದಿಂದಲೇ ಉಚಿತ ಸಂಪರ್ಕ ಕಲ್ಪಿಸಿ ಕೊಡಬೇಕು.
ರೈತರು ತಮ್ಮ ತೋಟ ಹಾಗೂ ಕೃಷಿ ಜಮೀನಿನಲ್ಲಿ ವಾಸದ ಮನೆ ನಿರ್ಮಾಣ ಮಾಡಿ ಕೊಂಡಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟು ವಿದ್ಯಾರ್ಥಿಗಳಿಗೆ ಹಾಗೂ ವಯೋ ವೃದ್ಧರಿಗೆ ಬೆಳಕಿನ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು. ಈ ಎಲ್ಲಾ ಮನವಿಗಳನ್ನ ಗಂಭೀರವಾಗಿ ತೆಗೆದುಕೊಂಡು ಅಗತ್ಯ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿ ಕೊಡಬೇಕೆಂದು ಜಿಲ್ಲಾ ಘಟಕ ಒತ್ತಾಯಿತು.
ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು, ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಗೌರವಾಧ್ಯಕ್ಷ ಧನಗಹಳ್ಳಿ ಕೆಂಡಗಣಪ್ಪ, ಮುಖಂಡರುಗಳಾದ ವರಕೊಡು ನಾಗೇಶ್, ವಾಜಮಂಗಲ ಮಹಾದೇವ, ಕೂಡನಹಳ್ಳಿ ಸೋಮಣ್ಣ, ದೊಡ್ಡ ಕಾಟೂರು ಮಾದೇವಸ್ವಾಮಿ, ಬನ್ನೂರು ಸೂರಿ, ಸಾತಗಳ್ಳಿ ಬಸವರಾಜು, ವಡ್ಡರಗುಡಿ ಮಾದೇವಸ್ವಾಮಿ, ಚಂದ್ರು, ಪುಟ್ಟಸ್ವಾಮಿ, ಶಿವಣ್ಣ, ಮಹೇಶ್, ಮಲ್ಲಣ್ಣ, ಸೇರಿದಂತೆ 40 ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.
Key words: Appeal, Minister, K.J. George, land compensation, farmers, Mysore
The post ಕೃಷಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ನ್ಯಾಯ ಸಮ್ಮತ ಭೂ ಪರಿಹಾರ ಕೊಡಿಸಿ- ಸಚಿವ ಕೆ.ಜೆ ಜಾರ್ಜ್ ಗೆ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.