ಬೆಂಗಳೂರು,ಜೂನ್,23,2025 (www.justkannada.in): ಮಹಾರಾಷ್ಟ್ರ ಸರ್ಕಾರದ ವೃತ್ತಿಪರ ಕೋರ್ಸ್ ಗಳ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರಾದ ಸಮೀರ್ ಕುಮಾರ್ ಬಿಸ್ವಾಸ್ ನೇತೃತ್ವದ ಉನ್ನತ ಮಟ್ಟದ ನಿಯೋಗ ಸೋಮವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಇಲ್ಲಿನ ಪರೀಕ್ಷಾ ವ್ಯವಸ್ಥೆ ಹಾಗೂ ಸುಧಾರಣಾ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿತು.
ಬಿಸ್ವಾಸ್ ಅವರ ಜತೆ ಮಹಾರಾಷ್ಟ್ರ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕದ ಆಯುಕ್ತರು ಹಾಗೂ ಪ್ರವೇಶ ನಿಯಂತ್ರಣ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಐಎಎಸ್ ಅಧಿಕಾರಿ ದಿಲೀಪ್ ದೇಸಾಯಿ ಅವರು ಕೂಡ ಇದ್ದರು.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕೆಇಎ ಕಾರ್ಯವೈಖರಿ, ಪಾರದರ್ಶಕತೆ ಸಲುವಾಗಿ ಕೈಗೊಂಡ ಹಲವು ಸುಧಾರಣಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ನಿಯೋಗಕ್ಕೆ ವಿವರಿಸಿದರು.
ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸುವುದು, ನಂತರ ಸೀಟು ಹಂಚಿಕೆ ಮಾಡುವುದರ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಅಕ್ರಮ ತಡೆಯಲು ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆಯೂ ವಿವರಿಸಲಾಯಿತು.
ಕೆಇಎ ಅಳವಡಿಸಿಕೊಂಡಿರುವ ಆನ್ ಲೈನ್ ಅರ್ಜಿ ಸಲ್ಲಿಕೆ ಮತ್ತು ದಾಖಲೆ ಪರಿಶೀಲನೆ..
ನಕಲಿ ಅಭ್ಯರ್ಥಿಗಳ ತಡೆಗೆ ಜಾರಿ ಮಾಡಿರುವ ಮುಖ ಚಹರೆ ಪತ್ತೆ ತಂತ್ರಜ್ಞಾನ, ವೆಬ್ ಕಾಸ್ಟಿಂಗ್, ಏಕ ಕಾಲದಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಮಹಾರಾಷ್ಟ್ರದ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.
ಸಿಇಟಿ ವ್ಯವಸ್ಥೆಯನ್ನು ಮೊದಲು ಜಾರಿ ಮಾಡಿದ್ದೇ ಕರ್ನಾಟಕ. ಅದರ ಮಾದರಿಯನ್ನು ಅಧ್ಯಯನ ಮಾಡುವ ಸಲುವಾಗಿ ಮಹಾರಾಷ್ಟ್ರದ ಈ ತಂಡ ರಾಜ್ಯಕ್ಕೆ ಎರಡು ದಿನಗಳ ಭೇಟಿ ಸಲುವಾಗಿ ಬಂದಿದೆ.
Key words: Maharashtra, delegation, appreciation, KEA
The post ಕೆಇಎ ಸುಧಾರಣಾ ಕ್ರಮಗಳಿಗೆ ಮಹಾರಾಷ್ಟ್ರ ನಿಯೋಗ ಮೆಚ್ಚುಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.