ಮೈಸೂರು,ಏಪ್ರಿಲ್,10,2025 (www.justkannada.in): ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಸಿರುವುದನ್ನು ಖಂಡಿಸಿ ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪತ್ರಿಮೆ ಎದುರು ಜಮಾವಣೆಗೊಂಡ ಯುವ ಕಾಂಗ್ರೆಸ್ ಕಾರ್ಯಕತರು ಹೋಮಿನಿ ಕಾರ್ ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಧಿಕ್ಕಾರ ಕೂಗಿದರು. ತಲೆ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು, ಸೋದೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದರ ಏರಿಕೆ ಮಾಡಿ ಜನರ ನೆಮ್ಮದಿ ಕಸಿದಿದ್ದಾರೆ ಎಂದು ಕಿಡಿಕಾರಿ ಮುಖವಾಡ ಧರಿಸಿ ಸಿರಂಜಿನ ಮೂಲಕ ರಕ್ತ ಹೀರುತ್ತಿರುವ ಅಣಕ ಪ್ರದರ್ಶನ ಮಾಡಿ ಧಿಕ್ಕಾರ ಕೂಗಿ ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದುರಾಡಳಿತ ಬೆಲೆ ಏರಿಕೆಗೆ ಕಾರಣವಾಗಿದೆ. ಅಪಾರ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುವಲ್ಲಿ ಆಸಕ್ತಿ ತೋರುತ್ತಿರುವ ಕೇಂದ್ರ ಉದ್ಯಮಿಗಳ ಹಿತಾಸಕ್ತಿ ಕಾಪಾಡುವಲ್ಲಿ ನಿರತವಾಗಿದೆ. ಜನಸಾಮಾನ್ಯರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಈ ವೇಳೆ ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯಾದ್ ಅಬ್ರಾರ್ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಬಡವರ ರಕ್ತ ಹೀರುತ್ತಿದೆ. ಅದನ್ನು ಬಿಜೆಪಿ ವಿರೋಧಿಸಿ ಹೋರಾಟ ಮಾಡಬೇಕು. ಬದಲಾಗಿ ನಾಟಕೀಯವಾಗಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ. ಜನಕ್ರೋಶ ಯಾತ್ರೆ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಜನರಿಗೆ ಹೀಗಾಗಲೇ ಯಾರು ಬೆಲೆ ಏರಿಕೆ ಮಾಡಿದ್ದಾರೆ ಎಂಬುವುದು ಗೊತ್ತಾಗಿದೆ. ಅದಕ್ಕೆ ಕೇಂದ್ರದ ವಿರುದ್ದ ಹೀಗಾಗಲೇ ಬೇಸರ ಹೊರಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಅವರು ಜನಾಕ್ರೋಶ ಯಾತ್ರೆ ಮಾಡುವ ದಿನವೇ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2ರೂ ಹಾಗೂ ಅಡುಗೆ ಅನಿಲದ ದರವನ್ನು 50ರೂ ಏರಿಕೆ ಮಾಡುವ ಮೂಲಕ ರಾಜ್ಯ ಬಿಜೆಪಿ ನಾಯಕರ ಕಪಾಳಮೋಕ್ಷ ಮಾಡಿದೆ. ಬಿಜೆಪಿ ನಾಯಕರು ಈ ಬೆಲೆ ಏರಿಕೆಯನ್ನು ದೇಶದ ಆರ್ಥಿಕತೆಯನ್ನು ಹೆಚ್ಚಿಸುವುದಕ್ಕಾಗಿ ಮಾಡಲಾಗಿದೆ ಎಂದು ಸಮರ್ಥಿಸುತ್ತಾರೆ ಇದು ಅವರಿಗೆ ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದರು.
ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಮಾತನಾಡಿ, ಜನವಿರೋಧಿ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಅಧಿಕಾರಕ್ಕೇರಿದ ಬಳಿಕ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಜನಾಕ್ರೋಶ ರ್ಯಾಲಿ ನಡೆಸಲಿ ಎಂದರು.
ರಾಜ್ಯದಿಂದ ಅತಿಹೆಚ್ಚು ತೆರಿಗೆಯನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರ ಈ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ನಮ್ಮ ತೆರಿಗೆ ಪಾಲನ್ನು ನೀಡದೆ ದ್ವೇಷದ ರಾಜಕಾರಣ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಇಳಿಕೆ ಕಂಡಿದ್ದರು ದೇಶದಲ್ಲಿ ಇಂಧನದ ಬೆಲೆ ಏರಿಕೆ ಮಾಡಿ ಅಧಿಕಾ ಲಾಭ ಪಡೆಯುತ್ತಿರುವ ಮೋದಿ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.
ಕಳೆದ ಹತ್ತು ವರ್ಷಗಳಿಂದ ಬೆಲೆ ಏರಿಗೆ ಬಿಟ್ಟರೆ ಈ ರಾಜ್ಯ ಜನರಿಗೆ ಯಾವುದೇ ರೀತಿಯ ಸವಲತ್ತುಗಳನ್ನು ನೀಡುತ್ತಿಲ್ಲ. ಯುವಕರಿಗೆ ಉದ್ಯೋಗವಕಾಶ ನೀಡದೆ ಸುಮ್ಮನೆ ಕುಳಿತಿದ್ದಾರೆ ಮುಂದಿನ ದಿನಗಳಲ್ಲಿ ಜನರೆ ಇವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ, ನಗರ ಪ್ರಧಾನ ಕಾರ್ಯದರ್ಶಿಗಳಾದ ಲಖನ್, ದಿಲೀಪ್, ಸಲ್ಮಾನ್, ವಿನೋದ್, ಅದ್ನಾನ್, ಕೆ.ಆರ್.ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಹೊಯ್ಸಳ ಮಲ್ಲೇಶ್, ರಾಕೇಶ್, ಕಾರ್ತಿಕ್, ಹೇಮಂತ್, ರಾಜೇಂದ್ರ, ಪವನ್, ವಿನಯ್, ಮೈಸೂರು ಬಸವಣ್ಣ, ಕಾಂಗ್ರೆಸ್ ವಕ್ತಾರ ಕೆ.ಮಹೇಶ್ ಇನ್ನಿತರರು ಹಾಜರಿದ್ದರು.
Key words: mysore, Congress, protests, central government, price hike.
The post ಕೇಂದ್ರ ಸರ್ಕಾರದ ದರ ಏರಿಕೆಗೆ ಖಂಡನೆ: ಯೂಥ್ ಕಾಂಗ್ರೆಸ್ ಪ್ರತಿಭಟನೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.