ಕೋಲಾರ,ಫೆಬ್ರವರಿ,17,2025 (www.justkannada.in): ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ಕಾರ್ಯನಿರತ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಜೂರು ಮಾಡಿದ್ದ 25 ಲಕ್ಷ ರೂ. ಅನುದಾನವು ಸಂಘದ ಕಲ್ಯಾಣನಿಧಿ ಖಾತೆಗೆ ಬಿಡುಗಡೆಯಾಗಿದೆ.
2022 ಫೆಬ್ರವರಿ 17 ರಂದು ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯ ಪದಾಧಿಕಾರಿಗಳ ತಂಡವು ಆಯ್ಕೆಯಾಗಿದ್ದ ಸಂದರ್ಭದಲ್ಲಿ ಪತ್ರಕರ್ತರ ಆಪತ್ಕಾಲೀನ ಸಂದರ್ಭದಲ್ಲಿ ಆಪತ್ ಧನವಾಗಿ ಒಂದು ಕೋಟಿ ರೂ. ಕಲ್ಯಾಣನಿಧಿಯನ್ನು ಸ್ಥಾಪನೆ ಮಾಡುವುದಾಗಿ ಘೋಷಿಸಿದರು.
ಇದಕ್ಕೆ ಪೂರಕವಾಗಿ 2022ರ ಜುಲೈ 1 ರಂದು ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಸಂಘದ ಮನವಿ ಮೇರೆಗೆ ಕಲ್ಯಾಣನಿಧಿಗೆ ಮುಖ್ಯಮಂತ್ರಿಗಳಿಂದ ಅನುದಾನ ದೊರಕಿಸುವ ಭರವಸೆ ನೀಡಿದ್ದರು.
ತಾವು ನೀಡಿದ್ದ ವಾಗ್ದಾನದಂತೆ ಕೆ.ವಿ.ಪ್ರಭಾಕರ್ ಅವರು ಮಾಡಿದ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಲ್ಯಾಣನಿಧಿಗೆ 25 ಲಕ್ಷ ರೂ ಮಂಜೂರು ಮಾಡಿದ್ದರು. ಇದೀಗ ಅನುದಾನದ ಹಣ 25 ಲಕ್ಷ ರೂ. ಕಲ್ಯಾಣನಿಧಿ ಖಾತೆಗೆ ಬಿಡುಗಡೆಯಾಗಿದೆ.
ಇದುವರೆಗೂ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸ್ವಂತ ಸಂಪನ್ಮೂಲ ಹಾಗೂ ಪತ್ರಕರ್ತರಾದ ಕೋಲಾರದ ಪಾ.ಶ್ರೀ.ಅನಂತರಾಮ್, ಮಾಲೂರಿನ ಎಸ್.ವಿ.ಲೋಕೇಶ್, ಬಂಗಾರಪೇಟೆಯ ಎಸ್.ಪಿ.ವೆಂಕಟೇಶ್, ಉದ್ಯಮಿ ಅಬ್ದುಲ್ ಸುಬಾನ್ ಮತ್ತು ಕೋಲಾರ ಪತ್ರಕರ್ತರ ಕ್ರೀಡಾತಂಡದ ದೇಣಿಗೆಯನ್ನು ಒಟ್ಟುಗೂಡಿಸಿ ಇದುವರೆಗೂ 5 ಲಕ್ಷರೂ, ನಿಧಿ ಸಂಗ್ರಹಿಸಿದೆ.
ಅದರೊಂದಿಗೆ ಇದೀಗ ಮುಖ್ಯಮಂತ್ರಿಗಳಿಂದ ಬಿಡುಗಡೆಯಾಗಿರುವ ಅನುದಾನವು ಸೇರಿ ಕಲ್ಯಾಣನಿಧಿಯ ಒಟ್ಟು ಮೊತ್ತ 30 ಲಕ್ಷರೂ.ಗಳಾಗಿದೆ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದ್ದಾರೆ.
ಕೋಲಾರದ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಉದಾರವಾಗಿ 25 ಲಕ್ಷ ರೂ. ಅನುದಾನ ಮಂಜೂರು ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಬಿ.ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್ ಮತ್ತು ವಿ.ಮುನಿರಾಜು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಇದುವರೆಗೂ ಸಂಗ್ರಹವಾಗಿರುವ ಕಲ್ಯಾಣನಿಧಿಯ 30 ಲಕ್ಷ ರೂಗಳನ್ನು ಬ್ಯಾಂಕಿನಲ್ಲಿ ಡಿಪಾಸಿಟ್ ಇರಿಸಿ ಅದರಿಂದ ಬರುವ ಬಡ್ಡಿಯಲ್ಲಿ ಪತ್ರಕರ್ತರ ಆಪತ್ಕಾಲೀನ ಸಂದರ್ಭದಲ್ಲಿ ನೆರವು ನೀಡಲು ಸೋಮವಾರ ನಡೆದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕಲ್ಯಾಣನಿಧಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಕಲ್ಯಾಣನಿಧಿಯ ಸಭೆಯಲ್ಲಿ ಬಿ.ವಿ.ಗೋಪಿನಾಥ್, ಎಸ್.ಕೆ.ಚಂದ್ರಶೇಖರ್, ಎ.ಜಿ.ಸುರೇಶ್ ಕುಮಾರ್, ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಕೆ.ಎಸ್.ಗಣೇಶ್, ವಿ.ಮುನಿರಾಜು ಮತ್ತು ಪಾ.ಶ್ರೀ.ಅನಂತರಾಮ್ ಉಪಸ್ಥಿತರಿದ್ದರು.
Key words: CM, Siddaramaiah, Rs. 25 lakh, released, Kolar Journalists Association
The post ಕೋಲಾರ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ 25 ಲಕ್ಷ ರೂ. ಬಿಡುಗಡೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.