14
July, 2025

A News 365Times Venture

14
Monday
July, 2025

A News 365Times Venture

ಜಾತಿ ಜನಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಸಿಎಂ ಸಿದ್ದರಾಮಯ್ಯ

Date:

ಬೆಂಗಳೂರು, ಜೂನ್ 12,2025 (www.justkannada.in):  ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹತ್ತು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ 1995 ಸೆಕ್ಷನ್ 11 (2) ರಂತೆ ಮರುಸಮೀಕ್ಷೆ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಹಿಂದುಳಿದ ಜಾತಿಗಳ ಶಾಶ್ವತ ಆಯೋಗ ಸಲ್ಲಿಸಿರುವ ವರದಿಯ ಮೇಲೆ ಇಂದು ಅಂತಿಮವಾಗಿ ಚರ್ಚೆ ಮಾಡಲು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಇಂದು ಒಂದೇ ವಿಷಯದ ಮೇಲೆ ಚರ್ಚೆ ಮಾಡಲಾಗಿದೆ ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು 54 ಮಾನದಂಡಗಳನ್ನು ಇಟ್ಟುಕೊಂಡು ಕೈಗೊಂಡು ಮನೆ ಮನೆಗೆ ಭೇಟಿ ನೀಡಿ ಸಲ್ಲಿಸಿರುವ ವರದಿಯಾಗಿದೆ. 2011 ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 6.11 ಕೋಟಿ ಜನರಿದ್ದರು. ಈ ಜನಸಂಖ್ಯೆ 2015 ರ ವೇಳೆಗೆ 6.35 ಕೋಟಿ ಎಂದು ಅಂದಾಜಿಸಲಾಗಿದೆ. 5.98 ಕೋಟಿ ಜನರು ಸಮೀಕ್ಷೆಗೆ ಒಳಪಟ್ಟಿದ್ದಾರೆ. ಸಮೀಕ್ಷೆ ಪ್ರಾರಂಭವಾಗಿದ್ದು 11.4.2015 ರಂದು ಹಾಗೂ  30-5-2015 ರಂದು ಮುಕ್ತಾಯವಾಗಿದೆ. 1.60 ಲಕ್ಷ ಸಿಬ್ಬಂದಿ ಹಾಗೂ 1.33 ಲಕ್ಷ ಉಪಾಧ್ಯಾಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಹೆಚ್.ಡಿ.ಕುಮಾರಸ್ವಾಮಿಯವರು ವರದಿ ಪಡೆಯಲಿಲ್ಲ

ಹಿಂದೆ 2013-2018 ರವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವರದಿ ಮತ್ತು ಅದರ ಶಿಫಾರಸ್ಸುಗಳು ಅಂತಿಮಗೊಂಡಿರಲಿಲ್ಲ. 2018 ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ  ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾದರು. ಪುಟ್ಟರಂಗಶೆಟ್ಟರು ಅವರು  ಹಿಂದುಳಿದ ವರ್ಗಗಳ ಸಚಿವರಾದರು.  ಆ ವೇಳೆಗೆ ವರದಿ ಪೂರ್ಣಗೊಂಡಿತ್ತು.  ಅಂದಿನ ಆಯೋಗದ ಅಧ್ಯಕ್ಷರಾದ ಕಾಂತರಾಜು ಹಾಗೂ ಸದಸ್ಯರು ಸಚಿವ ಪುಟ್ಟರಂಗಶೆಟ್ಟರನ್ನು ಭೇಟಿ ಮಾಡಿ ವರದಿ ಪಡೆಯಬೇಕು ಎಂದು ಕೋರಿದಾಗ  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಒತ್ತಡ ಹಾಕಿ ವರದಿಯನ್ನು ಪಡೆಯಬಾರದು ಎಂದದ್ದರಿಂದ  ಅವರು ವರದಿ ಪಡೆಯಲಿಲ್ಲ.  ಕಾಂತರಾಜು ಅವರ ಅವಧಿ ಮುಗಿದ ನಂತರ ಜಯಪ್ರಕಾಶ್ ಹೆಗಡೆಯವರನ್ನು ಬಿಜೆಪಿ ಸರ್ಕಾರ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಸದಸ್ಯರೂ ಕೂಡ ಬಿಜೆಪಿಯವರೇ ಆಗಿದ್ದರು. ಜಯಪ್ರಕಾಶ್ ಹೆಗಡೆಯವರು ಸಮೀಕ್ಷೆಯ ದತ್ತಾಂಶಗಳ ಆಧಾರದ ಮೇಲೆ  ಶಿಫಾರಸ್ಸು ಮಾಡಿದರು. ಶಿಫಾರಸ್ಸುಗಳನ್ನು 29-2-2024 ರಂದು ಸರ್ಕಾರಕ್ಕೆ ಸಲ್ಲಿಸಿದರು. ಕಾಂತರಾಜು ಅವರು ಕೂಡ ಈ ಸಂದರ್ಭದಲ್ಲಿ ಇದ್ದರು ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಬಂದಿದ್ದರಿಂದ ವರದಿಯ ಬಗ್ಗೆ ಚರ್ಚೆ ಮಾಡಲಾಗಲಿಲ್ಲ. ನಂತರ ನಮ್ಮ ಸರ್ಕಾರ ವರದಿಯನ್ನು ಪಡೆದು 2025 ರಲ್ಲಿ ಸಚಿವ ಸಂಪುಟದಲ್ಲಿ ಮಂಡಿಸಲಾಗಿದೆ.  ಸಚಿವ ಸಂಪುಟದಲ್ಲಿ ಮಂತ್ರಿ ಮಂಡಲದ ಸದಸ್ಯರು ಅಭಿಪ್ರಾಯಗಳನ್ನು ನೀಡಿದ್ದಾರೆ.  ಅಂತಿಮವಾಗಿ ಇಂದು ವರದಿಯ ಬಗ್ಗೆ ಚರ್ಚೆ ಮಾಡಿದೆ ಎಂದರು.

ಪಕ್ಷದ ವರಿಷ್ಠರ ಸಲಹೆ

ಪಕ್ಷದ ವರಿಷ್ಠರು ನನ್ನನ್ನು ಮತ್ತು ಉಪಮುಖ್ಯಮಂತ್ರಿಗಳನ್ನು ಕರೆದು ವರದಿ ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ಕಾನೂನು ಪ್ರಕಾರ ಅನೇಕ ಬದಲಾವಣೆಗಳು ಮತ್ತು ಬೆಳವಣಿಗೆಗಳು ಆಗಿರುತ್ತವೆ ಎಂದು ಸಲಹೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ತಿದ್ದುಪಡಿ ವಿಧೇಯಕ (2014)  ಸೆಕ್ಷನ್ 11 ಕಲಂ (1) ರಂತೆ ರಾಜ್ಯ ಸರ್ಕಾರವು ಯಾವುದೇ ಸಮಯದಲ್ಲಿ  ಈ ಅಧಿನಿಯಮ ಜಾರಿಗೆ ಬಂದ ದಿನಾಂಕದಿಂದ 10 ವರ್ಷಗಳ ಅವಧಿ ಮುಕ್ತಾಯವಾದಾಗ, ಮತ್ತು ಅದರ ನಂತರ ಬರುವ ಪ್ರತಿ 10 ವರ್ಷಗಳು ಮುಕ್ತಾಯವಾಗುವಾಗ ಹಿಂದುಳಿದ ವರ್ಗವಾಗಿ ಉಳಿಯದೇ ಹೋಗಿರುವ ವರ್ಗಗಳನ್ನು  ಪಟ್ಟಿಯನ್ನು ತೆಗೆದುಹಾಕುವುದು ಅಥವಾ ಹೊಸ ಹಿಂದುಳಿದ ವರ್ಗಗಳನ್ನು ಪಟ್ಟಿಗೆ ಸೇರಿಸುವದು ಎಂದು ಸ್ಪಷ್ಟವಾಗಿದೆ ಹೇಳಿದೆ. ಕಲಂ 2 ರಲ್ಲಿ ಹೇಳಿದಂತೆ ಆಯೋಗದ ಅಧ್ಯಕ್ಷರಾದ ಮಧುಸೂದನ ನಾಯಕ್ ಅವರ ಸಲಹೆಯನ್ನೂ ಪಡೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಕಾಯ್ದೆಯ ಸೆಕ್ಷನ್ 11 ರಂತೆ  ಹತ್ತು ವರ್ಷಗಳ ನಂತರ ಸಮೀಕ್ಷೆಯ ವರದಿ ಮಾನ್ಯವಾಗುವುದಿಲ್ಲ. ಜನಸಂಖ್ಯೆ, ಶೈಕ್ಷಣಿಕ ಸಾಮಾಜಿಕ ಬೆಳವಣಿಗೆಗಳು ಆಗಿರುತ್ತವೆ ಎಂದರು.

ಪ್ರಣಾಳಿಕೆಯಲ್ಲಿ ವರದಿ ಜಾರಿ ಮಾಡುವ ಬಗ್ಗೆ ಆಶ್ವಾಸನೆ ನೀಡಲಾಗಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ  ಸಿಎಂ, ಸಾಮಾಜಿಕ ಪರಿಸ್ಥಿತಿಗಳು ಬದಲಾಗಿರುವ ಹಿನ್ನಲೆಯಲ್ಲಿ ಹಾಗೂ ಪಕ್ಷದ ವರಿಷ್ಠರೂ ಮಾರ್ಗದರ್ಶನ ಮಾಡಿದ್ದು, ಇಂದಿನ ಸಚಿವ ಸಂಪುಟದಲ್ಲಿ ಮರುಸಮೀಕ್ಷೆಗೆ ತೀರ್ಮಾನಿಸಲಾಗಿದೆ ಎಂದರು.

ನಿವೃತ್ತ ಅಡ್ವೊಕೇಟ್ ಜನರಲ್ ಮಧುಸೂದನ ನಾಯಕ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾರೆ. ಇನ್ನೂ ಸದಸ್ಯರುಗಳ ನೇಮಕ ಆಗಬೇಕಿದೆ. ಸಮೀಕ್ಷೆ ಕುರಿತು ಚರ್ಚಿಸಲು ಅವರನ್ನು ಸಂಪರ್ಕಿಸಲಾಗುತ್ತದೆ ಎಂದು ಹೇಳಿದರು.

ಆಯೋಗದ ಸಲಹೆ ಪಡೆಯಲಾಗುವುದು

ಹಿಂದುಳಿದ ವರ್ಗಗಳ ಆಯೋಗದ  ಅಧಿನಿಯಮ- 1995ರ ಸೆಕ್ಷನ್ 9  (2) ರಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ, ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಹೇಳಿದೆ. ತಿದ್ದುಪಡಿ ಆಗಿರುವುದು 2014ರಲ್ಲಿ. ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಮೇಲ್ವಿಚಾರಣೆ ಮಾಡಬೇಕು ಎಂದು ಸೆಕ್ಷನ್ (3) ರಲ್ಲಿ ಹೇಳಿದೆ. ಸೆಕ್ಷನ್ 9 (1)ರ ಅನ್ವಯ ಅರ್ಜಿಗಳನ್ನು ಪರಿಶೀಲಿಸಿ ಹಿಂದುಳಿದ ವರ್ಗಗಳಿಗೆ ಸೇರಿಸುವ ಅಥವಾ ತೆಗೆದು ಹಾಕುವ ಅಧಿಕಾರ ಆಯೋಗಕ್ಕೆ ಇರುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ ಹೊಸದಾಗಿ ಸಮೀಕ್ಷೆ ನಡೆಸುವ ಕುರಿತು ಇಂದು ಸಚಿವ ಸಂಪುಟದ ನಿರ್ಧಾರ ಆಗಿದ್ದು ಮುಂದಿನ ದಿನಗಳಲ್ಲಿ ಆಯೋಗದ ಸಲಹೆಯನ್ನೂ ಪಡೆಯಲಾಗುತ್ತದೆ ಎಂದು ತಿಳಿಸಿದರು.

ಕಾನೂನಿನ ಪ್ರಕಾರ ತೀರ್ಮಾನ

ಕಾಂತರಾಜು ನೇತೃತ್ವದ ಆಯೋಗ ಸಮೀಕ್ಷೆ ಮಾಡಿ ಹತ್ತು ವರ್ಷಗಳು ಕಳೆದಿದೆ. ಹತ್ತು ವರ್ಷಗಳಾದ ನಂತರ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಸೆಕ್ಷನ್ 11(1) ರಲ್ಲಿ ಹೇಳಲಾಗಿದ್ದು ಅದರ ಪ್ರಕಾರ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಸಮಾಜೋ ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಹೇಳಿಲ್ಲ.

ಕೇಂದ್ರ ಸರ್ಕಾರ ನಡೆಸಲಿರುವ ಜಾತಿಗಣತಿಗಿಂತ ಈ ಸಮೀಕ್ಷೆ ಹೇಗೆ ಭಿನ್ನವಾಗಿ ಇರುತ್ತದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರವೂ ಎಲ್ಲಿಯೂ ಕೂಡಾ ಸಮಾಜೋ ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಹೇಳಿಲ್ಲ. ನಾವು ಸಮಾಜೋ ಶೈಕ್ಷಣಿಕ ಸಮೀಕ್ಷೆ ನಡೆಸುವಿರಾ ಎಂದು ಕೇಳಿದಾಗಲೂ ಉತ್ತರ ಕೊಡಲಿಲ್ಲ. ಹಾಗಾಗಿ ನಾವು ಮಾಡುತ್ತಿದ್ದೇವೆ. ಸಮಾಜೋ-ಶೈಕ್ಷಣಿಕ ಸಮೀಕ್ಷೆ ವರದಿ ಅನ್ವಯ ಸಾಮಾಜಿಕ ನ್ಯಾಯ ನೀಡಲು ಬದ್ಧವಾಗಿದೆ ಎಂದು ಹೇಳಿದರು. ಸಮೀಕ್ಷೆಯನ್ನು 90 ದಿನಗಳ ಒಳಗೆ ಮಾಡಲು ಆಯೋಗವನ್ನು ಕೋರುತ್ತೇವೆ. ತೆಲಂಗಾಣದಲ್ಲಿ 70 ದಿನಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ.

ಹತ್ತು ವರ್ಷಗಳಲ್ಲಿ ಬದಲಾವಣೆಯಾಗುತ್ತದೆ

ಹತ್ತು ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಾಗಿರುತ್ತದೆ. ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಬದಲಾವಣೆಗಳೂ ಆಗಿರುತ್ತವೆ. ಆದ್ದರಿಂದ ಹತ್ತು ವರ್ಷಗಳ ನಂತರ ಸಮೀಕ್ಷೆ ನಡೆಸಬೇಕೆಂದು ಅಧಿನಿಯಮದಲ್ಲಿ ಹೇಳಿದೆ. ಅದರಂತೆ ಮಾಡುತ್ತಿದ್ದೇವೆ. ಈ ಕುರಿತು ಹೈಕಮಾಂಡ್ ಸಲಹೆ ನೀಡಿತ್ತು ಅಷ್ಟೇ. ನಾವು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಈ ಹಿಂದಿನ ಸಮೀಕ್ಷೆ ಕುರಿತು ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಗಳಿಂದ  ಆಕ್ಷೇಪಣೆ ಇತ್ತು.  ಈ ಸಮೀಕ್ಷೆಯಲ್ಲಿ ಆ ಸಮುದಾಯಗಳಿಗೆ ಯಾವ ರೀತಿ ಭರವಸೆ ನೀಡಿರುವಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಸೆಕ್ಷನ್ 11 ರಂತೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು. vtu

Key words: Cabinet, decision, re –survey, caste census, CM Siddaramaiah

The post ಜಾತಿ ಜನಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಸಿಎಂ ಸಿದ್ದರಾಮಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಬಹಭಾಷಾ ಹಿರಿಯ ನಟಿ ಬಿ.ಸರೋಜಾ ದೇವಿ ಇನ್ನಿಲ್ಲ

ಬೆಂಗಳೂರು,ಜುಲೈ,14,2025 (www.justkannada.in): ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿರುವ ಬಹುಭಾಷಾ ಹಿರಿಯ ನಟಿ...

ಜು.19 ರಂದು ಮೈಸೂರಿನಲ್ಲಿ ಬೃಹತ್ ಸಮಾರಂಭ: ಸಕಲ ಸಿದ್ದತೆಗೆ ಸಚಿವ ಹೆಚ್.ಸಿ.ಮಹದೇವಪ್ಪ ಸೂಚನೆ

ಮೈಸೂರು,ಜುಲೈ,12,2025 (www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜುಲೈ19 ರಂದು ಮಹಾರಾಜ...

ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದು: ಸೈನ್ಯ ,ಅಂತರಿಕ್ಷದಲ್ಲೂ ಕೆಲಸ ಪ್ರಗತಿಯ ಪ್ರತೀಕ: ಸಿ.ಎಂ ಸಿದ್ದರಾಮಯ್ಯ

ಬೆಂಗಳೂರು ಜುಲೈ,13,2025 (www.justkannada.in):  ಶೇ100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು,...

ಸರ್ಕಾರದಲ್ಲಿ ಮೋಡ ಕವಿದ ವಾತಾವರಣ: ಯಾವಾಗ ಗುಡುಗು ಸಿಡಿಲು ಬರುತ್ತೋ ಗೊತ್ತಿಲ್ಲ-ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,12,2025 (www.justkannada.in): ಸರ್ಕಾರದಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ ....