ಮೈಸೂರು, ಜೂನ್ 28, 2025 (www.justkannada.in): ಮಾಜಿ ಪ್ರಧಾನಿ ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ಸಮರ್ಥನೆ ಮಾಡುತ್ತದೆಯೇ ಅಥವಾ ವಿರೋಧ ಮಾಡುತ್ತದೆಯೇ ಎಂದು ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ತುರ್ತು ಪರಿಸ್ಥಿತಿ ಹೇರಿಕೆಗೆ 50 ವರ್ಷ ಸಂದ ಪ್ರಯುಕ್ತ, ಮೈಸೂರಿನ ವಿಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್.ಅಶೋಕ್ ಮಾತನಾಡಿದರು.
ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ, ಜನರ ಮುಂದೆ ಕ್ಷಮೆ ಕೇಳಬೇಕು. ತುರ್ತು ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರನ್ನು ಜೈಲಿಗಟ್ಟಿದ್ದರು. ಜೈಲಿನಲ್ಲಿ ಅನೇಕ ಹೋರಾಟಗಾರರು ಸತ್ತಿದ್ದರು. ಇವ್ಯಾವುದಕ್ಕೂ ಕಾಂಗ್ರೆಸ್ ಈವರೆಗೆ ಉತ್ತರ ನೀಡಿಲ್ಲ. ತುರ್ತು ಪರಿಸ್ಥಿತಿಯನ್ನು ಬೆಂಬಲಿಸುತ್ತಾರೆಯೇ ಎಂದಾದರೂ ಸ್ಪಷ್ಟನೆ ನೀಡಲಿ. ಏನೂ ಹೇಳದೆ ಕಳ್ಳಾಟ ಆಡುವುದು ಸರಿಯಲ್ಲ. ಈ ಐವತ್ತು ವರ್ಷದಲ್ಲಿ ತುರ್ತು ಪರಿಸ್ಥಿತಿ ತಪ್ಪು ಎಂದು ಯಾವುದೇ ಕಾಂಗ್ರೆಸ್ ನಾಯಕರು ಹೇಳಿಲ್ಲ ಎಂದರು.
ಇಂದಿರಾಗಾಂಧಿ ಚುನಾವಣೆಯಲ್ಲಿ ಮೋಸ ಮಾಡಿದ್ದಾರೆ ಎಂದು ಕೋರ್ಟ್ ನಲ್ಲಿ ತೀರ್ಪು ಬಂದು ಸದಸ್ಯತ್ವ ರದ್ದಾಗಿತ್ತು. ಅದಾದ ನಂತರ ಇಂದಿರಾಗಾಂಧಿ ಪ್ರಧಾನಿ ಸ್ಥಾನ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದರು. ಆದರೆ ಕಾಂಗ್ರೆಸ್ ನಾಯಕರು, ಇಂಡಿಯಾ ಎಂದರೆ ಇಂದಿರಾ ಎನ್ನುವಂತಹ ಪರಿಸ್ಥಿತಿಯನ್ನು ತಂದಿದ್ದರು. ನಮ್ಮಲ್ಲಿ ಸಂವಿಧಾನಕ್ಕಿಂತ ಬೇರಾವುದೂ ದೊಡ್ಡದಲ್ಲ ಎಂದು ಗೊತ್ತಾದಾಗ ಇಂದಿರಾಗಾಂಧಿ ಇಂತಹ ಕೆಲಸ ಮಾಡಿದರು. ಅದಕ್ಕಾಗಿ ಸಂವಿಧಾನ ತಿದ್ದುಪಡಿಯನ್ನೂ ಮಾಡಿಬಿಟ್ಟರು ಎಂದು ದೂರಿದರು.
ಆ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ ಮೊದಲಾದ ನಾಯಕರನ್ನು ಜೈಲಿಗೆ ಹಾಕಲಾಗಿತ್ತು. ನಾನು ಕೂಡ ಬೆಂಗಳೂರಿನ ಜೈಲಿನಲ್ಲಿ ಒಂದು ತಿಂಗಳು ಇದ್ದೆ. ಆಗ ಇಂದಿರಾ ಎಂದು ಹೇಳಿದರೆ ಪೊಲೀಸರು ಬಂಧಿಸುತ್ತಿದ್ದರು. ನನ್ನನ್ನು ಹಾಗೂ ತಮ್ಮನನ್ನು ಹಾಗೂ ಶಾಸಕ ಸುರೇಶ್‌ಕುಮಾರ್ ಅವರನ್ನು ಪೊಲೀಸರು ಬಂಧಿಸಿ ಹೊಡೆದಿದ್ದರು. ನಾನು ಆಗ ಕಾಲೇಜು ವಿದ್ಯಾರ್ಥಿಯಾಗಿದ್ದೆ ಎಂದು ನೆನಪಿಸಿಕೊಂಡರು.
ದೇಶಪ್ರೇಮಿ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಬೇಕು. ಆಗ ಪ್ರಗತಿಪರರು ಏನು ಮಾಡುತ್ತಿದ್ದರು ಎಂದು ಉತ್ತರಿಸಬೇಕು. ನಾವು ಸ್ವಾತಂತ್ರ್ಯ ಹೋರಾಟ ಮಾಡಿದ್ದೇವೆಂದು ಹೇಳಿಕೊಳ್ಳುವ ಇವರು ಯಾರೂ ಹೋರಾಟ ಮಾಡಿಲ್ಲ. ಆಗಿನ ಕಾಂಗ್ರೆಸ್ಸೇ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ. ಈಗಿನದ್ದು ನಕಲಿ ಕಾಂಗ್ರೆಸ್. ಇವರೆಲ್ಲರೂ ಒಂದು ಕುಟುಂಬಕ್ಕೆ ನಿಷ್ಠರಾಗಿದ್ದಾರೆ. ಆ ವಂಶಕ್ಕೆ ಸಲಾಂ ಹೊಡೆಯುವುದು ಈಗಿನ ನಾಯಕರಿಗೆ ರೂಢಿಯಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಅಪಾಯಕಾರಿ, ಆದರೆ ಅಧಿಕಾರದಲ್ಲಿ ಇಲ್ಲವಾದರೆ ಇನ್ನಷ್ಟು ಅಪಾಯಕಾರಿ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಎಂದು ಹೇಳುತ್ತಾರೆ. ಆದರೆ ಇದೇ ಕಾಂಗ್ರೆಸ್ ನವರು ತುರ್ತು ಪರಿಸ್ಥಿತಿ ಹೇರಿದ್ದರು. ಆಗಿನಂತೆ ಈಗ ಯಾವ ಪತ್ರಿಕೆ ಮುಚ್ಚಿದ್ದಾರೆ, ನ್ಯಾಯಾಂಗದ ಮೇಲೆ ಎಲ್ಲಿ ಒತ್ತಡ ಹೇರಿದ್ದಾರೆ, ಯಾವಾಗ ಚುನಾವಣೆ ಮುಂದೂಡಿದ್ದಾರೆ ಎಂದು ತಿಳಿಸಲಿ ಎಂದು ಟಾಂಗ್ ಕೊಟ್ಟರು.
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಇವರ ಮಕ್ಕಳು ಚುನಾವಣೆಯಲ್ಲಿ ನಿಲ್ಲುವುದನ್ನು ಯಾರೂ ತಡೆದಿಲ್ಲ. ವಿದೇಶಕ್ಕೆ ಹೋಗಿ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡುವುದನ್ನೂ ಯಾರೂ ತಡೆದಿಲ್ಲ. ಪತ್ರಿಕೆಯಲ್ಲಿ ಏನು ಬರೆಯಬೇಕೆಂದು ಆಗ ಪೊಲೀಸರು ತೀರ್ಮಾನ ಮಾಡುತ್ತಿದ್ದರು. ಈಗ ಅಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದರು.
ಬಿಜೆಪಿಯಿಂದ ಸಂವಿಧಾನ ಬದಲಾಗುತ್ತದೆ ಎಂದು ಟೀಕಿಸುತ್ತಾರೆ. ಆದರೆ ತುರ್ತು ಪರಿಸ್ಥಿತಿಗಾಗಿ ಕಾಂಗ್ರೆಸ್‌ನವರೇ ಸಂವಿಧಾನ ತಿದ್ದುಪಡಿ ಮಾಡಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಕಾಂಗ್ರೆಸ್ ನವರ ಮನೆ ಆಸ್ತಿ ಎಂದುಕೊಂಡಿದ್ದಾರೆ. ಅಂಬೇಡ್ಕರ್ ಸತ್ತಾಗ ಅವರ ಸಮಾಧಿಗೆ ಜಾಗ ನೀಡಲಿಲ್ಲ. ಇಂದಿರಾಗಾಂಧಿ ಕುಟುಂಬದವರು ಸತ್ತಾಗ ಮಾತ್ರ ಸಮಾಧಿಗೆ ಜಾಗ ನೀಡಿದ್ದರು. ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಂಬೇಡ್ಕರ್ ಗೆ ಭಾರತರತ್ನ ನೀಡಲಾಯಿತು. ಈ ಎಲ್ಲ ವಿಷಯಗಳನ್ನು ಜನರಿಗೆ ತಿಳಿಸಬೇಕು ಎಂದರು.
ಸೆಪ್ಟೆಂಬರ್ ನಲ್ಲಿ ಸಿಎಂ ಕುರ್ಚಿ ಬದಲಾಗಲಿದೆ. ಕ್ರಾಂತಿ ನಡೆಯಲಿದೆ ಎಂದು ಸಚಿವರೇ ಹೇಳುತ್ತಿದ್ದು, ಇಡೀ ಕಾಂಗ್ರೆಸ್ ಒಡೆದ ಮನೆಯಾಗಿದೆ. ಈ ಬಾರಿಯ ದಸರಾ ಆಚರಣೆಯನ್ನು ಹೊಸ ಮುಖ್ಯಮಂತ್ರಿ ಮಾಡಲಿದ್ದಾರೆ ಎಂದರು.
Key words: emergency, opposition, R. Ashok, Congress
The post ತುರ್ತು ಪರಿಸ್ಥಿತಿ ಸಮರ್ಥನೆಯೋ, ವಿರೋಧವೋ ಸ್ಪಷ್ಟಪಡಿಸಿ-ಕಾಂಗ್ರೆಸ್ ಗೆ ಆರ್.ಅಶೋಕ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.