ಬೆಂಗಳೂರು,ಜೂನ್,18,2025 (www.justkannada.in): ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಅಮುಲ್ ಉತ್ಪನ್ನ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ನಂದಿನಿ ಬ್ರ್ಯಾಂಡ್ ಸರ್ವನಾಶ ಮಾಡಲು ಸಿಎಂ ಸಿದ್ದರಾಮಯ್ಯ ಶಪಥ ಮಾಡಿದಂತಿದೆ ಎಂದು ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಆರ್.ಅಶೋಕ್, ನಂದಿನಿ ಬ್ರ್ಯಾಂಡ್ ಹೆಸರನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಮೇಲೆ ನಂದಿನಿ ಬ್ರ್ಯಾಂಡ್ ಅನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಂದು ಕಡೆ ಹಾಲು ಉತ್ಪಾದಕರಿಗೆ ನೂರಾರು ಕೋಟಿ ಬಾಕಿ ಉಳಿಸಿಕೊಂಡಿದೆ. ಮತ್ತೊಂದು ಕಡೆ ಅತ್ಯಂತ ಬೇಡಿಕೆ ಇರುವ ರೆಡಿ ಮೇಡ್ ಇಡ್ಲಿ, ದೋಸೆ ಹಿಟ್ಟು, ವೇ ಪ್ರೋಟೀನ್ ಸೇರಿದಂತೆ ಅನೇಕ ಹೊಸ ಉತ್ಪನ್ನಗಳ ಮೂಲಕ ನಂದಿನಿ ಬ್ರ್ಯಾಂಡ್ ನ ಮಾರುಕಟ್ಟೆ ವಿಸ್ತರಿಸಲು ಅತ್ಯಂತ ಉತ್ಸಾಹ ಮತ್ತು ಬದ್ಧತೆ ತೋರಿದ್ದ ದಕ್ಷ ಅಧಿಕಾರಿ ಕೆಎಂಎಫ್ ಎಂಡಿ ಎಂ.ಕೆ.ಜಗದೀಶ್ ಅವರನ್ನ ದಿಢೀರನೆ ವರ್ಗಾವಣೆ ಮಾಡಿತ್ತು.
ಈಗ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಡೈರಿ ಮಳಿಗೆಗಳನ್ನು ಸ್ಥಾಪಿಸಲು ಕರೆದಿದ್ದ ಟೆಂಡರ್ ನಲ್ಲಿ ಭಾಗವಹಿಸಲೂ ಆಸಕ್ತಿ ತೋರಿಲ್ಲ. ನಮ್ಮ ನಾಡಿನ ರೈತರು, ನಿಷ್ಠಾವಂತ ಗ್ರಾಹಕರು ಕಷ್ಟಪಟ್ಟು ಕಟ್ಟಿರುವ ನಂದಿನಿ ಬ್ರ್ಯಾಂಡ್ ಅನ್ನ ಸರ್ವನಾಶ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಶಪಥ ಮಾಡಿದಂತಿದೆ ಎಂದು ಆರ್.ಅಶೋಕ್ ಹರಿಹಾಯ್ದಿದ್ದಾರೆ.
Key words: CM Siddaramaiah, destroy, Nandini brand, R. Ashok
The post ನಂದಿನಿ ಬ್ರ್ಯಾಂಡ್ ಸರ್ವನಾಶ ಮಾಡಲು ಸಿಎಂ ಸಿದ್ದರಾಮಯ್ಯ ಶಪಥ ಮಾಡಿದಂತಿದೆ- ಆರ್.ಅಶೋಕ್ ಕಿಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.